ಕಾಪು: ಅಕ್ರಮವಾಗಿ ಮನೆಗೆ ಪ್ರವೇಶಿಸಿ ತಾಯಿಗೆ ಬೆದರಿಕೆ; ಮನನೊಂದ ಮಗ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಕಾಪು, ಏ.16: ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ಮೂಡುಬೆಳ್ಳೆಯ ದಂಪತಿ ಉಳಿಯಾರಗೋಳಿಯ ಮನೆಯೊಂದಕ್ಕೆ ಅಕ್ರಮ ಪ್ರವೇಶ ಮಾಡಿ ಗೃಹಿಣಿಯನ್ನು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದು, ಇದರಿಂದ ಮನನೊಂದು ಅವರ ಮಗ ವಿಷ ಸೇವಿಸಿದ ಘಟನೆ ಎ. 11ರಂದು ರಾತ್ರಿ ನಡೆದಿದೆ.

ಮೂಡುಬೆಳ್ಳೆ ನಿವಾಸಿಗಳಾದ ಸುರೇಶ್‌ ಮತ್ತು ಅವರ ಪತ್ನಿ ಜತೆಯಾಗಿ ಉಳಿಯಾರಗೋಳಿ ಗ್ರಾಮದ ಸುನಿತಾ ಎಂಬವರ ಮನೆಗೆ ಅಕ್ರಮ ಪ್ರವೇಶ ಮಾಡಿ, ಮಗನ ಪ್ರೀತಿಯ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದರು. ಈ ವಿಚಾರವನ್ನು ಸುನಿತಾ ಅವರು ಕೆಲಸಕ್ಕೆ ಹೋಗಿದ್ದ ತನ್ನ ಮಗ ಸನತ್‌ನಿಗೆ ತಿಳಿಸಿದ್ದರು.

ಮನೆಗೆ ಆಗಮಿಸಿದ ಸನತ್‌ ಘಟನೆಯಿಂದ ಮನನೊಂದು ವಿಷ ಸೇವಿಸಿದ್ದು, ಹೊಟ್ಟೆ ನೋವಿನಿಂದ ನರಳಾಡುತ್ತಿದ್ದವನನ್ನು ಚಿಕಿತ್ಸೆ ಬಗ್ಗೆ ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಅನಂತರ ಅಲ್ಲಿನ ವೈದ್ಯರ ಸೂಚನೆಯಂತೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನ ತಾಯಿ ನೀಡಿದ ದೂರಿನ ಮೇರೆಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

You cannot copy content from Baravanige News

Scroll to Top