ಸೌದಿಯಲ್ಲಿ 11 ತಿಂಗಳ ಜೈಲುವಾಸದ ಬಳಿಕ ಯುವಕ ತಾಯ್ನಾಡಿಗೆ ವಾಪಸ್

ಮಂಗಳೂರು : ದುರುದ್ದೇಶಪೂರ್ವಕವಾಗಿ ತನ್ನನ್ನು ಸಿಲುಕಿಸಿ ಹಾಕಲಾದ ಪ್ರಕರಣದಲ್ಲಿ ಸೌದಿ ಅರೇಬಿಯಾದಲ್ಲಿ ಜೈಲು ಪಾಲಾಗಿ ಕೊನೆಗೂ ಬಿಡುಗಡೆಯಾಗಿ ತಾಯ್ನಾಡಿಗೆ ಮರಳಿ ಬಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನಿವಾಸಿ ಚಂದ್ರಶೇಖರ್ ಗೆ ಮನೆ ಮಂದಿ ಖುಷಿಯಿಂದ ಸ್ವಾಗತಿಸಿದರು.

ರಿಯಾದ್ ನಿಂದ ಮುಂಬೈಗೆ ಬಂದು ಅಲ್ಲಿಂದ ಮಂಗಳೂರಿಗೆ ಆಗಮಿಸಿದ ಚಂದ್ರಶೇಖರ್ ತಾನು ಮಾಡದ ತಪ್ಪಿಗೆ 11 ವರ್ಷಗಳಿಂದ ಸೌದಿ ಜೈಲಿನಲ್ಲಿ ಬಂಧಿಯಾಗಿದ್ದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೊರ ಬರುತ್ತಲೇ ಚಂದ್ರು ಭಾವುಕರಾಗಿದ್ದರು.

ಮಗನನ್ನು ಅಪ್ಪಿ ಹಿಡಿದು ಆನಂದ ಭಾಷ್ಪ ಸುರಿಸಿದ ತಾಯಿ ಹೇಮಾವತಿಯನ್ನು ಕಂಡ ಅಲ್ಲಿದ್ದವರ ಕಣ್ಣಾಲಿಗಳಲ್ಲಿಯೂ ನೀರು ತುಂಬಿಕೊಂಡಿತ್ತು.

ಸೌದಿ ಅರೇಬಿಯಾದಲ್ಲಿದ್ದ ವೇಳೆ ಸಿಮ್ ಖರೀದಿಸಲು ಹೋಗಿದ್ದ ಚಂದ್ರು ಬ್ಯಾಂಕ್ ಖಾತೆ ಹ್ಯಾಕ್ ಆಗಿತ್ತು. ಹ್ಯಾಕ್ ಆದ ಖಾತೆಗೆ ಮಹಿಳೆಯೊಬ್ಬರ ಖಾತೆಯಿಂದ 22 ಸಾವಿರ ಹಣ ಜಮೆಯಾಗಿತ್ತು. ಯಾರೋ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು, ಇದನ್ನು ಚಂದ್ರಶೇಖರ್‌ ಅವರ ತಲೆಗೆ ಕಟ್ಟಲಾಗಿತ್ತು.

ವಂಚನೆ ಪ್ರಕರಣ ಎಸಗಿದ್ದಾರೆ ಎಂದು ಆರೋಪಿಸಿ ಚಂದ್ರಶೇಖರ್ ಅವರನ್ನು ಸೌದಿ ಅರೇಬಿಯಾದ ಪೊಲೀಸರು ಬಂಧಿಸಿದ್ದರು. ಬಳಿಕ ಅವರು ಜೈಲು ಪಾಲಾಗಿದ್ದರು. ಭಾರತೀಯ ವಿದೇಶಾಂಗ ಇಲಾಖೆ ಸೇರಿದಂತೆ ಹಲವರ ಪ್ರಯತ್ನದಿಂದ ಜೈಲಿನಿಂದ ಬಿಡುಗಡೆಯಾಗಿ ಬಂದು ಇದೀಗ ಮರಳಿ ಅವರು ತಾಯ್ನಾಡಿಗೆ ಬಂದಿದ್ದಾರೆ.

You cannot copy content from Baravanige News

Scroll to Top