ಉಡುಪಿ, ಅ 13: ಜಿಲ್ಲೆಯಾದ್ಯಾಂತ ಎರಡು ದಿನಗಳ ಕಾಲ ನಿಷೇಧಾಜ್ಞೆಯನ್ನು ಹೊರಡಿಸಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಮಹಿಷಾ ದಸರಾ ಆಚರಣೆಯ ಕುರಿತಾದ ವಿವಿಧ ಬೆಳವಣಿಗೆಗಳ ಹಿನ್ನಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಸಾರ್ವಜನಿಕ ಹಿತವನ್ನು ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಅ14 ಬೆಳಿಗ್ಗೆ 6ರಿಂದ ಜಾರಿಗೆ ಬರುವಂತೆ ಹಾಗೂ ಅ. 15 ರ ಸಂಜೆ 06 ಗಂಟೆಯವರೆಗೆ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿದೆ.
ಈ ಸಂದರ್ಭದಲ್ಲಿ ಮಹಿಷಾ ದಸರಾ ಆಚರಣೆ ಪರ/ವಿರೋಧದದ ಬಗೆ, ಯಾವುದೇ ಪೋಸ್ಟ್, ಬ್ಯಾನರ್, ಬಂಟಿಂಗ್ ಅಳವಡಿಸುವುದು. ಪ್ರತಿಭಟನೆ ಮೆರವಣಿಗೆಗಳನ್ನು ಅವಹೇಳನಕಾರಿಯಂತಹ ಯಾವುದೇ ಘೋಷಣೆಗಳು/ಭಾಷಣಗಳು ಪ್ರಕಟಣೆಗಳು/ ಅವಾಚ್ಯ, ಶಬ್ದಗಳ ಬಳಕೆ/ಪುಚೋದನಾಕಾರಿ ಭಾಷಣ/ ಗಾಯನ ಇತ್ಯಾದಿ ಚಟುವಟಿಕೆಗಳನ್ನು ನಿಷೇಧಿಸಿದೆ.
ಶಸ್ತ್ರ, ಕತ್ತಿ, ಈಟಿ, ಬಂದೂಕುಗಳು, ಚಾಕು, ಕೋಲುಗಳು ಅಥವಾ ಲಾಠಿಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಇತರ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಿದೆ.
ಪಟಾಕಿಗಳನ್ನು ಸಿಡಿಸುವುದು, ಯಾವುದೇ ಕಾರಕ ಪದಾರ್ಥ ಅಥವಾ ಸ್ಫೋಟಕಗಳನ್ನು ಒಯ್ಯುವುದನ್ನು ನಿಷೇಧಿಸಿದೆ. ಕಲ್ಲುಗಳನ್ನು ಅಥವಾ ಇತರ ಕ್ಷಿಪಣಿಗಳನ್ನು ಎಸೆಯುವ ಅಥವಾ ವೇಗದಿಂದ ಒಗೆಯುವ ಸಾಧನಗಳ ಅಥವಾ ಉಪಕರಣಗಳ ಒಯುವಿಕೆಯನ್ನು ಶೇಖರಿಸುವುದನ್ನು ಮತ್ತು ತಯಾರಿಸುವುದು ನಿಷೇಧಿಸಿದ. ಪ್ರಚೋದಿಸಬಹುದಾದದ ಬಹಿರಂಗ ಘೋಷಣೆಗಳನ್ನು ಮಾಡುವುದು ಹಾಡುಗಳನ್ನು ಹಾಡುವುದು, ಸಂಗೀತವನ್ನು ನುಡಿಸುವುದು, ಆವೇಶಭರಿತ ಭಾಷಣ ಮಾಡುವುದು, ಇಂಗಿತ ಸೂಚನೆಗಳ ಅಥವಾ ಅಂಕ ನಿರೂಪಣಿಗಳನ್ನು ಪ್ರಯೋಗ ಮಾಡುವುದು, ಮತ್ತು ಚಿತ್ರಗಳನ್ನು ಸಂಕೇತಗಳನ್ನು ಭಿತ್ತಿ ಪತ್ರಗಳನ್ನು ಅಥವಾ ಇತರೆ ಯಾವುದೇ ವಸ್ತು ಅಥವಾ ಪದಾರ್ಥಗಳನ್ನು ತಯಾರಿಸುವುದು, ಪದರ್ಶಿಸುವುದು ಅಥವಾ ಪ್ರಸಾರ ಮಾಡುವುದನ್ನು ನಿಷೇಧಿಸಿದೆ.
ಯಾವುದೇ ವ್ಯಕ್ತಿಯು ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ಧ ನಿಯಮಾನುಸಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದೆ.