ಬ್ರಹ್ಮಾವರ : ಬ್ರಹ್ಮಾವರದಲ್ಲಿರುವ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ಲಿಮಿಟೆಡ್ ಅಧೀನದ ಸಕ್ಕರೆ ಕಾರ್ಖಾನೆಗೆ ಸಂಬಂಧಪಟ್ಟಂತೆ ಅವ್ಯವಹಾರ ಎಸಗಿರುವ ಆರೋಪದಲ್ಲಿ 25 ಮಂದಿಯ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ಸೇರಿ 2021ರ ಆ.18ರಿಂದ 2022ರ ಡಿ.5ರ ಮಧ್ಯಾವಧಿಯಲ್ಲಿ ಕಾರ್ಖಾನೆಯ ಸಕ್ಕರೆ ಸ್ಥಾವರ ಮತ್ತು ಯಂತ್ರೋಪಕರಣಗಳ ಮಾರಾಟಕ್ಕೆ ಸಂಬಂಧಿಸಿದಂತೆ ಟೆಂಡರ್ ಕಮ್ ಹರಾಜು ಪ್ರಕ್ರಿಯೆಯಲ್ಲಿ ವಂಚನೆ, ದಾಖಲೆಗಳನ್ನು ರಚಿಸುವಲ್ಲಿ ಅವರ ಪಾತ್ರವನ್ನು ದುರುಪಯೋಗಪಡಿಸಿಕೊಂಡಿದ್ದಾ ರೆ. ಅಲ್ಲದೆ ವೈಯಕ್ತಿಕ ಲಾಭ ಪಡೆಯುವ ಉದ್ದೇಶದಿಂದ ಅವರು ಪರಸ್ಪರ ಪಿತೂರಿ ನಡೆಸಿ ರೈತರಿಗೆ ಮತ್ತು ಸರಕಾರಕ್ಕೆ 14 ಕೋಟಿ ರೂ.ಗಿಂತ ಕಡಿಮೆ ಇಲ್ಲದಷ್ಟು ಆರ್ಥಿಕ ನಷ್ಟವನ್ನು ಉಂಟು ಮಾಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಕುಂದಾಪುರದ ಸತೀಶ್ ನೀಡಿದ ನ್ಯಾಯಾಲಯದ ಖಾಸಗಿ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 420, 405, 415, 418, 463, 464, 465, 468, 474, 120 ಆ ಜೊತೆಗೆ 34 ಐಪಿಸಿ ಕಲಂ: 23 ಕರ್ನಾಟಕ ಟ್ರಾನ್ಸ್ ಫರೆನ್ಸಿ ಇನ್ ಪಬ್ಲಿಕ್ ಪ್ರೊಕ್ಯುರ್ಮೆಂಟ್ಸ್ 1999 ರೂಲ್ಸ್ನಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.