ಉಡುಪಿ, ಅ 13: ವಯೋವೃದ್ಧೆಯ ಚಿನ್ನದ ಸರ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಲಿಗೆ ಮಾಡಿದ ಚಿನ್ನದ ಸರದೊಂದಿಗೆ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಹಿರಿಯಡ್ಕದಲ್ಲಿ ನಡೆದಿದೆ.
ಪೆರ್ಡೂರಿನ ಉಲ್ಲಾಸ್ ವಿಶ್ವನಾಥ್ ಶೆಟ್ಟಿ(48) ಬಂಧಿತ ಆರೋಪಿ.
ಈತನಿಂದ 25 ಗ್ರಾಂ ತೂಕದ 88,000ರೂ. ಮೌಲ್ಯದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ನೆರೆಮನೆಯವಾಗಿದ್ದು, ಕೃತ್ಯ ನಡೆಸಿದ ದಿನದಂದು ವಯೋವೃದ್ಧೆಯೂ ಮನೆಯ ಹೊರಗೆ ಪಾತ್ರೆ ತೊಳೆಯುತ್ತಿದ್ದ ವೇಳೆ ಹಿಂಬದಿಯಿಂದ ಬಂದು, ವೃದ್ಧೆಯ ಮುಖಕ್ಕೆ ಅವರದೇ ಸೀರೆಯ ಸೆರಗನ್ನು ಮುಸುಕು ಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಈ ಕುರಿತಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಕಾರ್ಯಾಚರಣೆ ನಡೆಸಿದ ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ. ನೇತೃತ್ವದ ತಂಡ ಆರೋಪಿ ಉಲ್ಲಾಸ್ ನನ್ನು ಪೆರ್ಡೂರಿನಲ್ಲಿ ಬಂಧಿಸಿದ್ದಾರೆ.
ಇನ್ನು ಅನಾರೋಗ್ಯದಿಂದ ಬಳಲುತ್ತಿರುವ ಆರೋಪಿ, ಚಿಕಿತ್ಸೆ ಪಡೆಯುವ ಉದ್ದೇಶದಿಂದ ಹಣಕ್ಕಾಗಿ ಈ ಕೃತ್ಯ ಎಸಗಿರುವುದಾಗಿ ತನಿಖೆ ವೇಳೆ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.