ಸಹರಾ ಸಾಮ್ರಾಜ್ಯದ ಸರಳ ಜೀವಿ ಸುಬ್ರತಾ ರಾಯ್ ಇನ್ನಿಲ್ಲ.. ಗ್ರೇಟ್‌ ಕ್ರಿಕೆಟ್ ಲವ್ವರ್‌ ನಿಧನಕ್ಕೆ ಕಂಬನಿ

ಮುಂಬೈ, ನ.15: ಟೀಂ ಇಂಡಿಯಾವನ್ನು ಅತಿಯಾಗಿ ಪ್ರೀತಿಸುತ್ತಿದ್ದ, ಪ್ರೋತ್ಸಾಹಿಸುತ್ತಿದ್ದ ಸಹರಾ ಇಂಡಿಯಾ ಗ್ರೂಪ್ಸ್‌ನ ಸಂಸ್ಥಾಪಕ ಸುಬ್ರತಾ ರಾಯ್ (75) ನಿಧನರಾಗಿದ್ದಾರೆ.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸುಬ್ರತಾ ರಾಯ್‌ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಸಹರಾ ಗ್ರೂಪ್ಸ್‌ನ ಸಂಸ್ಥಾಪಕ ಸುಬ್ರತಾ ರಾಯ್‌ಗೆ ಕ್ರಿಕೆಟ್ ಅಂದ್ರೆ ಅತಿಯಾದ ಒಲವಿತ್ತು. ಭಾರತ ಕ್ರಿಕೆಟ್ ತಂಡಕ್ಕೆ ಬಹಳಷ್ಟು ವರ್ಷಗಳ ಪ್ರಾಯೋಜಕರಾಗಿ ಇವರು ತಮ್ಮದೇ ಕೊಡುಗೆಯನ್ನ ನೀಡಿದ್ದಾರೆ. ಟೀಂ ಇಂಡಿಯಾದ ಜೆರ್ಸಿಯಲ್ಲಿ ಸಹರಾ ಅನ್ನೋದು ರಾರಾಜಿಸುವಂತೆ ಮಾಡಿದ್ದ ಸುಬ್ರತಾ ರಾಯ್ ಬರೀ ಕ್ರಿಕೆಟ್ ಅಲ್ಲದೇ ಹಲವು ಉದ್ದಿಮೆಯಲ್ಲಿ ತನ್ನದೇ ಛಾಪನ್ನ ಮೂಡಿಸಿದ್ದಾರೆ.

1990ರ ಅವಧಿಯಲ್ಲಿ ಸುಬ್ರತಾ ರಾಯ್‌ ಅವರು ಭಾರತದ ಅತ್ಯುನ್ನತ ಉದ್ದಿಮೆದಾರರಲ್ಲಿ ಪ್ರಮುಖರಾಗಿದ್ದರು. ಉದ್ಯಮಿ ಸುಬ್ರತಾ ರಾಯ್ ಅವರು ಫೈನಾನ್ಸ್, ಮಾಧ್ಯಮ, ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. 1990 ರಲ್ಲಿ ಪುಣೆ ಬಳಿ ಮಹತ್ವಾಕಾಂಕ್ಷೆಯ ಆಂಬಿ ವ್ಯಾಲಿ ಸಿಟಿ ಯೋಜನೆಯನ್ನು ಪ್ರಾರಂಭಿಸಿದ್ದರು. ಸಹರಾ ಒನ್ ಟಿವಿಯೊಂದಿಗೆ ಮಾಧ್ಯಮ ಲೋಕಕ್ಕೂ ಕಾಲಿಟ್ಟಿದ್ದ ಸುಬ್ರತಾ ರಾಯ್ ಅವರು 1992 ರಲ್ಲಿ ಹಿಂದಿ ಭಾಷೆಯ ಪತ್ರಿಕೆ ರಾಷ್ಟ್ರೀಯ ಸಹರಾವನ್ನು ಪ್ರಾರಂಭಿಸಿದ್ದರು.

ಸಹರಾ ಇಂಡಿಯಾ ಪರಿವಾರ್ ಇಂಡಿಯನ್ ರೈಲ್ವೆ ನಂತರ ಭಾರತದಲ್ಲಿ ಎರಡನೇ ಅತಿ ದೊಡ್ಡ ಉದ್ಯೋಗದಾತ ಎಂದು ಪ್ರಶಂಸಿಸಲ್ಪಟ್ಟಿತ್ತು. ಸುಮಾರು 1.2 ಮಿಲಿಯನ್ ಜನರಿಗೆ ಉದ್ಯೋಗಿಗಳನ್ನು ಹೊಂದಿರೋ ಸಂಸ್ಥೆಯಾಗಿತ್ತು ಸಹರಾ. 2000ರಲ್ಲಿ ಲಂಡನ್‌ನ ಗ್ರೋಸ್ವೆನರ್ ಹೌಸ್ ಹೋಟೆಲ್ ಮತ್ತು ನ್ಯೂಯಾರ್ಕ್ ನಗರದ ಪ್ಲಾಜಾ ಹೋಟೆಲ್‌ಗಳನ್ನ ಸಹರಾ ಗ್ರೂಪ್ ಖರೀದಿಸಿತ್ತು. ಆ ಮೂಲಕ ಸಹರಾ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಸುಬ್ರತಾ ರಾಯ್ ಅವರ ನಿಧನಕ್ಕೆ ಟೀಂ ಇಂಡಿಯಾದ ಹಲವು ಹಾಲಿ, ಮಾಜಿ ಆಟಗಾರರು ಕಂಬನಿ ಮಿಡಿದಿದ್ದಾರೆ.

Scroll to Top