Saturday, July 27, 2024
Homeಸುದ್ದಿಕರಾವಳಿಯುವಕ ನಾಪತ್ತೆ ಪ್ರಕರಣ : ರಾತ್ರಿಯಿಡೀ ಹುಡುಕಿದ ಸ್ನೇಹಿತರು,ಪೊಲೀಸರು : ಮನೆಯಲ್ಲಿ ಆರಾಮವಾಗಿ ಮಲಗಿದ್ದ ದೀಕ್ಷಿತ್..!!!

ಯುವಕ ನಾಪತ್ತೆ ಪ್ರಕರಣ : ರಾತ್ರಿಯಿಡೀ ಹುಡುಕಿದ ಸ್ನೇಹಿತರು,ಪೊಲೀಸರು : ಮನೆಯಲ್ಲಿ ಆರಾಮವಾಗಿ ಮಲಗಿದ್ದ ದೀಕ್ಷಿತ್..!!!

ಚಿಕ್ಕಮಗಳೂರು : ದೇವರಮನೆಗೆ ಪ್ರವಾಸಕ್ಕೆ ಹೋಗಿದ್ದ ಯುವಕ ಕಣ್ಮರೆಯಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದೆ.

ನಾಪತ್ತೆ ಎಂದುಕೊಂಡು ಯುವಕನ ಸ್ನೇಹಿತರು ಇಡೀ ರಾತ್ರಿ ಪೊಲೀಸರೊಂದಿಗೆ ಸೇರಿ ಹುಡುಕುತ್ತಿದ್ದರೆ ಆತ ಮಾತ್ರ ಆರಾಮವಾಗಿ ಮನೆಗೆ ಹೋಗಿ ಮಲಗಿದ್ದ.

ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ದೀಕ್ಷಿತ್ (27) ನಾಲ್ವರು ಸ್ನೇಹಿತರ ಜೊತೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣ ದೇವರಮನೆ ಗುಡ್ಡಕ್ಕೆ ಆಗಮಿಸಿದ್ದರು. ಈ ವೇಳೆ ಸ್ನೇಹಿತರ ಜೊತೆ ಜಗಳ ಮಾಡಿಕೊಂಡು ಹೋದ ದೀಕ್ಷಿತ್ ಗುಡ್ಡದ ಬಳಿ ನಾಪತ್ತೆಯಾಗಿದ್ದ.

ನಾಲ್ವರು ಯುವಕರು ದೇವರಮನೆ ಬಳಿಯ ದೇವಸ್ಥಾನದ ಬಳಿ ಕಾರು ನಿಲ್ಲಿಸಿ ಟ್ರಕ್ಕಿಂಗ್ ಹೋಗಿದ್ದರು. ಆದರೆ ಈ ವೇಳೆ ಸ್ನೇಹಿತರ ಮಧ್ಯೆ ಮಾತಿನ ಚಕಮಕಿ ನಡೆದು ಜಗಳವಾಡಿದ್ದಾರೆ. ಸ್ನೇಹಿತರು ಕಾರಿನಲ್ಲಿ ಬಾ ಅಂತ ಕರೆದರೂ ಬಾರದ ದೀಕ್ಷಿತ್ ನಡೆದೇ ಹೋಗಿದ್ದಾನೆ. ಆದರೆ ಆತ ಎಲ್ಲಿಗೆ ಹೋಗಿದ್ದಾನೆ ಎಂದು ಗೊತ್ತಿಲ್ಲ. ನಂತರ ಆತನ ಸ್ನೇಹಿತರು ದೇವರಮನೆ ಗುಡ್ಡ ಪ್ರದೇಶದಲ್ಲಿ ಹುಡುಕಾಡಿದ್ದಾರೆ. ಆದರೆ ಆತನ ಸುಳಿವು ಪತ್ತೆಯಾಗಿಲ್ಲ.

ದೇವರಮನೆ ಗುಡ್ಡ ಎಂದರೆ ಅದು ದಟ್ಟ ಕಾನನ. ಕಣ್ಣಿನ ದೃಷ್ಟಿ ಮುಗಿದರೂ ಮುಗಿಯದ ಕಾಡಿನ ಸೌಂದರ್ಯ. 9 ಬೃಹತ್ ಗುಡ್ಡಗಳ ಈ ಪ್ರವಾಸಿ ತಾಣವನ್ನು ನವಗ್ರಹ ಗುಡ್ಡ ಎಂದು ಕರೆಯುತ್ತಾರೆ. ಭಾರತೀಯ ಸೇನೆಯಿಂದ ಟ್ರಕ್ಕಿಂಗ್‌ಗೆ ಉತ್ತಮ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ ದೇವರಮನೆ ಗುಡ್ಡದಲ್ಲಿ ನಾಪತ್ತೆಯಾದರೆ ಹುಡುಕೋದು ಕಷ್ಟಸಾಧ್ಯ. ಹೀಗಾಗಿ ದೀಕ್ಷಿತ್ ಎಲ್ಲಿಗೆ ಹೋಗಿದ್ದಾನೆ ಎಂದು ಯಾರಿಗೂ ತಿಳಿದು ಬಂದಿಲ್ಲ.

ಸ್ನೇಹಿತರು, ಸ್ಥಳೀಯರು ಹಾಗೂ ಪೊಲೀಸರು ಕೂಡಾ ದೀಕ್ಷಿತ್‌ಗಾಗಿ ಹುಡುಕಾಡಿದ್ದಾರೆ. ಆದರೆ ಆತನ ಸುಳಿವು ಸಿಕ್ಕಿಲ್ಲ. ಪೊಲೀಸರು ಮಧ್ಯರಾತ್ರಿ 2 ಗಂಟೆಯವರೆಗೆ ಹುಡುಕಾಡಿದ್ದಾರೆ. ಇಂದು ಬೆಳಗ್ಗೆ ಮತ್ತೆ ಹುಡುಕಾಡಿದ್ದಾರೆ. ಆದರೆ ಚಾರ್ಮಾಡಿ ಘಾಟಿಯ ತಪ್ಪಲು, ಬೃಹತ್ ಕಾಡು, ಮುಗಿಲೆತ್ತರದ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಮಂಜು ಇದ್ದ ಕಾರಣ ಕಾರ್ಯಾಚರಣೆಗೂ ತೊಂದರೆಯಾಗಿದೆ. ಆದರೂ ಪೊಲೀಸರು ಹುಡುಕಾಟವನ್ನು ಕೈಬಿಟ್ಟಿಲ್ಲ.

ಇತ್ತ ದೀಕ್ಷಿತ್ ಸ್ನೇಹಿತರ ಜೊತೆ ಜಗಳವಾಡಿದ ಬೇಜಾರಿನಲ್ಲಿ ಕುಡಿದು ಊರಿಗೆ ಹೋಗಿದ್ದಾನೆ. ಮನೆಗೆ ಹೋದರೆ ಬೈಯ್ಯುತ್ತಾರೆಂದು ಮನೆಯಿಂದ ಸ್ವಲ್ಪ ದೂರದಲ್ಲಿ ಮೋರಿಯಲ್ಲಿ (ಚರಂಡಿ) ಮಲಗಿದ್ದ ಎಂದು ತಿಳಿದುಬಂದಿದೆ. ಸ್ಥಳೀಯರು ಆತನನ್ನು ಮನೆಗೆ ಕಳುಹಿಸಿದ್ದಾರೆ. ಸದ್ಯ ದೀಕ್ಷಿತ್ ಸೇಫ್ ಆಗಿ ಮನೆ ತಲುಪಿರುವುದು ತಿಳಿದು ಸ್ನೇಹಿತರು ನಿಟ್ಟುಸಿರು ಬಿಟ್ಟಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News