ಕುತ್ಯಾರು ವಿದ್ವಾನ್‌ ಶಂಭುದಾಸ ಗುರೂಜಿ ನಿಧನ

ಶಿರ್ವ, ಅ.31: ಕುತ್ಯಾರು ಪರಶುರಾಮೇಶ್ವರ ಕ್ಷೇತ್ರ ಮತ್ತು ಕುತ್ಯಾರು ಸೂರ್ಯಚೈತನ್ಯ ಗ್ಲೋಬಲ್‌ ಅಕಾಡೆಮಿ ಹೈಸ್ಕೂಲ್‌ನ ಸಂಸ್ಥಾಪಕ, ಜೋತಿಷ ವಿಷಾರದ ಕುತ್ಯಾರು ವಿದ್ವಾನ್‌ ಶಂಭುದಾಸ ಗುರೂಜಿ (79) ಅವರು ಅ.31ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಕೆಮಿಕಲ್‌ ಎಂಜಿನಿಯರ್‌ ಆಗಿ ಹಲವಾರು ವರ್ಷಗಳ ಕಾಲ ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದ ಅವರು ಭಂಡಾರಿ ಸಮಾಜದ ಧುರೀಣರಾಗಿ, ಬಾರ್ಕೂರಿನ ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸೇವಾ ಟ್ರಸ್ಟ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಶಿಕ್ಷಣ ಪ್ರೇಮಿಯಾಗಿದ್ದು, ಸಮಾಜದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದರೊಂದಿಗೆ ಕುತ್ಯಾರು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದರು.

ಜೋತಿಷ ವಿದ್ವಾನ್‌ ಆಗಿದ್ದ ಅವರು ಕುತ್ಯಾರು ಗ್ರಾಮದ ಅಭ್ಯುದಯಕ್ಕಾಗಿ ಗ್ರಾಮದಲ್ಲಿ ಅತಿರುದ್ರ ಮಹಾಯಾಗವನ್ನು ನೆರವೇರಿಸಿದ್ದು, ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾಗಿದ್ದ ಬಿ.ಎಸ್‌ ಯಡಿಯೂರಪ್ಪ, ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೆಂದ್ರ ಹೆಗ್ಗಡೆ, ಸಂಸದ ಡಿ.ವಿ ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

ಅವರ ನಿಧನಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌,ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಕುತ್ಯಾರು ನವೀನ್‌ ಶೆಟ್ಟಿ ಮತ್ತಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.

You cannot copy content from Baravanige News

Scroll to Top