ಸರ್ಕಾರದ ವಿರುದ್ಧ ಸಮರ ಸಾರಿದ ಅಂಗನವಾಡಿ ಕಾರ್ಯಕರ್ತೆಯರು & ಸಹಾಯಕಿಯರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ಬೆಂಗಳೂರು ಚಲೋ

ಬೆಂಗಳೂರು, ನ.21: ಸರ್ಕಾರದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರು ಹೊಸ ಸಮರ ಸಾರಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ಚಲೋ ನಡೆಸಲು ಮುಂದಾಗಿದ್ದಾರೆ.

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ & ಸಹಾಯಕಿಯರ ಸ್ವತಂತ್ರ ಸಂಘಟನೆಯಿಂದ ನಾಳೆ ಬೆಳಗ್ಗೆ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಕಾಲ ಧರಣಿ ಸತ್ಯಾಗ್ರಹ ನಡೆಸಿ ಬೆಂಗಳೂರು ಚಲೋಗೆ ಕರೆ ನೀಡಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಬರೋಬ್ಬರಿ 1,32,000 ಅಂಗನವಾಡಿ ಕಾರ್ಯಕರ್ತೆಯರು & ಸಹಾಯಕಿಯರು ಇದ್ದಾರೆ. ಕೊರೊನಾ ಸಮಯದಲ್ಲಿ ಜೀವದ ಹಂಗು ತೊರೆದು ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದಾರೆ. ಈ ಸಮಯದಲ್ಲಿ ಹಲವು ಅಂಗನವಾಡಿ ಕಾರ್ಯಕರ್ತೆಯರು & ಸಹಾಯಕಿಯರು ಮರಣ ಹೊಂದಿದ್ದಾರೆ. ಇದರಿಂದ ಅನೇಕ‌ ಕುಟುಂಬಗಳು ಬೀದಿ ಪಾಲಾಗಿವೆ.

ಸರ್ಕಾರದಿಂದ 1,32,000 ಅಂಗನವಾಡಿ ಕಾರ್ಯಕರ್ತೆಯರು & ಸಹಾಯಕಿಯರಿಗೆ ಗೌರವ ಧನ ಹೆಸರಲ್ಲಿ ಶೋಷಣೆ ಮಾಡುತ್ತಿದೆ. ಇವರಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆ ಕಲ್ಪಿಸಿಲ್ಲ. ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ & ಸಹಾಯಕರಿಗೆ ಕನಿಷ್ಠ ವೇತನ ಜಾರಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಬೇಡಿಕೆಗಳು ಏನೇನು.!?

ಅಂಗನವಾಡಿ ಕಾರ್ಯಕರ್ತೆಯರಿಗೆ & ಸಹಾಯಕಿಯರಿಗೆ ಕನಿಷ್ಠ 21,000 ವೇತನ ನೀಡಬೇಕು.

ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದಂತೆ 6ನೇ ಗ್ಯಾರಂಟಿ ಜಾರಿ ಮಾಡಬೇಕು.

ಎಲ್ಲಾ‌ ಮಿನಿ ಅಂಗನವಾಡಿ ಕೇಂದ್ರಗಳನ್ನ ಮೇಲ್ವರ್ಜೆಗೆ ಏರಿಸಬೇಕು.

ಸುಪ್ರೀಂ ಕೋರ್ಟ್ ಆದೇಶದಂತೆ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ & ಸಹಾಯಕರಿಗೆ ಗ್ರಾಜ್ಯುಟಿ ಹಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ಗೌರವ ಧನವನ್ನು 15 ಸಾವಿರ, 10 ಸಾವಿರ ಹೆಚ್ಚಿಸಲಾಗುವುದೆಂದು ಚುನಾವಣಾ ಪೂರ್ವದಲ್ಲಿ ಬೆಳಗಾವಿಯ ಖಾನಪುರದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಭರವಸೆ ಕೊಟ್ಟಿದ್ದರು. ಕಾಂಗ್ರೆಸ್ ಘೋಷಣೆ ಮಾಡಿದಂತೆ 6ನೇ ಗ್ಯಾರಂಟಿ ಜಾರಿ‌‌ ಮಾಡಲು ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಒತ್ತಾಯಿಸಿದ್ದಾರೆ.

Scroll to Top