Wednesday, September 18, 2024
Homeಸುದ್ದಿಕರಾವಳಿಉಡುಪಿ: 'ಹೆಚ್ಚು ಶಬ್ದ ಉಂಟುಮಾಡುವ ಸುಡುಮದ್ದುಗಳ ಬಳಕೆ ನಿಷೇಧ' - ಜಿಲ್ಲಾಧಿಕಾರಿ

ಉಡುಪಿ: ‘ಹೆಚ್ಚು ಶಬ್ದ ಉಂಟುಮಾಡುವ ಸುಡುಮದ್ದುಗಳ ಬಳಕೆ ನಿಷೇಧ’ – ಜಿಲ್ಲಾಧಿಕಾರಿ

ಉಡುಪಿ : ಕೇಂದ್ರ ಸರ್ಕಾರವು ಜೋಡಿಸಲಾದ ಸುಡುಮದ್ದುಗಳನ್ನೊಳಗೊಂಡ (ಗಾರ್ಲ್ಯಾಂಡ್) 125 ಡಿ.ಬಿ (ಎ1) ಗಿಂತ ಹೆಚ್ಚು ಮಟ್ಟದಲ್ಲಿ ಶಬ್ದವನ್ನು ಉಂಟು ಮಾಡುವ ಸುಡುಮದ್ದುಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿದ್ದು, ಇಂತಹ ಸುಡುಮದ್ದುಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆಯು ಕಾನೂನು ಬಾಹಿರವಾಗಿರುತ್ತದೆ. ಇದನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.


ದೀಪಾವಳಿ ಹಬ್ಬದ ಆಚರಣೆ ಸಮಯದಲ್ಲಿ ಪ್ರತಿಯೊಬ್ಬರೂ ಸುರಕ್ಷತೆಗಾಗಿ ಈ ಕೆಳಗಿನಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸುಡುಮದ್ದನ್ನು ಲೈಸೆನ್ಸ್ ಹೊಂದಿರುವ ವಿಶ್ವಾಸಾರ್ಹ ಮರಾಟಗಾರರಿಂದ ಖರೀದಿಸಬೇಕು, ಸುಡುಮದ್ದುಗಳ ಬಳಕೆಯನ್ನು ಯಾವಾಗಲೂ ಒಬ್ಬ ವಯಸ್ಕ ಪರಿವೀಕ್ಷಿಸಬೇಕು. ಸುಡುಮದ್ದುಗಳ ಮೇಲೆ ನಮೂದಿಸಲಾದ ಸುರಕ್ಷಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಸುಡುಮದ್ದುಗಳನ್ನು ಹೊತ್ತಿಸಲು ಮೇಣದ ಬತ್ತಿ ಅಥವಾ ಅಗರ್‌ಬತ್ತಿಯನ್ನು ಉಪಯೋಗಿಸಬೇಕು. ಬೆಂಕಿಯನ್ನು ಮೊದಲ ಹಂತದಲ್ಲೇ ಆರಿಸಲು ಯಾವಾಗಲೂ ಕೈಗೆ ಎಟುಕುವಂತೆ ಒಂದು ಬಾಟಲಿನಲ್ಲಿ ನೀರನ್ನು ಇರಿಸಿಕೊಳ್ಳಬೇಕು. ಆಕಾಶದ ಸುಡುಮದ್ದುಗಳನ್ನು ಸುರಕ್ಷಿತವಾಗಿ ಕೆಳಗೆ ಬೀಳಬಹುದಾದ ವಲಯದಲ್ಲಿ ಉಪಯೋಗಿಸಬೇಕು ಹಾಗೂ ಸುಡುಮದ್ದುಗಳನ್ನು ಸೂಕ್ತ ರೀತಿಯಲ್ಲಿ ನೀರಿನಲ್ಲಿ ಅದ್ದುವ ಮೂಲಕ ವಿಲೇವಾರಿ ಮಾಡಬೇಕು ಎಂದು ಹೇಳಿದೆ.

ಇನ್ನು ಸಿಡಿಸುವ ಜಾಗದಿಂದ ನಾಲ್ಕು ಮೀಟರ್ ದೂರದಲ್ಲಿ 125 ಡಿ.ಬಿ(ಎ1) ಅಥವಾ 145 ಪಿ.ಕೆ ಗಿಂತ ಅಧಿಕ ಶಬ್ದವನ್ನು ಉಂಟುಮಾಡುವ ಸುಡುಮದ್ದುಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದ್ದು, ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ಶಬ್ದವನ್ನುಂಟು ಮಾಡುವ ಸುಡುಮದ್ದುಗಳನ್ನು ಸುಡಬಾರದು. ಕೈಯಲ್ಲಿ ಹಿಡಿದಿರುವಾಗ ಸುಡುಮದ್ದುಗಳನ್ನು ಉರಿಸದೇ, ಅವುಗಳನ್ನು ಕೆಳಗಿಟ್ಟು ಹೊತ್ತಿಸಿ, ದೂರ ಹೀಗಬೇಕು. ಸುಡುಮದ್ದುಗಳನ್ನು ಹೊತ್ತಿಸಲು ಯಾವುದೇ ಧಾರಕ (ಪಾತ್ರೆ) ಗಳನ್ನು ಉಪಯೋಗಿಸಬಾರದು. ಮೇಲ್ಭಾಗದಲ್ಲಿ ತಡೆಗಳು ಇರುವಲ್ಲಿ, ಮರಗಳು, ಎಲೆಗಳು, ತಂತಿ ಇತ್ಯಾದಿಗಳು ಇರುವಲ್ಲಿ ಆಕಾಶದ ಸುಡುಮದ್ದುಗಳನ್ನು ಹೊತ್ತಿಸಬಾರದು. ಸುಡುಮದ್ದುಗಳು ಬಾಗಿಲು, ಕಿಟಕಿ, ಇತ್ಯಾದಿಗಳ ಮೂಲಕ ಪ್ರವೇಶಿಸುವುದನ್ನು ತಡೆಯಲು ಆಕಾಶದ ಸುಡುಮದ್ದುಗಳನ್ನು ಕಟ್ಟಡಕ್ಕೆ ನಿಕಟವಾಗಿ ಹೊತ್ತಿಸಬಾರದು. ಇದು ಕಟ್ಟಡದೊಳಗೆ ಬೆಂಕಿಗೆ ಕಾರಣವಾಗಬಹುದು. ಸುಡುಮದ್ದುಗಳನ್ನು ಎಂದಿಗೂ ಮನೆಯೊಳಗೆ ಹಾಗೂ ಸಾರ್ವಜನಿಕರು ನಡೆದಾಡುವ ಭಾಗದಲ್ಲಿ ಉಪಯೋಗಿಸಬಾರದು. ಸುಡುಮದ್ದುಗಳಿಂದ ಪ್ರಯೋಗ ಮಾಡುವುದಾಗಲೀ ಅಥವಾ ಸ್ವಂತವಾಗಿ ಸುಡುಮದ್ದುಗಳನ್ನು ತಯಾರು ಮಾಡಬಾರದು. ವಿಫಲವಾದ ಸುಡುಮದ್ದುಗಳನ್ನು ಪುನಃ ಉರಿಸದೇ, ಕೆಲವು ನಿಮಿಷಗಳ ಕಾಲ ವೀಕ್ಷಿಸಿ, ನಂತರ ಅವುಗಳನ್ನು ನೀರಿನಲ್ಲಿ ಅದ್ದಿ ವಿಲೇವಾರಿ ಮಾಡಬೇಕು. ನಕಲಿ ಅಥವಾ ಕಾನೂನು ಬಾಹಿರವಾದ ಸುಡುಮದ್ದುಗಳನ್ನು ಉಪಯೋಗಿಸಬಾರದು. ಮಕ್ಕಳು ಸ್ವತಃ ಸುಡುಮದ್ದುಗಳನ್ನು ಬಳಸಲು ಅನುವು ಮಾಡಿಕೊಡದೇ ಪೋಷಕರು ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News