ಮಲಯಾಳಂ ಚಿತ್ರರಂಗದ ಖ್ಯಾತ ಖಳನಾಯಕ ನಿಧನ

ಕೊಚ್ಚಿ, ಅ 18: ಮಲಯಾಳಂ ಚಿತ್ರರಂಗದಲ್ಲಿ ಖಳನಾಯಕನ ಪಾತ್ರಗಳ ಮೂಲಕ ಗಮನಸೆಳೆದಿದ್ದ ಖ್ಯಾತ ನಟ ಕುಂಡರ ಜಾನಿ(71) ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.


ಮೊನ್ನೆ ರಾತ್ರಿ ಕಾರಿನಲ್ಲಿ ತೆರಳುತ್ತಿದ್ದಾಗ ಕೊಲ್ಲಂ ಚಿನ್ನಕಡ ಎಂಬಲ್ಲಿ ಅಸ್ವಸ್ಥರಾಗಿದ್ದು, ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ಸುಮಾರು 9.30ರ ಹೊತ್ತಿಗೆ ನಿಧನರಾಗಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ. ಜಾನಿ ಅವರು 1979ರಲ್ಲಿ ತಮ್ಮ 23ನೇ ವಯಸ್ಸಿನಲ್ಲಿ ನಿತ್ಯ ವಸಂತಂ ಸಿನಿಮಾ ಮೂಲಕ ಕಲಾರಂಗ ಪ್ರವೇಶಿಸಿದ್ದರು. ಕುಂದರ ಅವರ ಸಹೋದರ ಅಲೆಕ್ಸ್‌ 2 ವಾರದ ಹಿಂದೆಯಷ್ಟೇ ನಿಧನರಾಗಿದ್ದರು.

ಜಾನಿ ಅವರಿಗೆ ವಿಶೇಷವಾಗಿ ಬ್ಲಾಕ್‌ಬಸ್ಟರ್‌ಗಳಾದ ‘ಕಿರೀಡಂ’ ಮತ್ತು ‘ಚೆಂಕೋಲ್’ ಹೆಸರು ತಂದುಕೊಟ್ಟಿತ್ತು. ನಾಲ್ಕು ದಶಕಗಳ ವೃತ್ತಿಜೀವನದಲ್ಲಿ, ಜಾನಿ ‘ಮೀನ್’, ‘ಪರಂಕಿಮಲ’, ‘ಕರಿಂಪನ’, ‘ಗಾಡ್‌ಫಾದರ್’, ‘ನಾಡೋಡಿಕಟ್ಟು’, ‘ಭರತ್‌ಚಂದ್ರನ್ ಐಪಿಎಸ್’, ‘ಒರು ವಡಕ್ಕನ್ ವೀರಗಾಥ’ ಸೇರಿದಂತೆ 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

Scroll to Top