ಉಡುಪಿ, ನ 01: ಕುಂಜಿಬೆಟ್ಟುವಿನಲ್ಲಿ ನಡೆದಿದ್ದ ಮನೆಯೊಂದರಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಆರೋಪಿಯನ್ನು ಉಡುಪಿ ನಗರ ಠಾಣಾ ಪೊಲೀಸರು ಬಂಧಿಸಿದ್ದು, ಕಳವುಗೈದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಬೆಂಗಳೂರಿನ ಭುವನೇಶ್ವರಿ ನಗರದ ಮಂಜುನಾಥ್ ಎಂದು ಗುರುತಿಸಲಾಗಿದೆ. ಈತ ಅಕ್ಟೋಬರ್ 9ರಂದು, ಕುಂಜಿಬೆಟ್ಟುವಿನ ಅಮ್ಮುಂಜೆ ವಿಠಲ್ ದಾಸ್ ನಾಯಕ್ ಎಂಬವರ ಮನೆಯ ಬೀಗ ಮುರಿದು ಚಿನ್ನಾಭರಣ, ಬೆಳ್ಳಿಯ ಆಭರಣಗಳನ್ನು ಕಳವುಗೈದಿದ್ದ. ಇವುಗಳ ಒಟ್ಟು ಅಂದಾಜು ಮೌಲ್ಯ ರೂ. 73,06,800 ಆಗಿತ್ತು.
ಪ್ರಕರಣದಲ್ಲಿ ಆರೋಪಿ ಮತ್ತು ಸ್ವತ್ತು ಪತ್ತೆಯ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್. ರವರು ಉಡುಪಿ ನಗರ ಪೊಲೀಸ್ ಠಾಣೆಯ PSI ಪುನೀತ್ ಕುಮಾರ್ ಜಿ.ಇ. ರವರ ನೇತೃತ್ವದಲ್ಲಿ, ವಿಶೇಷ ತಂಡವನ್ನು ನೇಮಿಸಿದ್ದು, ಅದರಂತೆ ಅ. 31 ರಂದು ಪ್ರಕರಣದ ಆರೋಪಿ ಮಂಜುನಾಥನನ್ನು ಬಲಾಯಿಪಾದೆ ಜಂಕ್ಷನ್ ಬಳಿ ಈಕೋ ವಾಹನ ಸಮೇತ ವಶಕ್ಕೆ ಪಡೆದು ಪೋಲಿಸರು ದಸ್ತಗಿರಿ ಮಾಡಿದ್ದಾರೆ.
ಆರೋಪಿ ಬಳಿಯಿಂದ ಒಟ್ಟು 31,55,930 ರೂ. ಮೌಲ್ಯದ ಚಿನ್ನಾಭರಣ ಮತ್ತು 15,12,000 ರೂ. ಮೌಲ್ಯದ ಬೆಳ್ಳಿಯ ಆಭರಣ, ಕಳವು ಮಾಡಲು ನಕಲಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿ ಉಪಯೋಗಿಸುತಿದ್ದ 2,50,000 ಲಕ್ಷ ರೂ. ಮೌಲ್ಯದ ಕಾರು ಮತ್ತು ಕಬ್ಬಿಣದ ರಾಡ್ ಗಳನ್ನು ವಶಪಡಿಸಲಾಗಿದೆ. ಆರೋಪಿಯು ಬ್ರಹ್ಮಾವರ, ತರೀಕೆರೆ, ಅರಸೀಕೆರೆ, ಮತ್ತು ಬಾಣಾವರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣಗಳಲ್ಲಿ ಕೂಡಾ ಭಾಗಿಯಾಗಿದ್ದ. ಈತನ ವಿರುದ್ದ ಈಗಾಗಲೇ ಬೆಂಗಳೂರು, ಕೋಲಾರ, ತುಮಕೂರು, ದಾವಣಗೆರೆ ಮತ್ತು ಚಿಕ್ಕಬಳ್ಳಾಪುರದ ವಿವಿಧ ಪೋಲಿಸ ಠಾಣೆಗಳಲ್ಲಿ ಸುಮಾರು 60 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.