Saturday, July 27, 2024
Homeಸುದ್ದಿಕರಾವಳಿಪ್ರಸನ್ನಾಭಿವಂದನಮ್ ಸಂಪನ್ನ ; ಶ್ರೀಗಳಿಗೆ ಮುತ್ತು ರತ್ನಗಳ ಅಭಿಷೇಕ : ಭಾರತಕ್ಕೆ ಸಂತರ ತಪಸ್ಸಿನ...

ಪ್ರಸನ್ನಾಭಿವಂದನಮ್ ಸಂಪನ್ನ ;
ಶ್ರೀಗಳಿಗೆ ಮುತ್ತು ರತ್ನಗಳ ಅಭಿಷೇಕ : ಭಾರತಕ್ಕೆ ಸಂತರ ತಪಸ್ಸಿನ ಶಕ್ತಿ -ಪ್ರತಾಪಚಂದ್ರ ಸಾರಂಗಿ

ವೇದ ಕಾಲದಿಂದ ಇಂದಿನ ತನಕವೂ ಋಷಿಮುನಿಗಳ ,ಸಾಧು ಸಂತರ ತಪಸ್ಸಿನ ಧಾರೆ ಈ ನೆಲದಲ್ಲಿ ಗುಪ್ತಗಾಮಿನಿಯಾಗಿ ಅನೂಚಾನವಾಗಿ ಹರಿದುಬಂದಿದೆ. ಅದೇ ಭಾರತಕ್ಕೆ ದಿವ್ಯ ಶಕ್ತಿಯಾಗಿ ಒದಗಿ ದೇಶದ ಶಾಂತಿ ಸುಭಿಕ್ಷೆ ಸಮೃದ್ಧಿಯನ್ನು ರಕ್ಷಿಸುವಲ್ಲಿ ಸದಾ ಶ್ರೀರಕ್ಷೆಯಾಗಿದೆ . ಪರಿಣಾಮವಾಗಿ ಭಾರತ ಇವತ್ತು ಜಗತ್ತಿನ ಬಲಿಷ್ಠ ಆರ್ಥಿಕ ಶಕ್ತಿಯಾಗಿ ಮತ್ತು ವಿಶ್ವಕ್ಕೇ ಮಾರ್ಗದರ್ಶನ ಮಾಡುವ ದಿವ್ಯ ಶಕ್ತಿಯನ್ನು ಪಡೆದು ಬೆಳೆದಿದೆ ಎಂದು ಕೇಂದ್ರ ಸರ್ಕಾರದ ಮಾಜಿ ಸಚಿವ ಪ್ರತಾಪಚಂದ್ರ ಸಾರಂಗಿಯವರು ಹೇಳಿದ್ದಾರೆ.



ನವದೆಹಲಿ ವಸಂತ್ ಕುಂಜ್ ಪೇಜಾವರ ಮಠದ ಶಾಖೆ ಶ್ರೀ ಕೃಷ್ಣ ಧಾಮದ ಆವರಣದಲ್ಲಿ ನಡೆದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ 60ನೇ ಜನವದರ್ಧಂತಿ ಪ್ರಸನ್ನಾಭಿವಂದನಮ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಚೆಂಡೆ, ವಾದ್ಯ ಮಂತ್ರಘೋಷ ಗಳೊಂದಿಗೆ ಶ್ರೀಗಳಿಗೆ ಮುತ್ತು ರತ್ನಗಳಿಂದ ಅಭಿಷೇಕ ನೆರವೇರಿಸಿ ನಿಧಿ ಸಮರ್ಪಿಸಿ ಅಭಿವಂದನೆ ಸಲ್ಲಿಸಲಾಯಿತು.

ಬಳಿಕ ನಡೆದ ಸಭೆಯಲ್ಲಿ ಕೇಂದ್ರದ ಕೃಷಿ ಮತ್ತು ರೈತಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ ಪೇಜಾವರ ಶ್ರೀಗಳು ತಮ್ಮ‌ಗುರು ಶ್ರೀ ವಿಶ್ವೇಶತೀರ್ಥರ ದಾರಿಯಲ್ಲೆ ನಡೆಯುತ್ತಾ ದೇಶಾದ್ಯಂತ ನಿರಂತರ ಸಂಚರಿಸುತ್ತಾ ಧರ್ಮಪ್ರಸಾರ ಕಾರ್ಯ ಮತ್ತು ಹತ್ತಾರು ಸೇವಾ ಚಟುವಟಿಕೆಗಳ ಮೂಲಕ ರಾಷ್ಟ್ರದ ಒಳಿತಿಗೆ ಶ್ರಮಿಸುತ್ತಿರುವುದು ಅಭಿನಂದನೀಯ, ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ದಕ್ಷಿಣ ಭಾರತದ ಪ್ರತಿನಿಧಿಯಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ .ದೇಶದ ರಾಜಧಾನಿಯಲ್ಲಿ ಅವರನ್ನು ಅಭಿವಂದಿಸುವ ಕಾರ್ಯ ನಡೆದಿರುವುದು ಅತ್ಯಂತ ಖುಷಿಯ ವಿಚಾರ ಎಂದರು.

ಬೆಂಗಳೂರು ಪೂರ್ಣ ಪ್ರಜ್ಞ ಸಂಶೋಧನ ಕೇಂದ್ರದ ನಿರ್ದೇಶಕ ಡಾ ಎ ವಿ ನಾಗಸಂಪಿಗೆಯವರು ಅಭಿನಂದನಾ ಭಾಷಣಗೈದರು.

ವಿಶ್ವ ಹಿಂದು ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ ಅಲೋಕ್ ಕುಮಾರ್ , ರಾಜಸ್ಥಾನದ ಪ್ರೇಮ ಪೀಠದ ( ಮೀರಾಬಾಯಿ ಆಶ್ರಮ) ಲಲಿತ್ ಮೋಹನ್ ಓಝಾ, ದೆಹಲಿ ಕೈಗಾರಿಕಾ ಇಲಾಖೆಯ ರಂಜಿತ್ ಸಿಂಗ್, ದೆಹಲಿ ಪೇಜಾವರ ಮಠದ ವಿಶ್ವಸ್ಥರಾದ ಅರವಿಂದ ಕಟ್ಟೀಮನಿ ಮೊದಲಾದವರು ಉಪಸ್ಥಿತರಿದ್ದರು .

ಲಾಲ್ ಬಹದ್ದೂರ್ ಶಾಸ್ತ್ರಿ ಸಂಸ್ಕೃತ ವಿವಿ ಕುಲಪತಿ ಪ್ರೊ ಮಣಿಕಂಠ ತ್ರಿಪಾಠಿ‌ ಹಾಗೂ ಅನೇಕ ಪ್ರಾಧ್ಯಾಪಕರು, ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಡಾ ಶ್ರೀನಿವಾಸ ವರಖೇಡಿ, ವಿದ್ವಾನ್ ವೀರನಾರಾಯಣ ಪಾಂಡುರಂಗಿ, ರಾಮವಿಠಲಾಚಾರ್ಯ , ಕೃಷ್ಣಕುಮಾರ ಆಚಾರ್ಯ , ಕೇಂದ್ರೀಯ ಗುಪ್ತಚರ ಇಲಾಖೆ ಅಧಿಕಾರಿ ಪುಷ್ಪಾ ರಾವ್ , ರಾಷ್ಟ್ರಪತಿಗಳ ಅಧೀನ ಕಾರ್ಯದರ್ಶಿ ಪದ್ಮ ಅಗ್ನಿಹೋತ್ರಿ , ಸುಪ್ರೀಂಕೋರ್ಟ್ ನ್ಯಾಯವಾದಿ ನಾಗೇಶ್ ಭಟ್ ಪುತ್ತಿಗೆ , ದೆಹಲಿಯ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ವಿಶ್ವ ಹಿಂದೂ ಪರಿಷತ್ತಿನ ಮುಖಂಡರು ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.‌

ಪೆರಂಪಳ್ಳಿ ವಾಸುದೇವ ಭಟ್ ಕಾರ್ಯಕ್ರಮ‌ ಸಂಯೋಜನೆಯಲ್ಲಿ ಸಹಕರಿಸಿ ವಂದನಾರ್ಪಣೆಗೈದರು. ಮಠದ ಪ್ರಧಾನ ವ್ಯವಸ್ಥಾಪಕ ವಿದ್ವಾನ್ ವಿಠೋಬಾಚಾರ್ಯ, ಶ್ರೀನಿಧಿ ವಿ .ರಾಮಕಥಾ ಯಾತ್ರೆಯ ಉಸ್ತುವಾರಿ ವಿಶ್ವಾಸ್ ಹೆಬ್ಬಾರ್, ನಿಕಟಪೂರ್ವ ಮೆನೇಜರ್ ದೇವಿಪ್ರಸಾದ ಭಟ್ , ಹಾಗೂ ಇತರೆ ಅಧ್ಯಾಪಕರು ವಿಶೇಷವಾಗಿ ಶ್ರಮಿಸಿದರು. ಸಭೆಯ ಅವಿನಾಶ್ ಕುಮಾರ್ ಮತ್ತು ರಿಂದನಾ ರಹಸ್ಯ ಅವರಿಂದ ಹಿಂದುಸ್ಥಾನಿ ಗಾಯನ ನಡೆಯಿತು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News