Tuesday, September 10, 2024
Homeಸುದ್ದಿಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ಎಸ್ಐಟಿ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಆ.28ರಂದು 'ಚಲೋ ಬೆಳ್ತಂಗಡಿ' -...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ಎಸ್ಐಟಿ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಆ.28ರಂದು ‘ಚಲೋ ಬೆಳ್ತಂಗಡಿ’ – ಕಾರ್ಮಿಕ‌ ಮುಖಂಡ ಬಿ.ಎಂ. ಭಟ್

ಉಡುಪಿ, ಆ.19: ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಎಸ್ ಐಟಿ ತನಿಖೆಗೆ ಒಪ್ಪಿಸಿ, ನೈಜ ಅಪರಾಧಿಗಳನ್ನು ಪತ್ತೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯದ ಜನಪರ ಸಂಘಟನೆಗಳು ಹಾಗೂ ರಾಜ್ಯದ ಹಲವಾರು ಸಮಾನ ಮನಸ್ಕ, ಸಂಘಟನೆಗಳು ಒಂದಾಗಿ ಇದೇ ಆಗಸ್ಟ್ 28ರಂದು ‘ಚಲೋ ಬೆಳ್ತಂಗಡಿ’ ಮಹಾಧರಣಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಮುಖಂಡ ಬಿ.ಎಂ. ಭಟ್ ಹೇಳಿದ್ರು.


ಉಡುಪಿಯ ಎಲ್ ಐಸಿ ಕಟ್ಟಡದಲ್ಲಿ‌ ಇಂದು‌ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಜನಪರ ಸಂಘಟನೆಗಳ ಕಾರ್ಯಕರ್ತರು ಬೆಳ್ತಂಗಡಿಗೆ ಆಗಮಿಸಲಿದ್ದಾರೆ. ರಾಜ್ಯದ 31 ಜಿಲ್ಲೆಯ ಎಲ್ಲಾ ತಾಲೂಕುಗಳಿಂದಲೂ ದೊಡ್ಡ ಸಂಖ್ಯೆಯಲ್ಲಿ ಜನರು ಬೆಳ್ತಂಗಡಿ ಚಲೋದಲ್ಲಿ ಭಾಗವಹಿಸಲಿದ್ದಾರೆ.

ಅಂದು ಬೆಳಿಗ್ಗೆ 10 ಗಂಟೆಗೆ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಮಹಾಧರಣಿ ಸಮಾವೇಶ ನಡೆಯಲಿದೆ ಎಂದರು.

ಧರ್ಮಸ್ಥಳ, ಉಜಿರೆ ಭಾಗದಲ್ಲಿ ದಶಕಗಳಿಂದ ನಡೆದಿರುವ ನೂರಾರು ಅಸಹಜ ಸಾವುಗಳು ಸಂಭವಿಸಿವೆ. ಕೆಲವೊಂದು ಕೊಲೆಗಳು ಪತ್ತೆಯಾಗದೆ ಮುಚ್ಚಿ ಹೋಗಿವೆ. ಈ ಮಾಹಿತಿ ಜನತೆಯಲ್ಲಿ ಭೀತಿಗೆ ಕಾರಣವಾಗಿದೆ.

ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂಬ ಪ್ರಬಲ ಅನುಮಾನ ಇದೆ. ಸತ್ಯ ಸಂಗತಿ ಬಹಿರಂಗಗೊಳ್ಳುವ ಅಗತ್ಯವಿದೆ. ಅದಕ್ಕಾಗಿ ಅಸಹಜ ಸಾವು ಹಾಗೂ ಪತ್ತೆಯಾಗದ ಕೊಲೆ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ದಲಿತ ಚಿಂತಕ ಜಯನ್ ಮಲ್ಪೆ, ಕಾರ್ಮಿಕ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಶಶಿಧರ್ ಗೊಲ್ಲ, ಕವಿರಾಜ್ ಎಸ್. ಭಾಗವಹಿಸಿದ್ದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News