ಉಡುಪಿ: ವಿದೇಶಿ ಕರೆನ್ಸಿ ನೀಡುವುದಾಗಿ ವಂಚನೆ; ಆರು ಮಂದಿ ಪೊಲೀಸ್ ವಶಕ್ಕೆ..!!

ಉಡುಪಿ, ಏ.02: ವಿದೇಶಿ ಕರೆನ್ಸಿ ನೀಡುವುದಾಗಿ ಹೇಳಿ ಜನರನ್ನು ವಂಚಿಸುತ್ತಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ದೆಹಲಿ ಲಕ್ಷ್ಮೀನಗರದ ಮೊಹ್ಮದ್ ಪೊಲಾರ್ ಖಾನ್ (42), ಮುಂಬೈ ಇಂದಿರಾನಗರದ ನಿವಾಸಿ ಮುಹಮ್ಮದ್ ಬಿಲಾಲ್ ಶೇಖ್ (43), ಪಶ್ಚಿಮ ಬಂಗಾಳ ಮೂಲದ ನಾರ್ಥ್ ಈಸ್ಟ್ ದೆಹಲಿ ನಿವಾಸಿ ಮಹಮ್ಮದ್ ಫಿರೋಝ್ (30), ಹರಿಯಾಣ ರಾಜ್ಯದ ಫರೀದಾಬಾದ್ ನಿವಾಸಿ ನೂರ್ ಮುಹಮ್ಮದ್ (36) ಹಾಗೂ ಈಸ್ಟ್ ದೆಹಲಿಯ ಮೀರಜ್ ಖಾನ್ (32), ಮುಹಮ್ಮದ್ ಜಹಾಂಗೀರ (60) ಬಂಧಿತ ಆರೋಪಿಗಳು. ಬಂಧಿತರಿಂದ ವಿದೇಶಿ ಕರೆನ್ಸಿ ನೋಟುಗಳು, 19 ಮೊಬೈಲ್ ಪೋನ್, 6,29,000 ರೂ ನಗದು, ಮೂರು ಬೈಕ್, 30 ಸಿಮ್ ಕಾರ್ಡ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಆರು ಮಂದಿ ಅಂತರಾಜ್ಯ ಖದೀಮರು ಬ್ರಹ್ಮಾವರ ಮತ್ತು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನರನ್ನು ವಂಚಿಸಿ ಸುಲಿಗೆ ಮಾಡುತ್ತಿದ್ದರು ಎನ್ನಲಾಗಿದೆ.

ಸಾವರ್ಜನಿಕರ ಬಳಿ ವಿದೇಶಿ ದಿರಮ್ಸ್ ಕರೆನ್ಸಿ ಬದಲಾವಣೆ ಮಾಡಿಕೊಡುವ ಬಗ್ಗೆ ವಿಚಾರಿಸುವ ನೆಪದಲ್ಲಿ ಪರಿಚಯಿಸಿಕೊಂಡು, ಮೊದಲಿಗೆ ಒಂದು ನೈಜ ವಿದೇಶಿ ಕರೆನ್ಸಿ ನೀಡಿ ಸಾರ್ವಜನಿಕರನ್ನು ನಂಬಿಸಿ, ಬಳಿಕ ತಮ್ಮ ಬಳಿ ಇನ್ನೂ ಸಹ ಇಂತಹ ನೈಜ ದಿರಮ್ಸ್ ಕರೆನ್ಸಿಗಳಿದ್ದು ಕಡಿಮೆ ಮೌಲ್ಯಕ್ಕೆ ನೀಡುವುದಾಗಿ ನಂಬಿಸಿದ್ದರು. ತಾವು ಗುರುತು ಪಡಿಸಿದ ಸ್ಥಳಗಳಿಗೆ ಹಣದೊಂದಿಗೆ ಸಾರ್ವಜನಿಕರನ್ನು ಬರ ಮಾಡಿ ಕೊಂಡು ಬಟ್ಟೆ ಮತ್ತು ಸೋಪು ಇರಿಸಿದ ಗಂಟು ಹಾಕಿದ ಚೀಲದಲ್ಲಿ ವಿದೇಶೀ ಕರೆನ್ಸಿ ಇರುವುದಾಗಿ ನಂಬಿಸಿ ಚೀಲವನ್ನು ನೀಡಿ ಸಾವರ್ಜನಿಕರು ಪರಿಶೀಲಿಸುವ ಮೊದಲೇ ಅವರ ಕೈನಲ್ಲಿದ್ದ ಹಣದ ಚೀಲವನ್ನು ಸುಲಿಗೆ ಮಾಡಿ ಎಳೆದುಕೊಂಡು ಹೋಗಿದ್ದರು. ಈ ಬಗ್ಗೆ ಬ್ರಹ್ಮಾವರ ಮತ್ತು ಕೋಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.

ಆರೋಪಿಗಳ ಪತ್ತೆಯ ಬಗ್ಗೆ ಎಸ್ಪಿ ಅಕ್ಷಯ್ ಆದೇಶದಂತೆ ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ನೇತೃತ್ವದಲ್ಲಿ ಬ್ರಹ್ಮಾವರ ಎಸ್ಸೆ ಮಹಾಂತೇಶ ಯು.ನಾಯಕ್ ಮತ್ತು ಕೋಟ ಎಸ್ಸೆ ಮಧು ಬಿಇ ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡವು ಪ್ರಕರಣದ ಆರೋಪಿಗಳ ಮಾಹಿತಿ ಯನ್ನು ಕಲೆ ಹಾಕಿ ಅವರ ಚಲನವಲನದ ಮೇಲೆ ನಿಗಾವಹಿಸಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ತಂಡ ಯಶ್ವಸಿಯಾಗಿದೆ.

You cannot copy content from Baravanige News

Scroll to Top