ತುಳುನಾಡಿನ ನವರಾತ್ರಿಗೆ ವಿಶೇಷವಾದ ಗೌಜಿ.. ಹುಲಿ ಕುಣಿತ ಕಂಡು ದಂಗಾದ ಹರ್ಭಜನ್ ಸಿಂಗ್

ತುಳುನಾಡಿನ ಸಾಂಪ್ರದಾಯಿಕ ಕಲೆ ಹುಲಿವೇಷ. ಹುಲಿ ವೇಷ ತುಳುನಾಡಿನ ಶ್ರೀಮಂತ ಸಂಸ್ಕೃತಿ ಪರಂಪರೆ ಮತ್ತು ಹೆಮ್ಮೆಯ ಪ್ರತೀಕ. ಈ ಹುಲಿವೇಷ ನರ್ತನ ಈಗ ಸ್ಪರ್ಧೆಗೂ ತೆರೆದುಕೊಂಡಿದೆ. ಮಂಗಳೂರಿನ ಉರ್ವಾ ಮೈದಾನದಲ್ಲಿ ಪಿಲಿನಲಿಕೆ ಉತ್ಸವ ಕಳೆ ಕಟ್ಟಿತ್ತು. ಸಿನಿಮಾ ಮತ್ತು ಕ್ರಿಕೆಟ್​​​ ದಿಗ್ಗಜರು ಭಾಗಿಯಾಗಿ ಸಂಭ್ರಮಿಸಿದ್ರು.

ನವರಾತ್ರಿ, ದಸರಾ, ತುಳುನಾಡಿನಲ್ಲೂ ಸಂಭ್ರಮ, ಸಡಗರ. ಮಕ್ಕಳಿಂದ ಹಿಡಿದು ಹಿರಿಯರ ತನಕ ಅದೇನೋ ಎಲ್ಲೆಲ್ಲೂ ಹಬ್ಬದ ಖುಷಿ. ತುಳುನಾಡಿನ ನವರಾತ್ರಿಗೆ ವಿಶೇಷವಾದ ಗೌಜಿ. ಈ ನವರಾತ್ರಿ ಸಂಭ್ರಮವನ್ನ ಮತ್ತಷ್ಟು ಕಳೆಗಟ್ಟಿಸೋದು ಕರಾವಳಿಯ ಹುಲಿವೇಷದ ಹೆಜ್ಜೆಕುಣಿತ.

ತಾಸೆ, ಡೋಲಿನ ಕ್ರಮಬದ್ಧವಾದ ಸದ್ದಿಗೆ ಹುಲಿಗಳು ಹೆಜ್ಜೆ ಕುಣಿತ ಕಾಣೋದೇ ಕಣ್ಣಿಗೆ ಹಬ್ಬ. ಹುಲಿವೇಷದ ನರ್ತನದ ಹಿಂದೆ ನಮ್ಮ ಸಂಸ್ಕೃತಿ ಮಾತ್ರವಲ್ಲ ಧಾರ್ಮಿಕ ನಂಬಿಕೆ ಕೂಡ ಕಾರಣ. ನವರಾತ್ರಿ ಹುಲಿವೇಷ ಕೇವಲ ಜನಪದೀಯ ಕಲೆಯಾಗಿ ಉಳಿದಿಲ್ಲ. ಈಗ ಸ್ಪರ್ಧೆಗೂ ತೆರೆದ್ಕೊಂಡಿದೆ. ಈ ಬಾರಿ ಕಾಂಗ್ರೆಸ್​​​ ಯುವ ಮುಖಂಡ ಮಿಥುನ್​​​ ರೈ ಹಮ್ಮಿಕೊಂಡಿದ್ದ ಕಾರ್ಯಕ್ರಮ ಗಮನ ಸೆಳೆಯಿತು.

ಈ ಕಾರ್ಯಕ್ರಮದ ಮುಖ್ಯ ಹೈಲೆಟ್ಸ್​​ ಅಂದ್ರೆ ಕ್ರಿಕೆಟಿಗ ದಿಗ್ಗಜ ಹರ್ಭಜನ್ ಸಿಂಗ್​​. ಬಜ್ಜಿ ಜೊತೆಗೆ ಬಾಲಿವುಡ್​​​ನ ಖ್ಯಾತ ನಟ ಸುನೀಲ್​​​ ಶೆಟ್ಟಿ, ಪಿಲಿನಲಿಕೆ ಸೀಸನ್​ 8ರ ಅತಿಥಿ ಆಗಿ ಭಾಗಿ ಆಗಿದ್ರು. ಕ್ರಿಕೆಟಿಗ ಕೆ.ಎಲ್​ ರಾಹುಲ್​​ ಮಾವ ಸುನೀಲ್​​ ಶೆಟ್ಟಿ ಆಗಮಿಸುತ್ತಲೇ ಹರ್ಭಜನ್ ಸಿಂಗ್​​​ ಎದ್ದು ನಿಂತು ತಬ್ಬಿ ಸ್ವಾಗತಿಸಿದ್ರು. ಕೆಲ ಹೊತ್ತು ಇಬ್ಬರೂ ವೇದಿಕೆಯಲ್ಲಿ ಚರ್ಚಿಸಿದ್ದು ಇಂಟ್ರಸ್ಟಿಂಗ್​​​ ಆಗಿತ್ತು.

ಕಾರ್ಯಕ್ರಮದಲ್ಲಿ ಹರ್ಭಜನ್ ಮತ್ತು ಸುನೀಲ್​​ ಶೆಟ್ಟಿಗೆ ಅವರನ್ನ ಸನ್ಮಾನಿಸಲಾಯ್ತು. ಬಳಿಕ ಹುಲಿತಂಡಗಳ ಜೊತೆ ಫೋಟೋಗೆ ಪೋಸ್​​ ನೀಡಿದ್ರು. ಹುಲಿವೇಷಧಾರಿಗಳ ಎನರ್ಜಿಗೆ ಹರ್ಭಜನ್ ಸಿಂಗ್ ದಂಗಾದ್ರು. ತಮ್ಮ ಮೊಬೈಲ್​​ನಲ್ಲಿ ನೃತ್ಯದ ವಿಡಿಯೋವನ್ನ ಸೆರೆ ಹಿಡಿದು ಸಂಭ್ರಮಿಸಿದ್ರು.

ಉರ್ವಾ ಮೈದಾನದ ಹುಲಿವೇಷ ಸ್ಪರ್ಧೆಯಲ್ಲಿ 10 ಹುಲಿವೇಷ ತಂಡಗಳು ಭಾಗವಹಿಸಿದ್ವು. ತಾಸೆ, ಢೋಲಿನ ಬಡಿತಕ್ಕೆ ಹುಲಿವೇಷಧಾರಿಗಳು ಹೆಜ್ಜೆ ಹಾಕಿದ್ರು. ಇದೇ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಸ್ಯಾಂಡಲ್​ವುಡ್​​ನ ನಟ ರಾಜ್​ ಬಿ ಶೆಟ್ಟಿ ಕೂಡ ಭಾಗಿ ಆಗಿದ್ರು. ತಾಸೆ, ಡೋಲಿನ ಬಡಿತದ ಸದ್ದು ಕೇಳುತ್ತಲೇ ರಾಜ್ ಬಿ ಶೆಟ್ಟಿ ವೇದಿಕೆಯಲ್ಲಿ ಹುಲಿವೇಷದ ಹೆಜ್ಜೆ ಹಾಕಿದ್ರು.

ಒಟ್ಟಾರೆ, ಮಂಗಳೂರಿನಲ್ಲಿ ನಡೆದ ದಸರಾ ಪ್ರಯುಕ್ತದ ಹುಲಿವೇಷ ಕುಣಿತ ಕಾರ್ಯಕ್ರಮ ಜನಮನ ಸೂರೆಗೊಳ್ತು.

You cannot copy content from Baravanige News

Scroll to Top