ಕುಂದಾಪುರ, ಅ 06: ಚಿಕ್ಕಮ್ಮನಸಾಲು ರಸ್ತೆಯಲ್ಲಿ ಭಾನುವಾರದಂದು ಸಂಜೆ ಚೂರಿ ಇರಿತದಿಂದ ಮೃತರಾಗಿದ್ದ ರಾಘವೇಂದ್ರ ಶೇರುಗಾರ್ ಅಲಿಯಾಸ್ ಬನ್ಸ್ ರಾಘು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ಕುಂದಾಪುರದ ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಗಳಾಗಿರುವ ಶಿವಮೊಗ್ಗ ಮೂಲದ ಶಫೀವುಲ್ಲಾ (40) ಮತ್ತು ಇಮ್ರಾನ್ (43)ನನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು 2ನೇ ಹೆಚ್ಚುವರಿ ಸಿವಿಲ್ ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಮೂರು ದಿನಗಳ ಕಾಲ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.
ಕುಂದಾಪುರದ ಸಂಗಮ್ ಬಳಿಯಿಂದ ಬರುತ್ತಿದ್ದ ವ್ಯಾಗನರ್ ಕಾರು ಹಾಗೂ ರಾಘು ಅವರ ಕಾರು ಸ್ವಲ್ಪ ಸ್ಪರ್ಶವಾಗಿದ್ದ್ದು, ಈ ಸಂದರ್ಭದಲ್ಲಿ ಸಣ್ಣ ಮಾತಿನ ಚಕಮಕಿಯಲ್ಲಿ ಮುಗಿಯಬಹುದಾಗಿದ್ದ ಪ್ರಕರಣ ಹಿಂಬಾಲಿಸಿಕೊಂಡು ಬಂದು ಜಗಳ ಮಾಡುವಲ್ಲಿಗೆ ಬಂದು ತಲುಪಿ, ಪರಸ್ಪರ ಹಲ್ಲೆ ನಡೆದಿತ್ತು.
ಇನ್ನು ಜಗಳವನ್ನು ಸ್ಥಳೀಯರು ಬಿಡಿಸಿ ಒಂದು ಹಂತದಲ್ಲಿ ಪ್ರಕರಣ ಮುಗಿಯುವ ಹಂತ ತಲುಪಿತ್ತಾದರೂ ಮತ್ತೆ ಹೊಡೆದಾಟ ನಡೆದು ಚೂರಿಯಿಂದ ಇರಿಯುವ ಮೂಲಕ ಕೊಲೆಯಾಗುವ ಹಂತ ತಲುಪಿತ್ತು.
ಚೂರಿ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ರಾಘು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬನ್ಸ್ ರಾಘು ಸೋಮವಾರ ಸಾವನ್ನಪ್ಪಿದ್ದಾರೆ.