24 ಲಕ್ಷ ಮಣ್ಣಿನ ದೀಪಗಳು; ಗಿನ್ನೆಸ್ ವರ್ಲ್ಡ್‌ ರೆಕಾರ್ಡ್‌ಗೆ ಸಜ್ಜಾದ ಅಯೋಧ್ಯೆ; ಸಿದ್ಧತೆ ಹೇಗಿದೆ..?

ಅಯೋಧ್ಯೆ, ನ.11: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ದೀಪಾವಳಿ ಸಂಭ್ರಮ ಜೋರಾಗಿದೆ. ದೀಪಾವಳಿ ಪ್ರಯುಕ್ತ ಅಯೋಧ್ಯೆಯಲ್ಲಿ ದೀಪೋತ್ಸವವನ್ನು ತಯಾರಿ ನಡೆಸುತ್ತಿದ್ದಾರೆ. 51 ಘಾಟ್‌ಗಳಲ್ಲಿ 24 ಲಕ್ಷಕ್ಕೂ ಹೆಚ್ಚು ದೀಪದಿಂದ ನಗರವನ್ನು ಬೆಳಗಿಸಿ ಗಿನ್ನೆಸ್ ರೆಕಾರ್ಡ್ ಮಾಡಲು ಉತ್ತರ ಪ್ರದೇಶ ಸರ್ಕಾರ ತಯಾರಿ ನಡೆಸುತ್ತಿದೆ.

ಸ್ವಯಂಸೇವಕರು, ಘಾಟ್ ಉಸ್ತುವಾರಿಗಳು ಮತ್ತು ಘಾಟ್ ಸಂಯೋಜಕರ ಮೇಲ್ವಿಚಾರಣೆಯಲ್ಲಿ ಸ್ವಯಂಸೇವಕರ ಸಹಾಯದಿಂದ ಈಗಾಗಲೇ 60 ರಿಂದ 70 ರಷ್ಟು ದೀಪಗಳನ್ನು ಎಲ್ಲಾ ಘಾಟ್‌ಗಳಲ್ಲಿ ಇರಿಸಲಾಗಿದೆ. ಶ್ರೀರಾಮ ಜನ್ಮಭೂಮಿ ಪಥವನ್ನು ದೀಪೋತ್ಸವಕ್ಕಾಗಿ ಉತ್ತರ ಪ್ರದೇಶದ ರಸ್ತೆಯುದ್ದಕ್ಕೂ ವಿವಿಧ ರೀತಿಯ ಹೂವುಗಳು ಹಾಗೂ ಲೈಟಿಂಗ್​​ಗಳಿಂದ ಅಲಂಕೃತಗೊಳಿಸಲಾಗಿದೆ. ಇದರ ಜೊತೆಗೆ ಸುಮಾರು 24 ಲಕ್ಷ ಮಣ್ಣಿನ ದೀಪಗಳಿಂದ ಸಿಂಗಾರಗೊಂಡಿದೆ.

ಜಾರ್ಖಂಡ್‌ನ ಪಾಕುರ್ ಜಿಲ್ಲೆಯ ಬುಡಕಟ್ಟು ಜನರು ಸೇರಿದಂತೆ ವಿವಿಧ ಸ್ಥಳಗಳ ಜನರು ಭವ್ಯ ದೀಪೋತ್ಸವಕ್ಕೆ ಆಗಮಿಸಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 48 ಬುಡಕಟ್ಟು ಈ ದೀಪೋತ್ಸವದಲ್ಲಿ ಭಾಗಿಯಾಗಲು ಅಯೋಧ್ಯೆಗೆ ಆಗಮಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ದೀಪ ಪ್ರಜ್ವಲನೆಯಾಗಲಿದೆ.

ಇನ್ನು, ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಅವರು ವಿಶೇಷ ಪೂಜೆ, ದೀಪ ಬೆಳಗುವುದು ಸೇರಿ ಹಲವು ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮೋದಿ ಅವರಿಗೆ ಸಾಥ್‌ ನೀಡಲಿದ್ದಾರೆ.

ಈ ದೀಪೋತ್ಸವದಲ್ಲಿ ಭಾಗಿಯಾಗಿ ಪ್ರಧಾನಿ ಮೋದಿ ಅವರು 4 ಸಾವಿರ ಕೋಟಿ ರೂಪಾಯಿ ವೆಚ್ಚದ 66 ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈಗಾಗಲೇ ಲಕ್ಷಾಂತರ ಜನ ಅಯೋಧ್ಯೆಯಲ್ಲಿ ಬೀಡು ಬಿಟ್ಟಿರುವ ಕಾರಣ ನಗರಕ್ಕೆ ಹೊಸ ಕಳೆ ಬಂದಿದೆ. ಮೋದಿ ಆಗಮನದ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ.

Scroll to Top