ಬಿ.ಎಲ್ ಸಂತೋಷ್ ಷಡ್ಯಂತ್ರದಿಂದ ನನಗೆ ಟಿಕೆಟ್ ಕೈತಪ್ಪಿದೆ : ಶೆಟ್ಟರ್ ನೇರ ಆರೋಪ

ಹುಬ್ಬಳ್ಳಿ, ಏ.18: ಬಿಜೆಪಿಯಲ್ಲಿ ಬಿ.ಎಲ್ ಸಂತೋಷ್ ಷಡ್ಯಂತ್ರದಿಂದ ನನಗೆ ಟಿಕೆಟ್ ಕೈತಪ್ಪಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪರಿಸ್ಥಿತಿಗೆ ಮೂಲ ಕಾರಣ ಬಿ.ಎಲ್ ಸಂತೋಷ್‍ರಾಗಿದ್ದಾರೆ. ಒಬ್ಬ ಹಿರಿಯ ನಾಯಕರನ್ನು ಸೈಡ್‍ಲೈನ್ ಮಾಡಿ ಮಹೇಶ್ ಟೆಂಗಿನಕಾಯಿಗೆ ಟಿಕೆಟ್ ನೀಡಲು ಆಗುವುದಿಲ್ಲ. ಆದರೆ ಇದರ ಹಿಂದೆ ಬಿಎಲ್ ಸಂತೋಷ್ ಇದ್ದಾರೆ. ಬಿ.ಎಲ್ ಸಂತೋಷ್ ಅವರ ಮಾನಸ ಪುತ್ರ ಮಹೇಶ್ ಟೆಂಗಿನಕಾಯಿ ಆಗಿದ್ದಾರೆ ಎಂದು ಕಿಡಿಕಾರಿದರು.

ಬಿ.ಎಲ್ ಸಂತೋಷ್ ಕೃಪೆಯಿಂದ ಪಕ್ಷದಲ್ಲಿ ನನ್ನ ಬಗ್ಗೆ ಇಲ್ಲಸಲ್ಲದ ಸುದ್ದಿ ಹಬ್ಬಿಸಿದರು. ವ್ಯಕ್ತಿಯೊಬ್ಬನಿಗೆ ಟಿಕೆಟ್ ನೀಡುವ ಸಲುವಾಗಿ ಇಂದು ಪಕ್ಷ ಒಡೆಯುತ್ತಿದೆ. ಟಿಕೆಟ್ ಕೊಡಿಸುವ ಸಲುವಾಗಿ ತಂತ್ರ, ಕುತಂತ್ರ ನಡೆದಿದೆ. ಇದೆಲ್ಲದಕ್ಕೂ ಬಿ.ಎಲ್ ಸಂತೋಷ್ ಅವರ ಪ್ರಿಪ್ಲ್ಯಾನ್ ಇದೆ. ಒಬ್ಬರಿಗಾಗಿ ಇಡೀ ರಾಜ್ಯದ ಬಿಜೆಪಿಗೆ ಬೆಂಕಿ ಹಚ್ಚುತ್ತಿದ್ದಾರೆ. ನಮ್ಮಲ್ಲಿ ಪಕ್ಷ ಮುಖ್ಯ, ಆದರೆ ವ್ಯಕ್ತಿ ಮುಖ್ಯ ಅಲ್ಲ ಎನ್ನುವ ಮಾತಿದೆ. ಆದರೆ ಬಿಎಲ್ ಸಂತೋಷಗೆ ಪಕ್ಷ ಮುಖ್ಯ ಅಲ್ಲ ವ್ಯಕ್ತಿ ಮುಖ್ಯ ಎಂದು ಗುಡುಗಿದರು.

ಕೇಶವ ಪ್ರಸಾದ್ ಈಗ ಪರಿಷತ್ ಆಗಿದ್ದಾರೆ. ಆದರೆ ಅವರನ್ನು ಯಡಿಯೂರಪ್ಪ ಅವರು ತೆಗೆದು ಹಾಕಿದ್ದರು. ಆದರೆ ಬಿಎಲ್ ಸಂತೋಷ್ ಅವರು ವಾಪಸು ಅವರನ್ನು ಕರೆದುಕೊಂಡು ಬಂದು ಎಂಎಲ್‍ಸಿ ಮಾಡಿದರು. ರಾಮದಾಸ್ ವಿರುದ್ಧ ಶ್ರೀವತ್ಸಗೆ ಟಿಕೆಟ್ ಕೊಟ್ಟರು. ಅವರು ಸಹ ಬಿ.ಎಲ್ ಸಂತೋಷ್ ಆಯ್ಕೆ. ಅವರು ಗೆಲ್ಲುತ್ತಾರಾ ಇಲ್ವೋ ಗೊತ್ತಿಲ್ಲ. ಆದರೆ ಅಲ್ಲಿ ರಾಮದಾಸ್‍ಗೆ ಜಯವಾಗುತ್ತಿತ್ತು. ಆದರೆ ಅವರಿಗೆ ಟಿಕೆಟ್ ನೀಡಿಲ್ಲ. ಯಾಕೆಂದರೆ ರಾಮದಾಸ್ ಬಿ.ಎಲ್ ಸಂತೋಷ ಶಿಷ್ಯ ಅಲ್ಲ. ಬಾದಾಮಿಯಲ್ಲಿ ಸಹ ಇದೆ ರೀತಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಪಕ್ಷ ಯಾವ ಯಾವ ಜವಾಬ್ದಾರಿ ಕೊಟ್ಟಿದೆ ಅದನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ನನ್ನ ಮಹತ್ವವನ್ನು ಅರಿತುಕೊಳ್ಳದೇ ಸುಲಭವಾಗಿ ನನಗೆ ಟಿಕೆಟ್ ನೀಡಿಲ್ಲ ಅಂದರು. ಆದರೆ ಈಗ ಕೆಲವರು ನನ್ನ ವಿರುದ್ಧ ಸುದ್ದಿಗೊಷ್ಠಿ ಮಾಡುತ್ತಿದ್ದಾರೆ. ಆದರೆ ಅವರು ತಮ್ಮ ಕ್ಷೇತ್ರ ಬಿಟ್ಟು ಬಂದು ಚುನಾವಣಾ ಮಾಡಲಿ ನೋಡೋಣ ಎಂದು ಸವಾಲು ಹಾಕಿದರು.

ನಾನು ವಿಪಕ್ಷ ನಾಯಕನಾಗಿದ್ದ ಜನಪರ ಧ್ವನಿ ಎತ್ತಿದ್ದೇನೆ. ಶೆಟ್ಟರ್ ಅವಕಾಶವಾದಿ ಅಂತ ಟೀಕೆ ಮಾಡುತ್ತಿದ್ದಾರೆ. ನಾನು ರಾಜಕೀಯ ಲಾಲಸೆ ಅಂತ ಹೇಳುತ್ತಿದ್ದಾರೆ. ಆದರೆ ನಾನು ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್‍ನಲ್ಲಿ ಮಂತ್ರಿ ಸ್ಥಾನ ಬೇಡ ಅಂದೆ. 42ರ ದಿನ ಕಲ್ಯಾಣ ಕರ್ನಾಟಕದಲ್ಲಿ ವಿಜಯ ಸಂಕಲ್ಪಯಾತ್ರೆ ಮಾಡಿದ್ದೇನೆ. ಪಕ್ಷಕ್ಕೆ ಗಟ್ಟಿಯಾಗಿ ಮಾಡಿದ್ದೇನೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಬಹಳಷ್ಟು ದೊಡ್ಡದಾಗಿ ಬೆಳದಿದೆ. ಬಿಜೆಪಿಗೆ ಅಭ್ಯರ್ಥಿ ಯಾರು ನಿಲ್ಲುತ್ತಿರಲಿಲ್ಲ. ಆ ಸಮಯದಲ್ಲಿ ನಾನು ಬಿಜೆಪಿ ಕಟ್ಟಿದ್ದೇನೆ. ಹೀಗಾಗಿ ಇಂದು ಬಿಜೆಪಿಗೆ ಭದ್ರವಾದ ನೆಲೆ ಸಿಕ್ಕಿದೆ ಎಂದರು.

ಹಲವಾರು ದಿನಗಳಿಂದ ವೇದನೆ ಅನುಭವಿಸುತ್ತಿದ್ದೇನೆ. ನಾನು ಬಿಜೆಪಿಯಲ್ಲಿ ಅನುಭವಿಸಿದ ನೋವನ್ನು ಈಗ ಹೊರಹಾಕಿದ್ದೇನೆ ಎಂದ ಅವರು, ಸಿಂಧನೂರು ಹಾಗೂ ದೇವದುರ್ಗ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಇಂದು ಭಾಗವಹಿಸುತ್ತಿದ್ದೇನೆ ಎಂದು ಹೇಳಿದರು.

You cannot copy content from Baravanige News

Scroll to Top