ಉಡುಪಿ: 43 ಗಂಟೆಗಳ ಕಾಲ ಸಮುದ್ರದಲ್ಲಿ ಈಜುತ್ತಾ ಜೀವ ಉಳಿಸಿಕೊಂಡ ಮೀನುಗಾರ

ಉಡುಪಿ : ಬೋಟ್ನಿಂದ ಆಯತಪ್ಪಿ ಅರಬ್ಬಿ ಸಮುದ್ರಕ್ಕೆ ಬಿದ್ದಿದ್ದ ಮೀನುಗಾರನನ್ನು ಬೈಂದೂರು ತಾಲೂಕಿನ ಗಂಗೊಳ್ಳಿ ಮೂಲದ ಸಾಗರ್ ಬೋಟ್ನ ಮೀನುಗಾರು 43 ಗಂಟೆಗಳ ಬಳಿಕ ರಕ್ಷಣೆ ಮಾಡಿದ್ದಾರೆ.

ತಮಿಳುನಾಡಿನ 8 ಜನರ ತಂಡ ಆಳ ಸಮುದ್ರ ಮೀನುಗಾರಿಕೆಗೆ ಅರಬ್ಬಿ ಸಮುದ್ರಕ್ಕೆ ಇಳಿದಿದ್ದರು. ಈ ತಂಡದಲ್ಲಿ ಇದ್ದ ಮುರುಘನ್ (25) ಎಂಬ ಮೀನುಗಾರ ಶನಿವಾರ ರಾತ್ರಿ ಮೂತ್ರ ವಿಸರ್ಜನೆಗೆ ಬೋಟ್ನ ಅಂಚಿಗೆ ಹೋಗುತ್ತಾನೆ. ಈ ವೇಳೆ ಜೋರಾದ ಗಾಳಿಗೆ ಮುರುಘನ್ ಆಯತಪ್ಪಿ ಸಮುದ್ರದಲ್ಲಿ ಬೀಳುತ್ತಾನೆ.

ಮುರುಘನ್ ಸಮುದ್ರದಲ್ಲಿ ಬಿದ್ದಿರುವುದು ಉಳಿದ ಮೀನುಗಾರರಿಗೆ ತಿಳಿದಿರುವುದಿಲ್ಲ. ಎಷ್ಟು ಹೊತ್ತಾದರೂ ಮುರುಘನ್ ಒಳಗಡೆ ಬಾರದಿದ್ದರಿಂದ ಅನುಮಾನಗೊಂಡ ಉಳಿದ ಮೀನುಗಾರರು ಸಮುದ್ರದಲ್ಲಿ ಮುರುಘನನ್ನು ಹುಡುಕಲು ಆರಂಭಿಸುತ್ತಾರೆ. ಆದರೆ ಎರಡು ದಿನ ಕಳೆದರೂ ಮುರುಘನ್ ಪತ್ತೆಯಾಗಲಿಲ್ಲ. ಕೊನೆಗೆ ತಮಿಳುನಾಡು ಮೀನುಗಾರರು ಮುರುಘನ್ ಮೃತಪಟ್ಟಿದ್ದಾನೆ ಎಂದು ಮಾಲಿಕನಿಗೆ ತಿಳಿಸುತ್ತಾರೆ.

ಆದರೆ ಮುರುಘನ್ ಜೀವ ಉಳಿಸಿಕೊಳ್ಳಲು ಸಮುದ್ರದಲ್ಲೇ ಈಜುತ್ತಿರುತ್ತಾನೆ. ಇಂದು (ನ.10) ರಂದು ಗಂಗೊಳ್ಳಿ ಮೂಲದ ಸಾಗರ್ ಬೋಟ್ನ ಮೀನುಗಾರು, ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯುತ್ತಾರೆ. ಗಂಗೊಳ್ಳಿಯಿಂದ ಸುಮಾರು 14 ನಾಟಿಕಲ್ ಮೈಲ್ ದೂರ ಹೋದಾಗ ಮುರುಘನ್ನನ್ನು ಕಾಣುತ್ತಾನೆ. ಗಂಗೊಳ್ಳಿ ಮೀನುಗಾರರು ಮೀನು ಅಂದುಕೊಂಡು ಮುರುಘನ್ ಬಳಿ ಹೋದಾಗ, ಆಶ್ಚರ್ಯವಾಗುತ್ತದೆ. ಮೀನಲ್ಲ ಮನುಷ್ಯನೆಂದು ತಿಳಿಯುತ್ತದೆ.

ಕೊನೆಗೆ ಗಂಗೊಳ್ಳಿ ಮೀನುಗಾರರು ಮುರುಘನ್ನನ್ನು ರಕ್ಷಣೆ ಮಾಡುತ್ತಾರೆ. ಜೀವ ಉಳಿಸಿಕೊಳ್ಳಲು ಸತತ 43 ಗಂಟೆಗಳ ಕಾಲ ಸಮುದ್ರದಲ್ಲಿ ಈಜಿ ಮುರುಘನ್ ನಿತ್ರಾಣಗೊಂಡಿದ್ದನು. ಸರಿಸುಮಾರು ಎರಡು ದಿನಗಳ ಕಾಲ ನಿರಂತರವಾಗಿ ಈಜಿ ಬಸವಳಿದಿದ್ದ ಮೀನುಗಾರ ಮುರುಘನ್ನನ್ನು ರಕ್ಷಣೆ ಮಾಡಲಾಗಿದೆ. ಮುರುಘನ್ಗೆ ಗಂಗೊಳ್ಳಿ ಮೀನುಗಾರರು ಪ್ರಥಮ ಚಿಕಿತ್ಸೆ ನೀಡುತ್ತಾರೆ. ಸಮುದ್ರಕ್ಕೆ ಬಿದ್ದು ಮುರುಘನ್ ಮೃತಪಟ್ಟಿದ್ದಾನೆ ಎಂದು ಶವ ಹುಡುಕುತ್ತಿದ್ದ ತಮಿಳುನಾಡಿನ ಮೀನುಗಾರರ ತಂಡಕ್ಕೆ ಈತ ಬದುಕಿದ್ದನ್ನು ಕಂಡು ಆಶ್ಚರ್ಯವಾಗುತ್ತದೆ. ಬಳಿಕ ಗಂಗೊಳ್ಳಿ ಮೀನುಗಾರರು ಮುರುಘನ್ನನ್ನು ತಮಿಳುನಾಡು ಮೀನುಗಾರರಿಗೆ ಒಪ್ಪಿಸುತ್ತಾರೆ.

You cannot copy content from Baravanige News

Scroll to Top