ಚಿಕ್ಕಮಗಳೂರ, ಅ.25: ಹುಲಿ ಚರ್ಮದ ಮೇಲೆ ವಿನಯ್ ಗುರೂಜಿ ಕುಳಿತುಕೊಂಡಿರೋ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿತ್ತು. ಫೋಟೋ ವೈರಲ್ ಆದ ಬೆನ್ನಲ್ಲೇ ಈ ಬಗ್ಗೆ ವಿನಯ್ ಗುರೂಜಿ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ವಿನಯ್ ಗುರೂಜಿ ಅವರು, ಆರೋಪವನ್ನು ಯಾರು ಬೇಕಾದರೂ ಮಾಡಬಹುದು, ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಹೀಗೆ ಎಲ್ಲರ ಮೇಲೂ ಆರೋಪ ಮಾಡುತ್ತಾರೆ. ಪ್ರಪಂಚದಲ್ಲಿ ಸಾಮಾಜಿಕ ಕೆಲಸ ಮಾಡಿಕೊಂಡಿದ್ದರೇ ಅವರಿಗೆ ಮೊದಲು ಸಿಗುವುದೇ ದಕ್ಷಿಣೆ ಆರೋಪ. ಅದು ಅವರ ಕೆಲಸ ಮಾಡಿಕೊಳ್ಳಲಿ. ಯಾರು ಬಸವಣ್ಣನವರನ್ನು, ಶ್ರೀ ಕೃಷ್ಣನನ್ನು ಒಪ್ಪಿಕೊಂಡಿಲ್ಲ. ಅವರವರ ಇಚ್ಚೆಗೆ ಬಿಟ್ಟಿದ್ದು. ಹೀಗಾಗಿ ಉತ್ತರ ಕೊಡುವುದು ನಮ್ಮ ಹಕ್ಕು. ನಾವು ಎಲ್ಲ ರೀತಿಯಲ್ಲೂ ದಾಖಲೆಯನ್ನು ಇಟ್ಟುಕೊಂಡಿದ್ದೇವೆ.
ಆ ಹುಲಿ ಚರ್ಮವನ್ನು ಶಿವಮೊಗ್ಗದ ಅಮರೇಂದ್ರ ಕಿರೀಟಿ ನೀಡಿದ್ದರು. ಅದು ಅವರ ತಾತನ ಕಾಲದಿಂದಲೂ ಮನೆಯಲ್ಲಿ ಇತ್ತು. ಮನೆಯಲ್ಲಿ ಇರಬಾರದು ಅಂತ ನಮಗೆ ತಂದು ಕೊಟ್ಟಿದ್ದರು. ಅದಕ್ಕೆ ಎಲ್ಲಾ ದಾಖಲೆ ಕೂಡ ಇದೆ. ಅರಣ್ಯ ಅಧಿಕಾರಿಗಳು ಅವರಿಗೆ ದಾಖಲೆ ನೀಡಿದ್ದರು. ಒಂದೇ ಒಂದು ಫೋಟೋ ತೆಗೆದಿದ್ದು, ಅದು ಸಾಕಷ್ಟು ವೈರಲ್ ಆಗಿತ್ತು. ಅದಕ್ಕೆ ಆ ಚರ್ಮವನ್ನ ಅವರಿಗೆ ನೀಡಿದ್ದೇವು. ಅವರು ಅದನ್ನ ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ. ಹುಲಿ ಚರ್ಮದ ಕುರಿತು ಪ್ರತಿಯೊಂದಕ್ಕೂ ಎಲ್ಲಾ ದಾಖಲೆ ಇದೆ. ಅಧಿಕಾರಿಗಳು ಆಶ್ರಮಕ್ಕೆ ಬಂದಿದ್ದರು. ಎಲ್ಲಾ ದಾಖಲೆ ಅವರಿಗೆ ನೀಡಿದ್ದೇವೆ.
ತನಿಖೆಗೆ ಕರೆದರೂ ಹೋಗುತ್ತೇನೆ ಎಂದಿದ್ದಾರೆ.
ವಿನಯ್ ಗುರೂಜಿ ಅವರು ಈ ರೀತಿ ಹೇಳಿಕೆ ಕೊಟ್ಟ ಬಳಿಕ ಅವರ ಗೌರಿಗದ್ದೆ ಆಶ್ರಮಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ.