ಹಾಸನ : ಆ ತಾಯಿಯ ದರ್ಶನ ವರುಷಕ್ಕೊಮ್ಮೆ ಮಾತ್ರ. ಒಮ್ಮೆ ಹಚ್ಚಿಟ್ಟ ಮಹಾದೀಪ ವರ್ಷಪೂರ್ತಿಯೂ ಉರಿಯುತ್ತದೆ. ಮುಡಿಸಿದ ಹೂಗಳು ಬಾಡಲ್ಲ. ಇಂತಹ ಪವಾಡಗಳನ್ನು ಸೃಷ್ಟಿಸಿ ಬೇಡಿದ ವರವನ್ನ ನೀಡುವ ಹಾಸನಾಂಬೆಯ ದರ್ಶನ ಇಂದಿನಿಂದ ಆರಂಭವಾಗಲಿದೆ. ಲಕ್ಷಾಂತರ ಭಕ್ತರು ಹರಿದು ಬರುವುದರಿಂದ ಜಿಲ್ಲಾಡಳಿತ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ.
ಮುಡಿಸಿದ ಹೂಗಳು ವರ್ಷವಾದ್ರೂ ಬಾಡೋದಿಲ್ಲ, ನೈವೇದ್ಯ ಕೂಡ ಹಾಳಾಗಲ್ಲ. ಇಂತಹ ಹಲವು ಮಹಿಮೆಗಳನ್ನು ಹೊಂದಿರುವ ಹಾಸನದ ಅಧಿದೇವತೆ, ಶಕ್ತಿದೇವತೆ, ಹಲವು ಪವಾಡಗಳನ್ನ ಸೃಷ್ಟಿಸಿ ಭಕ್ತರನ್ನ ತನ್ನೆಡೆಗೆ ಸೆಳೆದು, ಬೇಡಿದ್ದನ್ನು ನೀಡುವ ಹಾಸನಾಂಬೆ ದೇವಿ ದೇವಸ್ಥಾನದ ಗರ್ಭಗುಡಿಯ ದ್ವಾರ ಬಾಗಿಲು ಇಂದಿನಿಂದ ತೆರೆಯಲಿದೆ.
ಇಂದಿನಿಂದ ಅಂದ್ರೆ ನವೆಂಬರ್ 2 ರಿಂದ 15 ತಾರೀಖಿನವರೆಗೆ ದೇವಿಯ ದ್ವಾರಗಳು ತೆರೆದಿರುತ್ತದೆ. ಜಿಲ್ಲಾಡಳಿತ ಮತ್ತು ಅರ್ಚಕರ ಸಮ್ಮುಖದಲ್ಲಿ ಮಧ್ಯಾಹ್ನ 12.30 ಬಾಗಿಲನ್ನು ತೆಗೆಯಲಾಗುತ್ತದೆ. ನಂತರ ಒಂದು ವರ್ಷದಿಂದ ಸಂಪ್ರೋಕ್ಷಣೆ ನಡೆಯುತ್ತದೆ. ಮೊದಲನೇಯ ಮತ್ತು ಕಡೆಯ ಅಂದ್ರೆ ನವೆಂಬರ್ 2 ರಂದು ನಂತರ 15ಕ್ಕೆ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿಲ್ಲ ಒಟ್ಟು 12 ದಿನಗಳ ಕಾಲ ಈ ಬಾರಿ ಸಾರ್ವಜನಿಕರ ದರ್ಶನಕ್ಕೆ ಜಿಲ್ಲಾಡಳಿತ ಅನುವು ಮಾಡಿಕೊಡುತ್ತಿದೆ. ಹೀಗಾಗಿ ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆ ಇರುವುದರಿಂದ ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಭಕ್ತರು ಸರತಿ ಸಾಲಿನಲ್ಲಿ ನಿಲ್ಲಲು ಉದ್ದದ ಸಾಲುಗಳನ್ನ ನಿರ್ಮಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನ ಮಾಡಿಕೊಂಡಿದೆ. ಅಲ್ಲದೇ ಬರುವ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಪ್ರತ್ಯೇಕ ಮಳಿಗೆಗಳನ್ನ ಮಾಡಿದೆ.
ಭಕ್ತಿಯಿಂದ ಬೇಡಿದ ವರವನ್ನ ಕರುಣಿಸುವ ಶಕ್ತಿದೇವತೆ ಹಾಸನಾಂಬೆ ದರ್ಶನ ಪಡೆಯಲು ಬೇರೆ ಜಿಲ್ಲೆಗಳಿಂದ ಮಾತ್ರವಲ್ಲ ಬೇರೆ ರಾಜ್ಯಗಳಿಂದಲೂ ಆಗಮಿಸುತ್ತಾರೆ. ಪ್ರತಿ ವರ್ಷ ಅಶ್ವೀಜ ಮಾಸದ ಮೊದಲನೇ ಗುರುವಾರ ತಾಯಿಯ ಬಾಗಿಲು ತೆರೆಯಲಾಗುತ್ತದೆ. ದೀಪಾವಳಿಯ ಮರುದಿನ ಬಾಗಿಲನ್ನು ಮುಚ್ಚಲಾಗುತ್ತದೆ. ವರ್ಷಕ್ಕೊಮ್ಮೆ ಮಾತ್ರ ದರುಶನ ಭಾಗ್ಯ ನೀಡುವ ತಾಯಿಯ ಮಹಿಮೆಯೂ ಅಪಾರವಾಗಿದೆ. 11ನೇ ಶತಮಾನದಲ್ಲಿ ಶ್ವೇತನಾಯಕ ಎನ್ನುವ ಪಾಳೆಗಾರರ ಕಾಲದಲ್ಲಿ ಉತ್ತರ ಭಾರತದಿಂದ ಬಂದ ಏಳು ಮಾತೃಕೆಯರ ಪೈಕಿ ಹಾಸನಾಂಬೆ ಕೂಡ ಒಬ್ಬ ದೇವತೆ. ಸಿಂಹಾಸನಪುರ ಎಂದೇ ಪ್ರಸಿದ್ಧವಾಗಿದ್ದ ಈ ಹಾಸನದ ಪ್ರಕೃತಿ ಸೌಂದರ್ಯವನ್ನ ನೋಡಿ ಇಲ್ಲಿಯೇ ನೆಲೆಯೂರಿದ್ರು ಎನ್ನುವ ಐತಿಹ್ಯವಿದೆ.
ಹಾಸನಾಂಬೆಯ ಜೊತೆಯಲ್ಲಿಯೇ ಇಬ್ಬರು ಹಾಗೂ ನಗರದ ದೇವಿಗೆರೆಯಲ್ಲಿ ಮೂವರು ಹಾಗೂ ಆಲೂರಿನ ಹೊಸಕೋಟೆಯಲ್ಲಿ ನೆಲೆಸಿದ್ದರಂತೆ. ಹಾಸನಾಂಬೆ ತಾಯಿಯ ದೇವಸ್ಥಾನವನ್ನು ಕೃಷ್ಣಪ್ಪನಾಯಕ ನಿರ್ಮಾಣ ಮಾಡಿದ್ದರು. ಆಗಿನಿಂದಲೂ ಈಗಿನವರೆಗೂ ತಾಯಿಯ ಮಹಿಮೆ ಬೆಳೆಯುತ್ತ ಸಾಗರದಷ್ಟು ಭಕ್ತರನ್ನ ತನ್ನತ್ತ ಸೆಳೆಯುತ್ತಿದ್ದಾಳೆ ತಾಯಿ. ಬರೋ ಭಕ್ತರಿಗೆ ಜಿಲ್ಲಾಡಳಿತದಿಂದ ಬೇಕಾದ ಸಕಲ ವ್ಯವಸ್ಥೆಗಳನ್ನ ಮಾಡಲಾಗಿದೆ ಅಂತಾರೆ ಉಪವಿಭಾಗಾಧಿಕಾರಿ ಮಾರುತಿ. ತನ್ನ ಅಪಾರ ಕೀರ್ತಿ, ಮಹಿಮೆ, ಪವಾಡಗಳಿಂದ ಬೇಡಿದ್ದನ್ನು ನೀಡುವ ಮಹಾತಾಯಿಯ ದರ್ಶನಕ್ಕೆ ಜಿಲ್ಲಾಡಳಿತ ಸಂಪೂರ್ಣವಾಗಿ ಸಿದ್ಧಗೊಂಡಿದೆ.
ಸದ್ಯ ತಾಯಿಯ ಎಲ್ಲಾ ಆಭರಣಗಳನ್ನು ಜಿಲ್ಲಾ ಖಜಾನೆಯಿಂದ ತರಲಾಗಿದೆ. ತಾಯಿಗೆ ವಿಶೇಷ ಪೂಜಾ ಕೈಂಕರ್ಯಗಳಿಗೆ ಬೇಕಾದ ಎಲ್ಲ ವ್ಯವ್ಯಸ್ಥೆಳನ್ನು ಪ್ರಧಾನ ಅರ್ಚಕ ನಾಗರಾಜ್ ನೇತೃತ್ವದಲ್ಲಿ ಮಾಡಿಕೊಳ್ಳಲಾಗಿದೆ. ಒಟ್ಟಾರೆ 12 ದಿನಗಳ ಕಾಲ ಹಾಸನಾಂಬೆಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ.
ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ಜಾತ್ರಾ ಮಹೋತ್ಸವ : ಬಾಗಿಲ ತೆರೆದು ದರುಶನ ನೀಡಲಿದ್ದಾಳೆ ದೇವಿ
