ಉಡುಪಿ: ತಾಯಿ ಮಗಳ ಸಾಹಸ- ಬೈಕ್‌‌ನಲ್ಲಿ ಜಗತ್ತಿನ ತುತ್ತ ತುದಿಗೆ ಪ್ರಯಾಣ

ಉಡುಪಿ, ಸೆ 21: ಕಳೆದ ಬಾರಿ ಜಗತ್ತಿನ ಎರಡನೇ ಎತ್ತರದ ಪ್ರದೇಶ ಖರ್ದುಂಗ್ಲಾ ಪಾಸ್ ಗೆ ಬೈಕ್ ಮೂಲಕ ಹೋಗಿ ಸುದ್ದಿ ಮಾಡಿದ್ದ ಕುಂದಾಪುರ ಮೂಲದ ವಿಲ್ಮಾ ಕ್ರಾಸ್ತಾ ಕರ್ವಾಲೋ ಈ ಬಾರಿ ಜಗತ್ತಿನ ಅತಿ ಎತ್ತರದ ಪ್ರದೇಶ ಉಮ್ಲಿಂಗ್ಲಾ ಪಾಸ್ ಗೆ ಹೋಗುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ವಿಶೇಷ ಎಂದರೆ 55 ರ ಹರೆಯದ ವಿಲ್ಮಾ ಈ ಬಾರಿ ತಮ್ಮ ಮಗಳ ಜೊತೆಯೇ ಈ ಸಾಧನೆ ಮಾಡಿದ್ದಾರೆ.

ಸಮುದ್ರಮಟ್ಟಕ್ಕಿಂತ ಸುಮಾರು 19024 ಅಡಿ ಎತ್ತರದ ಈ ಪ್ರದೇಶ ಇಂಡೋ ಚೈನಾ ಬಾರ್ಡರ್ ಗೆ ತಾಗಿಕೊಂಡಿದೆ.

ಲಡಾಕ್ ಪ್ರಾಂತ್ಯದ ಈ ಪ್ರದೇಶ ಬೆಟ್ಟಗುಡ್ಡಗಳಿಂದ ತುಂಬಿದ್ದು ಸಾಹಸಿ ರೈಡರ್ ಗಳಿಗೆ ಮಾತ್ರ ಇಲ್ಲಿಗೆ ತಲುಪಲು ಸಾಧ್ಯ. ಐವತ್ತೈದರ ಹರೆಯದಲ್ಲೂ ತಮ್ಮ ಮಗಳ ಜೊತೆ ಹಲವು ಸವಾಲುಗಳನ್ನು ಮೆಟ್ಟಿ ನಿಂತು ಈ ಯಾತ್ರೆಯನ್ನು ಬೈಕ್ ಮುಲಕ ಯಶಸ್ವಿಯಾಗಿ ಪೂರೈಸಿದ್ದಾರೆ.ಲಡಾಕ್ ಗೆ ಒಂದು ಬಾರಿ ರೈಡ್ ಮಾಡಿ ಹೋಗುವುದೇ ಕಷ್ಟ. ಅಂಥದ್ದರಲ್ಲಿ ಇದು ಲಡಾಖ್ ಗೆ ವಿಲ್ಮಾ ಅವರದ್ದು ಮೂರನೇ ಬೈಕ್ ರೈಡ್. ತಮ್ಮ ಮಗಳು ಚೆರಿಶ್ ಕರ್ವಾಲೋ ರಿಂದಾಗಿ ಈ ಸಾಹಸಯಾತ್ರೆ ಸಾಧ್ಯವಾಗಿದೆ ಅಂತಾರೆ ಅವರು.

ಯೋಗ, ಪ್ರಾಣಾಯಾಮ, ಧ್ಯಾನ ಮತ್ತಿತರ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಇವರು ವೃತ್ತಿಯಲ್ಲಿ ಕಾರ್ಪೊರೇಟರ್ ಟ್ರೈನರ್. ಫಿಟ್ನೆಸ್ ಕಾಯ್ದಿರಿಸಿಕೊಂಡು, ಸಾಹಸಗಳ ಮೂಲಕ ಇತರರಿಗೆ ಸ್ಪೂರ್ತಿಯಾಗಿರುವ ವಿಲ್ಮಾ, ತಮ್ಮ ಈ ಸಾಹಸ ಯಾತ್ರೆಯನ್ನು ಸವಾಲಾಗಿ ತೆಗೆದುಕೊಂಡು ಈ ಸಾಧನೆ ಮಾಡಿದ್ದಾರೆ.

ಭವಿಷ್ಯದಲ್ಲಿ ಇನ್ನಷ್ಟು ಸಾಹಸ ಯಾತ್ರೆಗಳ ಮೂಲಕ ಸ್ಪೂರ್ತಿ ನೀಡುವ ಆಸೆ ಹೊಂದಿದ್ದು, ಸದ್ಯ ಕುಟುಂಬದ ಜೊತೆಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

Scroll to Top