ಶಿರ್ವದ ಚಿನ್ನದಂಗಡಿ ಮಾಲಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಮಹಿಳೆ..!

ಶಿರ್ವ: ಮಹಿಳೆಯೋರ್ವಳು ಹಲವು ಅಂಗಡಿಗಳ ಮಾಲಕರನ್ನು ನಂಬಿಸಿ ಚಿನ್ನಾಭರಣಗಳನ್ನು ಖರೀದಿಸಿ ಹಣ ನೀಡದೆ ವಂಚಿಸಿದ ಘಟನೆ ಶಿರ್ವದಲ್ಲಿ ನಡೆದಿದೆ.

ಶಿರ್ವ ಮಸೀದಿ ಬಳಿಯ ನಿವಾಸಿ ಫರೀದಾ ಚಾಲಾಕಿ ಮಹಿಳೆ. 3 ಚಿನ್ನಾಭರಣ ಮಳಿಗೆಗಳಿಂದ ಸುಮಾರು 9,74,043 ಲ.ರೂ. ಮೌಲ್ಯದ 98.565 ಗ್ರಾಂ ಚಿನ್ನ ಖರೀದಿಸಿ ವಂಚಿಸಿರುವುದಾಗಿ ತಿಳಿದುಬಂದಿದೆ.

ಘಟನೆಯ ವಿವರ
ಶಿರ್ವ ಮುಖ್ಯ ರಸ್ತೆಯಲ್ಲಿರುವ ಆಭರಣದ ಅಂಗಡಿಯೊಂದಕ್ಕೆ ಮಾ. 8ರಂದು ಮೊಬೈಲ್‌ನಿಂದ ಕರೆಮಾಡಿದ ಫರೀದಾ, ತಾನು ಶಿರ್ವ ಮಸೀದಿ ಬಳಿಯ ನಿವಾಸಿ ಎಂದು ತಿಳಿಸಿದ್ದಾಳೆ. ಮಗುವಿನ ನಾಮಕರಣ ಇದ್ದು, ಮಗುವಿಗೆ ಚೈನ್‌, ಉಂಗುರ ಮತ್ತು ಬಳೆ ಬೇಕಾಗಿದೆ. ಆದರೆ ನನಗೆ ಅಂಗಡಿಗೆ ಬರಲಾಗುವುದಿಲ್ಲ, ಸೋದರ ಸಂಬಂಧಿಯನ್ನು ಕಳುಹಿಸಿಕೊಡುತ್ತೇನೆ, ಭದ್ರತೆಗಾಗಿ ಚೆಕ್‌ ಕೂಡ ಕಳುಹಿಸುತ್ತೇನೆ. ಬಿಲ್‌ ಮೊತ್ತವನ್ನು ಬಳಿಕ ಅಂಗಡಿ ಮಾಲಕರ ಖಾತೆಗೆ ಹಾಕುತ್ತೇನೆ ಎಂದು ತಿಳಿಸಿದ್ದಳು. ಅದನ್ನು ನಂಬಿದ ಮಾಲಕರು ಅವರ ಕರ್ಣಾಟಕ ಬ್ಯಾಂಕಿನ ಖಾತೆಯ ವಿವರವನ್ನು ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಿದ್ದರು.

ಮಧ್ಯಾಹ್ನದ ವೇಳೆಗೆ ಬೈಕ್‌ನಲ್ಲಿ ಬಂದ ಯುವಕನೊಬ್ಬ ಅಂಗಡಿ ಮಾಲಕರಲ್ಲಿ “ನಾನು ಫರೀದಾ ಅವರ ಸಂಬಂಧಿ ಅಫ್ಸಲ್‌’ ಎಂದು ಪರಿಚಯಿಸಿಕೊಂಡನು. ಫ‌ರೀದಾ ಜತೆಗೆ ಮೊದಲೇ ಮಾತುಕತೆಯಾಗಿದ್ದ ಕಾರಣ ಮಾಲಕರು ಮಗುವಿನ ಆಭರಣಗಳ ಫೋಟೋ ತೆಗೆದು ಆಕೆಗೆ ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಿದರು. ಆಕೆ ಆಭರಣಗಳ ಫೋಟೋ ನೋಡಿ 3,73,629 ರೂ. ಮೌಲ್ಯದ ಆಭರಣ ಆಯ್ಕೆ ಮಾಡಿದಳು. ಆಕೆ ಕಳುಹಿಸಿದ ಚೆಕ್‌ ನೀಡಿದ ಯುವಕ ಅಫ್ಸಲ್‌ ಚಿನ್ನಾಭರಣಗಳನ್ನು ಪಡೆದುಕೊಂಡು ಹೋದನು.

ಬಳಿಕ ಮಾ. 1ರಂದು ಮತ್ತೆ ಕರೆ ಮಾಡಿದ ಆಕೆ ಮಾಲಕರ ಖಾತೆಗೆ 4.5 ಲ.ರೂ. ಪಾವತಿಸಿರುವುದಾಗಿ ತಿಳಿಸಿ ಬ್ಯಾಂಕ್‌ ಖಾತೆಯ ಕೌಂಟರ್‌ ಸ್ಲಿಪ್‌ ರಸೀದಿಯನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದಳು. ಬಳಿಕ ಈ ಬಾರಿ ಇನ್ನೊಬ್ಬ ಸಂಬಂಧಿಕನನ್ನು ಕಳುಹಿಸಿ ಈ ಹಿಂದಿನಂತೆಯೇ ವಾಟ್ಸ್‌ಆ್ಯಪ್‌ನಲ್ಲಿ ವಿವಿಧ ಆಭರಣಗಳ ಚಿತ್ರವನ್ನು ತರಿಸಿಕೊಂಡು ಕೆಲವನ್ನು ಆಯ್ಕೆ ಮಾಡಿ 1,25,314 ರೂ. ಮೌಲ್ಯದ 13.054 ಗ್ರಾಂ ತೂಕದ ಆಭರಣಗಳನ್ನು ಆತನ ಮೂಲಕ ತೆಗೆದುಕೊಂಡು ಹೋಗಿದ್ದಳು.

ಈ ಮಧ್ಯೆ ಅಂಗಡಿ ಮಾಲಕ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಚೆಕ್‌ ಕ್ಲಿಯರ್‌ ಆಗಲು ಒಂದೆರಡು ದಿನ ಆಗುವುದಾಗಿ ತಿಳಿಸಿದ್ದಾರೆ. ಮಾ. 11ರಂದು ಮತ್ತೆ ಫೋನ್‌ ಕರೆ ಮಾಡಿದ ಫರೀದಾ ಇನ್ನೋರ್ವ ಸಂಬಂಧಿಯನ್ನು ಕಳುಹಿಸುವುದಾಗಿ ತಿಳಿಸಿದಳು. ಆತ ಬಂದು 1,78,000 ರೂ. ಮೌಲ್ಯದ 18.235 ಗ್ರಾಂ ಆಭರಣ ಪಡೆದುಕೊಂಡು ಹೋಗಿದ್ದಾನೆ. ಹೀಗೆ ಒಟ್ಟು 6,76,943 ಮೌಲ್ಯದ 69.165 ಗ್ರಾಂ ಚಿನ್ನಾಭರಣ ಖರೀದಿಸಿದ್ದಳು. ಕೊನೆಗೆ ತಮ್ಮ ಬ್ಯಾಂಕ್‌ ಖಾತೆಗೆ ಹಣ ಬಾರದಿದ್ದಾಗ ಅಂಗಡಿ ಮಾಲಕರಿಗೆ ಮೋಸ ಹೋಗಿರುವುದು ಗೊತ್ತಾಯಿತು. ಹಣಕ್ಕಾಗಿ ಆಕೆಗೆ ಪದೇಪದೆ ಕರೆ ಮಾಡಿದ್ದು, ಆಕೆ ಹಣ ಪಾವತಿ ಮಾಡದಿದ್ದಾಗ ಭದ್ರತೆಗಾಗಿ ಆಕೆ ನೀಡಿದ್ದ ಚೆಕ್‌ ಅನ್ನು ಮಾ. 14ರಂದು ಬ್ಯಾಂಕಿಗೆ ಹಾಕಿದರು. ಅದು ಬೌನ್ಸ್‌ ಆಗಿದೆ. ಮಹಿಳೆಯನ್ನು ನಂಬಿದ್ದ ಅಂಗಡಿ ಮಾಲಕರು ವಿಳಂಬವಾಗಿ ಪೊಲೀಸರ ಮೊರೆಹೋಗಿದ್ದಾರೆ.

ಮತ್ತೆರಡು ಅಂಗಡಿಗಳಿಗೆ ವಂಚನೆ
ಇದೇ ರೀತಿ ಶಿರ್ವ ಪೇಟೆಯ ಮತ್ತೂಂದು ಅಂಗಡಿಗೆ ಮಾ. 16ರಂದು ಕರೆ ಮಾಡಿ ಅವರನ್ನು ನಂಬಿಸಿದ ಮಹಿಳೆಯು ಸಂಬಂಧಿ ಅಪ್ಸಲ್‌ ಮೂಲಕ ಚೆಕ್‌ ನೀಡಿ 1,06,500 ರೂ. ಮೌಲ್ಯದ 10.740 ಚಿನ್ನಾಭರಣ ಖರೀದಿಸಿ ವಂಚಿಸಿದ್ದಾಳೆ. ಮಾ. 17ರಂದು ಬ್ಯಾಂಕ್‌ಗೆ ಹಣ ಪಾವತಿಸಿರುವುದಾಗಿ ಪಾವತಿಯ ಕೌಂಟರ್‌ ಸ್ಲಿಪ್‌ ರಶೀದಿ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದಳು. ಆದರೆ ಹಣ ಬಂದಿರಲಿಲ್ಲ. ಈ ಪ್ರಕರಣದಲ್ಲೂ ಆಕೆ ನೀಡಿದ್ದ ಚೆಕ್‌ ಬೌನ್ಸ್‌ ಆಗಿದೆ.

ಶಿರ್ವ ಮುಖ್ಯ ರಸ್ತೆಯ ಮತ್ತೂಂದು ಅಂಗಡಿ ಮಾಲಕರಿಗೆ ಎ. 9ರಂದು ಕರೆ ಮಾಡಿ ನಂಬಿಸಿದ ಫರೀದಾ1,90,600 ರೂ. ಮೌಲ್ಯದ 18.660 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣವನ್ನು ಖರೀದಿಸಿದ್ದು, ಸಂಬಂಧಿಕನೆಂದು ತಿಳಿಸಿದ ಅಪ್ಸಲ್‌ ಚೆಕ್‌ ನೀಡಿ ಆಭರಣ ಪಡೆದುಕೊಂಡು ಹೋಗಿದ್ದ.

ವಿವಿಧೆಡೆ ವಂಚನೆ
ಆರೋಪಿ ಫರೀದಾ ಮತ್ತು ಅವಳ ತಂಡ ಮಂಗಳೂರು, ಬಜಪೆ, ಸುರತ್ಕಲ್‌, ಕಿನ್ನಿಗೋಳಿ, ಕೂಳೂರು ಮುಂತಾದ ಕಡೆ ಆಭರಣ ಖರೀದಿಸಿ ವಂಚಿಸಿದೆ. ಇದೇ ತಂಡ ಪಡುಬಿದ್ರಿ ಮತ್ತು ತ್ರಾಸಿಯಲ್ಲಿ ಕೂಡ ಇದೇರೀತಿ ವಂಚಿಸಲು ಪ್ರಯತ್ನಿಸಿದ್ದು, ವಂಚಕರ ಬಗ್ಗೆ ತಿಳಿದಿದ್ದ ಅಂಗಡಿ ಮಾಲಕರು ಆಭರಣ ನೀಡದೆ ವಂಚನೆಯಿಂದ ಪಾರಾಗಿದ್ದಾರೆ.

ಕೋರ್ಟ್‌ ನಿರ್ದೇಶನದ ಬಳಿಕ ಪ್ರಕರಣ ದಾಖಲು
ಆರೋಪಿ ಮಹಿಳೆಯ ಬಗ್ಗೆ ಪ್ರಕರಣದ ಬಗ್ಗೆ 4 ತಿಂಗಳ ಹಿಂದೆ ಅಂಗಡಿ ಮಾಲಕ ಗಣೇಶ್‌ ಅವರು ಶಿರ್ವ ಪೊಲೀಸರಿಗೆ ದೂರು ನೀಡಿದ್ದರು. ಶಿರ್ವ ಪೊಲೀಸರು ಯಾವುದೇ ಕ್ರಮ ಜರಗಿಸದೆ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥ ಮಾಡಿ ಎಂದು ತಿಳಿಸಿದ್ದರು ಎಂದು ಅಂಗಡಿ ಮಾಲಕ ಗಣೇಶ್‌ ತಿಳಿಸಿದ್ದಾರೆ. ಈಗ ಉಡುಪಿಯ ನ್ಯಾಯಾಲಯದ ಆದೇಶದಂತೆ ಆರೋಪಿ ಫರೀದಾ ಫೋನ್‌ ಕರೆ ಮಾಡಿ ನಂಬಿಸಿ ಆರೋಪಿ ಅಪ್ಸಲ್‌ ಮತ್ತು ಇಬ್ಬರು ಸಂಬಂಧಿಕರ ಮೂಲಕ ಚಿನ್ನಾಭರಣ ಪಡೆದು, ಬಿಲ್‌ ಪಾವತಿಸಿದೆ ವಂಚಿಸಿದ್ದಾಳೆ ಎಂದು ಅಂಗಡಿ ಮಾಲಕ ಶಿರ್ವದ ಗಣೇಶ್‌ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಸ್ತುತ ಆರೋಪಿಯು ಯಾರ ಸಂಪರ್ಕಕ್ಕೂ ಲಭಿಸದೆ ತಲೆಮರೆಸಿಕೊಂಡಿದ್ದಾಳೆ. ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

You cannot copy content from Baravanige News

Scroll to Top