ಯುವನಿಧಿ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದ ಸಿಎಂ

ಬೆಂಗಳೂರು,ನ.20: ಕರ್ನಾಟಕದಲ್ಲಿ ಆಡಳಿತದಲ್ಲಿರುವ ರಾಜ್ಯ ಸರ್ಕಾರವು 5 ಗ್ಯಾರಂಟಿಗಳ ಹೆಸರನ್ನೇ ಇಟ್ಟುಕೊಂಡು ಆಡಳಿತಕ್ಕೆ ಬಂದಿದ್ದು ಈ ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆ ಇನ್ನೂ ಜಾರಿಗೆ ಬರಲಿಲ್ಲ ಎಂಬುವ ಟೀಕೆಗಳು ಆಗುತ್ತಿರುವಾಗಲೇ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಸಿಎಂ, 2024ರ ಜನವರಿಯಿಂದ ಯುವನಿಧಿ ಯೋಜನೆ ಜಾರಿಗೆ ತರಲಾಗುವುದು. ಈ ಮೂಲಕ ನಿರುದ್ಯೋಗ ಪದವೀಧರ ಯುವಕ-ಯುವತಿಯರಿಗೆ ಸೂಕ್ತ ಕೆಲಸ ಹುಡುಕಿಕೊಳ್ಳಲು ಅನುಕೂಲ ಆಗುವಂತೆ ಮಾಸಿಕ 3,000 ರೂ.ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಶಿಕ್ಷಣವನ್ನು ಪೂರ್ತಿಗೊಳಿಸಿದ ಪದವೀಧರ ಯುವಜನರಿಗೆ ಉದ್ಯೋಗ ಹುಡುಕಿಕೊಳ್ಳಲು ಅಗತ್ಯ ಸಮಯ ದೊರಕಬೇಕು ಮತ್ತು ಈ ಅವಧಿಯಲ್ಲಿ ಅವರು ಹತಾಶೆ, ಒತ್ತಡಗಳಿಗೆ ಒಳಗಾಗದೆ ತಮ್ಮಿಷ್ಟದ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಲು ಸಾಕಷ್ಟು ಅವಕಾಶ ಸಿಗಬೇಕು.

ಇದು ಸಾಧ್ಯವಾಗಬೇಕಾದರೆ ನಿರುದ್ಯೋಗದಿಂದ ಎದುರಾಗುವ ಆರ್ಥಿಕ ಸಮಸ್ಯೆಗಳು ಅವರನ್ನು ಬಾಧಿಸದಂತೆ ತಡೆಯಬೇಕು. ಈ ಕಾರಣಕ್ಕಾಗಿ ನಾವು ಪದವೀಧರ ಮತ್ತು ಡಿಪ್ಲೊಮಾ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ನಿರುದ್ಯೋಗ ಭತ್ಯೆ ಒದಗಿಸುವ ಯುವನಿಧಿ ಯೋಜನೆಗೆ ಸರ್ಕಾರ ಜಾರಿಗೆ ಬಂದ ನಂತರದ ಮೊದಲ ಸಂಪುಟ ಸಭೆಯಲ್ಲಿಯೇ ಆಡಳಿತಾತ್ಮಕ ಅನುಮೋದನೆ ನೀಡಿದ್ದೇವೆ.
ಈ ಯೋಜನೆ ಜನವರಿಯಿಂದ ಜಾರಿಗೆ ಬರಲಿದ್ದು, ಸುಮಾರು ನಾಲ್ಕೂವರೆ ಲಕ್ಷ ಯುವಜನತೆಗೆ ನೆರವಾಗಲಿದೆ ಎಂದು ಅಂದಾಜಿಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ.

ನಾಡಿನ ಜನತೆಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಕಳೆದ 6 ತಿಂಗಳ ಅವಧಿಯಲ್ಲಿ ಈಡೇರಿಸುವ ಪ್ರಾಮಾಣಿಕವಾದ ಪ್ರಯತ್ನ ಮಾಡಿದ್ದೇವೆ. ಗ್ಯಾರಂಟಿ ಯೋಜನೆಗಳು ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳ ಜಾರಿ ಮತ್ತು ಸಮಾಜದ ಶಾಂತಿ-ಸಾಮರಸ್ಯದ ರಕ್ಷಣೆ ನಮ್ಮ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಸಾಧಿಸಿದ್ದು ಹಲವು, ಸಾಗಬೇಕಾದ ಹಾದಿ ಬಹುದೂರ ಇದೆ. ಕರ್ನಾಟಕ ಅಭಿವೃದ್ಧಿ ಮಾದರಿಯ ಈ ಪಯಣದಲ್ಲಿ ಜೊತೆಯಾಗಿ ಸಾಗೋಣ, ನಾಡನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸೋಣ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ.

Scroll to Top