ಡ್ರೋನ್ ಕ್ಯಾಮರಾದಲ್ಲಿ ಪತ್ತೆಯಾಯಿತು ನಿರ್ಮಿತಿ ಕೇಂದ್ರದ ಬ್ರಹ್ಮಾಂಡ ಭ್ರಷ್ಟಾಚಾರ

ಕಾರ್ಕಳ, ಅ.15: ಬೈಲೂರಿನ ಉಮಿಕಲ್ ಬೆಟ್ಟದ ತುದಿಯಲ್ಲಿ ಪ್ರತಿಷ್ಠಾಪಿಸಲಾದ ಕಂಚಿನದ್ದೆಂದು ಹೇಳಲಾದ ಪರಶುರಾಮನ ವಿಗ್ರಹ ನಿನ್ನೆ ಇದ್ದಕ್ಕಿದ್ದಂತೆ ಮಾಯವಾಗಿದ್ದು, ಮೂರ್ತಿಯ ಸುತ್ತ ಈಗ ದಪ್ಪದ ಕಪ್ಪು ಪ್ಲಾಸ್ಟಿಕ್ ಹೊದಿಕೆ ಹೊದಿಸಲಾಗಿದೆ. ಇದರಿಂದ ಮೂರ್ತಿ ಇರುವುದು ಗೊತ್ತಾಗುತ್ತಿರಲಿಲ್ಲ. ಅಲ್ಲದೇ ನಿಷೇಧವಿರುವುದರಿಂದ ಬೆಟ್ಟವನ್ನು ಪ್ರವೇಶಿಸಲು ಯಾರಿಗೂ ಅವಕಾಶವನ್ನೂ ನೀಡಲಾಗುತ್ತಿಲ್ಲ.

ಈ ನಡುವೆ ಇಂದು ಡ್ರೋನ್ ಕ್ಯಾಮರಾವನ್ನು ಬಳಸಿ ಹೊದಿಕೆ ಯೊಳಗೇನಿದೆ ಎಂಬುದನ್ನು ಪರಿಶೀಲಿಸಲಾ ಗಿದ್ದು, ಇದರಲ್ಲಿ ನಿರ್ಮಿತಿ ಕೇಂದ್ರದ ನಕಲಿ ಮೂರ್ತಿಯ ಅಸಲಿಮುಖ ಬಯಲಾಗಿದೆ ಎಂದುಹೋರಾಟಗಾರರು ತಿಳಿಸಿದ್ದಾರೆ. ಹಿಂದಿದ್ದ ಪರಶುರಾಮನ ಮೂರ್ತಿಯ ಪಾದ, ಕಾಲು ಬಿಟ್ಟು ಉಳಿದ ಭಾಗ ಮಾಯವಾಗಿರು ವುದು ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಉಮಿಕಲ್ಲು ಬೆಟ್ಟದಲ್ಲಿ ಪ್ರತಿಷ್ಠಾಪಿಸಲಾಗಿದ್ದ 33 ಅಡಿ ಎತ್ತರದ ಪರಶುರಾಮನ ಕಂಚಿನ ಪ್ರತಿಮೆ ಇದೀಗ ಮಾಯವಾಗಿರು‌ ವುದು ಡ್ರೋನ್ ಕ್ಯಾಮರ ಮೂಲಕ ಬಹಿರಂಗವಾಗಿದೆ. ಇದರೊಂದಿಗೆ ವಿಗ್ರಹ ಸಂಪೂರ್ಣ ನಕಲಿ ಎಂಬುದು ನೂರಕ್ಕೆ ನೂರರಷ್ಟು ಸತ್ಯ ಎಂದು ಜನರಿಗೆ ಮನವರಿಕೆಯಾಗಿದೆ ಎಂದವರು ಹೇಳುತಿದ್ದಾರೆ.

ಪೊಲೀಸ್ ಠಾಣೆಯಲ್ಲಿ ದೂರು: ಈ ನಡುವೆ ಪೊಲೀಸರ ಬಿಗಿ ಬಂದೊಬಸ್ತ್ ನಡುವೇ ಪರಶುರಾಮ ಮೂರ್ತಿ ಮಾಯ‌ವಾಗಿದೆ. ಇದನ್ನು ಹುಡುಕಿಕೊಡು ವಂತೆ, ಈ ಹಿಂದೆ ಪ್ರತಿಭಟನೆ ನಡೆಸಿದ್ದ ಸಮಾನ ಮನಸ್ಕ ಹೋರಾಟಗಾರರ ತಂಡದ ದಿವ್ಯಾ ನಾಯಕ್ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸ್ಥಳಕ್ಕೆ ಕಾಂಗ್ರೆಸ್ ನಾಯಕರ ಭೇಟಿ

ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಇಂದು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವ ರೊಂದಿಗೆ ಮಾತನಾಡಿ, ಈಗಾಗಲೇ ಸ್ಥಾಪಿತವಾದ ವಿಗ್ರಹ ಸಂಪೂರ್ಣ ನಕಲಿ ಎಂಬುದು ಕ್ಷೇತ್ರದ ಜನತೆಗೆ ಮನದಟ್ಟಾಗಿದೆ. ಅದ್ದರಿಂದ ಕೂಡಲೇ ಅಸಲಿ ವಿಗ್ರಹವನ್ನು ಸ್ಥಾಪನೆ ಮಾಡಬೇಕು ಮತ್ತು ಶಾಸಕರು ಕಾರ್ಕಳ ಜನತೆಯ ಬಳಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಮುಂದಿನ ದಿನಗಳಲ್ಲಿ ಅಸಲಿ ವಿಗ್ರಹ ಸ್ಥಾಪನೆಗೆ ಹಂತ ಹಂತವಾಗಿ ಕ್ರಮ ಬದ್ದವಾಗಿ ಕಾಮಗಾರಿ ನಡೆಸಲಿ. ಈಗಾಗಲೇ ನಡೆಯುತ್ತಿರುವ ಕಾಮಗಾರಿ ಗುಣಮಟ್ಟ ಹಾಗೂ ತಾಂತ್ರಿಕತೆಯ ಬಗ್ಗೆ ಸುರತ್ಕಲ್ ಎನ್‌ಐಟಿಕೆಯ ತಜ್ಞರಿಂದ ಸಲಹೆ ಪಡೆದು ವಿಗ್ರಹದ ಅಡಿಪಾಯವನ್ನು ಭದ್ರ ಗೊಳಿಸಬೇಕಾಗಿದೆ. ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನ ಪಡೆದು ಹಿರಿಯರ ಸಲಹೆ ಅಭಿಪ್ರಾಯದೊಂದಿಗೆ ಅಸಲಿ ಮೂರ್ತಿ ಸ್ಥಾಪನೆ ಮಾಡುವಂತೆ ಈ ಮೂಲಕ ಒತ್ತಾಯಿಸುತ್ತೇನೆ ಎಂದರು.

ಭೇಟಿಯ ಸಂದರ್ಭದಲ್ಲಿ ಕಾರ್ಕಳ ಕಾಂಗ್ರೆಸ್ ವಕ್ತಾರ ಶುಭದ ರಾವ್, ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷರಾದ ಸುಭಿತ್ ಎನ್ ಆರ್, ಪ್ರತಿಮಾ ರಾಣೆ, ಮುಡಾರು ಪಂಚಾಯತ್ ಮಾಜಿ ಅಧ್ಯಕ್ಷ ಅಜಿತ್ ಉಪಸ್ಥಿತರಿದ್ದರು.

ಬೈಲೂರು ಪರಶುರಾಮ ಮೂರ್ತಿ ವಿವಾದ; 16ಕ್ಕೆ ಕಾಂಗ್ರೆಸ್ ಪ್ರತಿಭಟನೆ

ಉಮಿಕಲ್ಲು ಗುಡ್ಡದಲ್ಲಿ ನಿರ್ಮಾಣವಾಗಿರುವ ಪರಶುರಾಮ ಥೀಮ್ ಪಾರ್ಕ್‌ನ ಕಂಚಿನ ಪರಶುರಾಮ ಮೂರ್ತಿ ನಕಲಿ ವಿವಾದ ದಿನಕ್ಕೊಂದು ರೂಪ ಪಡೆಯುತಿದ್ದು, ಇದೀಗ ಕಂಚಿನ ಪ್ರತಿಮೆಯ ಹೆಸರಿನಲ್ಲಿ ಪೈಬರ್ ಪ್ರತಿಮೆ ನಿರ್ಮಿಸಿ ಜನರಿಗೆ ನಂಬಿಕೆ ದ್ರೋಹ ಮಾಡಿರುವ ಕಾರ್ಕಳ ಶಾಸಕ ಸುನಿಲ್‌ಕುಮಾರ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.

ಮುಂದಿನ ಸೋಮವಾರ ಅ.16ರಂದು ಬೆಳಗ್ಗೆ 10:30ಕ್ಕೆ ಉಮಿಕಲ್ಲು ಬೆಟ್ಟದ ತಪ್ಪಲಿನಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದೆ. ಸೋಮವಾರ ಪ್ರತಿಭಟನಕಾರರು ಕಾರ್ಕಳ ಪುಲ್ಕೇರಿ ಬೈಪಾಸ್ ವೃತ್ತದಿಂದ ಒಟ್ಟಾಗಿ ವಾಹನದಲ್ಲಿ ಬೈಲೂರಿಗೆ ಬಂದು ಬೆಟ್ಟದ ಬುಡದಲ್ಲಿ ಧರಣಿ ನಡೆಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ತಿಳಿಸಿದ್ದಾರೆ.

ಕಾಮಗಾರಿ ಪ್ರಾರಂಭಗೊಂಡ ದಿನದಿಂದಲೇ ಒಂದಲ್ಲ ಒಂದು ವಿವಾದದ ಮೂಲಕ ಗೊಂದಲ ಸೃಷ್ಟಿಯಾಗುತಿದ್ದು, ಇದೀಗ ಪರಶುರಾಮನ ವಿಗ್ರಹ ಮಾಯವಾಗಿದ್ದು, ಪಾದ ಮತ್ತು ಕಾಲು ಮಾತ್ರ ಉಳಿದಕೊಂಡು ವಿಗ್ರಹದ ಸೊಂಟದ ಮೇಲ್ಭಾಗ ಕಾಣೆಯಾಗಿರುವ ಬಗ್ಗೆ ಗುಲ್ಲೆದ್ದಿದೆ.

ಪರಶುರಾಮನ ವಿಗ್ರಹ ಪ್ರತಿಷ್ಠಾಪನೆಗೊಂಡ ಬಳಿಕ ಅದರ ಸಾಚಾತನದ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿತ್ತು. ಮೂರ್ತಿ ನೈಜತೆಯನ್ನು ಬಹಿರಂಗ ಪಡಿಸುವಂತೆ ಸಮಾನ ಮನಸ್ಕರು ಉಪವಾಸ ಸತ್ಯಾಗ್ರಹವನ್ನು ಹಮ್ಮಿ ಕೊಂಡಿದ್ದರು. ಅಷ್ಟೆ ಅಲ್ಲದೇ ಕಾಮಗಾರಿಯನ್ನು ಪ್ರಶ್ನಿಸಿ ಅದನ್ನು ಸ್ಥಗಿತ ಗೊಳಿಸುವಂತೆ ನ್ಯಾಯಾಲಯಕ್ಕೆ ಅರ್ಜಿಯನ್ನೂ ಸಲ್ಲಿಸಲಾಗಿತ್ತು.

ಕಳೆದ ಬುಧವಾರವಷ್ಟೇ ಹೈಕೋರ್ಟ್ ಈ ಪ್ರಕರಣಕ್ಕೆ ಸಂಬಧಪಟ್ಟಂತೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಬೆನ್ನಲ್ಲೇ ಪರಶುರಾಮ ವಿಗ್ರಹ ಇದೀಗ ನಾಪತ್ತೆಯಾಗಿದೆ ಎಂಬ ದೂರು ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿದೆ.

ಬೈಲೂರಿನ ಉಮಿಕಲ್ಲು ಬೆಟ್ಟದ ಮೇಲೆ ನಿಂತಿದ್ದ ಪರಶುರಾಮನ ಮೂರ್ತಿ ಕಾಣುತ್ತಿಲ್ಲ. ಅದರ ಕೊಡಲಿ, ಬಿಲ್ಲು ಸಹ ಕಾಣುತ್ತಿಲ್ಲ. ಹೀಗಾಗಿ ಗುರುವಾರ ರಾತೋರಾತ್ರಿ ಪರಶುರಾಮನ ಮೂರ್ತಿಯನ್ನು ಮಾಯ ಮಾಡಿದ್ದಾರೆ ಎಂದು ನಿನ್ನೆ ಕಾಂಗ್ರೆಸ್ ಮುಖಂಡರು ಹಾಗೂ ಸ್ಥಳೀಯರು ಬಹಿರಂಗ ಆರೋಪ ಮಾಡಿದ್ದರು.

Scroll to Top