ಉಡುಪಿ, ದ.ಕ ದಲ್ಲಿ ಮೇ.2 ರವರೆಗೆ ಬಿಸಿಗಾಳಿ ಹೆಚ್ಚಳ ಸಾಧ್ಯತೆ; ಹವಾಮಾನ ಇಲಾಖೆ ಮುನ್ಸೂಚನೆ

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಬಿಸಿ ವಾತಾವರಣ ಮೇ 2ರ ತನಕ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.

ದಕ್ಷಿಣ ಕನ್ನಡದಲ್ಲಿ ಇನ್ನೂ ನಾಲ್ಕು ದಿನ ಬಿಸಿ ವಾತಾವರಣ ಮುಂದುವರಿಯಲಿದೆ. ರಾಜ್ಯದ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ದಕ್ಷಿಣ ಕನ್ನಡದ ಕೆಲವು ಪ್ರದೇಶಗಳಲ್ಲಿ ಮಾತ್ರ ಎಪ್ರಿಲ್‌ನಲ್ಲಿ ಒಂದೆರಡು ಸಾರಿ ಮಳೆ ಸುರಿದಿದೆ. ಕೆಲವು ಪ್ರದೇಶಗಳಲ್ಲಿ ಕಳೆದ ನವೆಂಬರ್‌ನಲ್ಲಿ ಕಾಣೆಯಾದ ಮಳೆ ಮತ್ತೆ ಕಾಣಿಸಿಕೊಂಡಿಲ್ಲ. ಹೀಗಾಗಿ ವಾತಾವರಣ ಬಿಸಿಯಾಗಿಯೇ ಇದೆ.

ಮಾರ್ಚ್ ಆರಂಭದಿಂದಲೇ ಬಿಸಿಲ ಝಲ ತೀವ್ರಗೊಂಡಿತ್ತು. ಸೆಖೆಯಿಂದಾಗಿ ಹಿರಿಯ ನಾಗರಿಕರು ತೀವ್ರ ಸಮಸ್ಯೆ ಎದುರಿ ಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಮತ ಚಲಾಯಿಸಲು ಆಗಮಿಸಿದ ಹಿರಿಯ ನಾಗರಿಕರು ಕಷ್ಟ ಅನುಭವಿಸಿದ್ದರು.

ಮಂಗಳೂರಿನಲ್ಲಿ ಸೋಮವಾರ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇತ್ತು. ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ. ಮುಂದಿನ 4 ದಿನಗಳಲ್ಲಿ ರಾಜ್ಯದಲ್ಲಿ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಅತಿಯಾದ ತಾಪಮಾನದಿಂದ ಸಮಸ್ಯೆ ಎದುರಿಸಿದವರು ಇನ್ನೂ ಕೆಲವು ದಿನಗಳ ಕಾಲ ನ ಸಮಸ್ಯೆ ಎದುರಿಸುವಂತಾಗಿದೆ.

ಕುಡಿಯುವ ನೀರಿಗೆ ಹಾಹಾಕಾರ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟೇನು ಕಂಡು ಬರದಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಕೆರೆ, ಬಾವಿ, ಬೋರ್‌ವೆಲ್ ಬತ್ತಿ ಹೋಗಿದೆ. ಅಡಿಕೆ, ತೆಂಗು, ಬಾಳೆ ಕೃಷಿ ನೀರಿಲ್ಲದೆ ಒಣಗುತ್ತಿದೆ. ಇರುವ ಕೃಷಿಯನ್ನು ಉಳಿಸುವುದು ಹೇಗೆ ಎಂಬ ಚಿಂತೆ ಕೃಷಿಕರನ್ನು ಕಾಡತೊಡಗಿದೆ.

ಭತ್ತದ ಕೃಷಿ ಅಡ್ಡಿ: ಕರಾವಳಿಯಲ್ಲಿ ನಿಗದಿಯಂತೆ ಮಳೆ ಸುರಿಯದಿದ್ದರೆ ಭತ್ತದ ಕೃಷಿಗೆ ತೊಂದರೆಯಾಗಲಿದೆ. ಮಳೆಗಾಲ ನಿಧಾನವಾಗಿ ಆರಂಭಗೊಂಡಿತ್ತು. ಮಳೆ ನಿರೀಕ್ಷೆಯಂತೆ ಸುರಿಯಲಿಲ್ಲ. ಕೊನೆಯಲ್ಲಿ ಮಳೆ ಬೇಗನೆ ಕಣ್ಣರೆಯಾಗಿತ್ತು. ಈ ತಿಂಗಳ ಆರಂಭದಲ್ಲಿ ಮಂಗಳೂರಿನಲ್ಲಿ ಒಮ್ಮೆ ಸಾಧಾರಣ ಮಳೆ ಬಂದಿತ್ತು.

ಎಪ್ರಿಲ್ -ಮೇ ತಿಂಗಳಲ್ಲಿ ಸುರಿಯುವ ಮುಂಗಾರು ಪೂರ್ವ ಮಳೆ ರೈತರಿಗೆ ಭತ್ತದ ಕೃಷಿಗೆ ತಯಾರಿ ನಡೆಸಲು ನೆರವಾಗುತ್ತಿದೆ. ಹಟ್ಟಿ ಗೊಬ್ಬರ, ತರಗೆಲೆ ಗೊಬ್ಬರವನ್ನು ಹಾಕುವುದು, ಉತ್ತುವುದು ಮುಂತಾದ ಚಟುವಟಿಕೆಗಳು ಮುಂಗಾರು ಆರಂಭಕ್ಕೂ ಮುನ್ನ ಸಿದ್ದವಾಗಿರುತ್ತದೆ. ಆದರೆ ಈ ಬಾರಿ ಆ ಅವಕಾಶ ದೂರವಾದಂತಿದೆ. ಕಳೆದ ವರ್ಷ ನಿಗದಿತ ಸಮಯದಲ್ಲಿ ಮುಂಗಾರು ಪ್ರವೇಶ ಆಗಿರಲಿಲ್ಲ. ಮುಂಗಾರು ಜೂನ್ 10ರಂದು ಪ್ರವೇಶವಾಗಿ ಜೂನ್ ಅಂತ್ಯದ ವೇಳೆಗೆ ಕೃಷಿ ಚಟುವಟಿಕೆ ಆರಂಭವಾಗಿತ್ತು.

Scroll to Top