ಬಿಹಾರದಲ್ಲಿ ಮೋದಿ ಕಾರ್ಯಕ್ರಮ ವೇಳೆ ದುಷ್ಕೃತ್ಯಕ್ಕೆ ಸಂಚು ಪ್ರಕರಣ; ದಕ್ಷಿಣ ಕನ್ನಡದ 16 ಕಡೆ ಎನ್.ಐ.ಎ ದಾಳಿ

ಮಂಗಳೂರು, ಮೇ.31: ಬೆಳ್ಳಂಬೆಳಿಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬಿಹಾರದಲ್ಲಿ ನಡೆದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ವೇಳೆ ದುಷ್ಕೃತ್ಯಕ್ಕೆ ನಡೆಸಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು ಸೇರಿದಂತೆ 16 ಕಡೆ ಹಲವರ ಮನೆ, ಕಚೇರಿಗಳು, ಆಸ್ಪತ್ರೆ ಮೇಲೆ ದಾಳಿಮಾಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ವರ್ಷ 2022ರ ಜುಲೈ ತಿಂಗಳಲ್ಲಿ ಬಿಹಾರದ ಪಾಟ್ನಾದಲ್ಲಿ ನಡೆದಿದ್ದ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಉಗ್ರರು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಅಂಶ ಬಹಿರಂಗವಾಗಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಐಎನ್​ಎ ಅಧಿಕಾರಿಗಳು ಫುಲ್ವಾರಿ ಶರೀಫ್ ಎಂಬುವವನನ್ನು ಬಂಧಿಸಿದ್ದರು.

ಕಾರ್ಯಕ್ರಮವನ್ನು ವಿಫಲಗೊಳಿಸಲು ಸಂಚು ನಡೆಸಲು ದಕ್ಷಿಣ ಕನ್ನಡದಿಂದ ಹಣಕಾಸು ನೆರವು ನೀಡಲಾಗಿದೆ ಎಂಬ ಸತ್ಯ ತನಿಖೆ ವೇಳೆ ಬಹಿರಂಗವಾಗಿತ್ತು. ಈ ಹಣದ ಜಾಡು ಹಿಡಿದು ಹೊರಟ ಅಧಿಕಾರಿಗಳಿಗೆ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಮೂಲಕ ಭಾರತಕ್ಕೆ ಹಣ ಬರುತ್ತಿದ್ದು, ಇದನ್ನು ಭಾರತದಲ್ಲಿ ಭಯೋತ್ಪಾದಕ ಎಸಗಲು ಬಳಸಲಾಗುತ್ತಿದೆ ಎಂಬ ಅಂಶವನ್ನು ಪತ್ತೆ ಹಚ್ಚಿದ್ದಾರೆ.

ಈ ಹಿನ್ನೆಲೆ ಇಂದು (ಮೇ.31) ಎನ್​ಐಎ ಅಧಿಕಾರಿಗಳು ಮತ್ತೆ ದಕ್ಷಿಣ ಕನ್ನಡದ ಹಲವು ಕಡೆ ದಾಳಿ ಮಾಡಿದ್ದು, ಸಾಕಷ್ಟು ಮನೆ, ಕಚೇರಿ, ಒಂದು ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.

You cannot copy content from Baravanige News

Scroll to Top