ಉಡುಪಿ: ಗಾಂಜಾ ಸೇವನೆ ಪ್ರಕರಣ; ನಾಲ್ವರು ಪೊಲೀಸ್ ವಶಕ್ಕೆ

ಉಡುಪಿ ಮಾ.25: ಜಿಲ್ಲೆಯಲ್ಲಿ ಗಾಂಜಾ ಸೇವನೆ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದ್ದು ಇಂದು ಮತ್ತೆ ಉಡುಪಿ ಸೆನ್ ಮತ್ತು ಪಡುಬಿದ್ರೆ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಾಗಿದೆ.

ಉಡುಪಿ ಸೆನ್ ಪೊಲೀಸರು ಹೆರ್ಗ ಗ್ರಾಮದ ಸರಳಬೆಟ್ಟುವಿನ ಮಾವಿನಕಟ್ಟೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ಶಿವಳ್ಳಿ ಗ್ರಾಮದ ಅಪಾರ್ಟ್‍ಮೆಂಟ್‍ವೊಂದರಲ್ಲಿರುವ ದೆಹಲಿಯ ಸಾತ್ವಿಕ್ ಜೋಷಿ (19) ಹಾಗೂ ಕೇರಳ ಮೂಲದ ಗೋವಿಂದ ಆರ್ ನಾಯರ್ (22) ಎಂಬಾತನನ್ನು ಮತ್ತು ಪಡುಬಿದ್ರೆ ಪೊಲೀಸರು ಕಾಪು ತಾಲೂಕಿನ ಬಡಾ ಗ್ರಾಮದ ಉಚ್ಚಿಲದಲ್ಲಿ ಅಮಲಿನಲ್ಲಿದ್ದಂತೆ ಕಂಡು ಬಂದ ಕೆವಿನ್ ಕುಲ್‍ದೀಪ್ ಮಜಲು ಹಾಗೂ ಅಶ್ವಿನ್‍ಪೂಜಾರಿ ಎಂಬಾತನನ್ನು ವಶಕ್ಕೆ ಪಡೆದು ಮಣಿಪಾಲದ ಫೊರೆನ್ಸಿಕ್ ವಿಭಾಗದಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದರು.

ಈ ನಾಲ್ವರ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವಿಸಿರುವುದು ದೃಢಪಟ್ಟ ಕಾರಣ ಇವರ ವಿರುದ್ಧ ಉಡುಪಿ ಸೆನ್ ಅಪರಾಧ ಠಾಣೆ ಹಾಗೂ ಪಡುಬಿದ್ರೆ ಠಾಣೆಯಲ್ಲಿ ತಲಾ 2 ರಂತೆ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top