Saturday, July 27, 2024
Homeಸುದ್ದಿಕರಾವಳಿಸಾಕು ಪ್ರಾಣಿಗಳನ್ನು ರಸ್ತೆಗೆ ಬಿಟ್ಟರೆ ಹುಷಾರ್ : ದಕ್ಷಿಣ ಕನ್ನಡದ ಇಲ್ಲಿ ಇನ್ನು ಪ್ರಾಣಿಗಳು ಅರೆಸ್ಟ್

ಸಾಕು ಪ್ರಾಣಿಗಳನ್ನು ರಸ್ತೆಗೆ ಬಿಟ್ಟರೆ ಹುಷಾರ್ : ದಕ್ಷಿಣ ಕನ್ನಡದ ಇಲ್ಲಿ ಇನ್ನು ಪ್ರಾಣಿಗಳು ಅರೆಸ್ಟ್

ಮಂಗಳೂರು : ಸಾಕು ಪ್ರಾಣಿಗಳನ್ನು ಹೆದ್ದಾರಿಗಳಲ್ಲಿ ಹಾಗೂ ಜನ ಜಂಗುಳಿಯಿರುವ ಪ್ರದೇಶಗಳಲ್ಲಿ ಮೇಯಲು ಬಿಡುತ್ತಿರುವುದು ವಾಹನ ಸವಾರರಿಗೆ ಹೊಸ ಸಮಸ್ಯೆಯಾಗಿ ಪರಿಣಮಿಸಿದೆ.

ಏಕಾಏಕಿ ರಸ್ತೆಗೆ ಅಡ್ಡ ಬರುವ ಈ ಸಾಕುಪ್ರಾಣಿಗಳಿಂದಾಗಿಯೇ ಹಲವು ಅಫಘಾತಗಳು ಸಂಭವಿಸುತ್ತಿದೆ.

ಅದರಲ್ಲೂ ದ್ವಿಚಕ್ರ ವಾಹನ ಸವಾರರೇ ಈ ಸಾಕು ಪ್ರಾಣಿಗಳ ಕಾಟಕ್ಕೆ ಸಿಲುಕಿ ಗಂಭೀರ ಸಮಸ್ಯೆಗೊಳಗಾಗುತ್ತಿದ್ದಾರೆ.

ಆದರೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪಟ್ಟಣ ಪಂಚಾಯತ್ ರಸ್ತೆಯಲ್ಲಿರುವ ಸಾಕುಪ್ರಾಣಿಗಳನ್ನು ಬಂಧಿಸಲು ಮುಂದಾಗಿದೆ.

ಕೆಟ್ಟ ರಸ್ತೆಗಳು, ಅವೈಜ್ಞಾನಿಕ ಕಾಮಗಾರಿಗಳು, ಅಜಾಗರೂಕತೆಯ ಚಾಲನೆ ಈ ಎಲ್ಲಾ ಕಾರಣಕ್ಕಾಗಿಯೇ ದೇಶದಲ್ಲಿ ರಸ್ತೆ ಅಫಘಾತಗಳಾಗುತ್ತಿದ್ದು, ದಿನವೊಂದಕ್ಕೆ ನೂರಾರು ಜನ ಸಾವನ್ನಪ್ಪುತ್ತಾರೆ.

ಈ ಸಮಸ್ಯೆಗಳ ನಡುವೆ ಪ್ರಾಣಿಗಳೂ ವಾಹನ ಸವಾರರ ಪ್ರಾಣಕ್ಕೆ ಕಂಟಕವಾದ ಹಲವಾರು ಘಟನೆಗಳು ನಡೆಯುತ್ತಲೇ ಇವೆ.

ಅದರಲ್ಲೂ ಸಾಕುಪ್ರಾಣಿಗಳನ್ನು ಹೆದ್ದಾರಿ ಪಕ್ಕದಲ್ಲಿ ಕಟ್ಟುವ, ಮೇಯಲು ಬಿಡುವ ಕಾರಣಕ್ಕಾಗಿಯೇ ಈ ಸಾಕುಪ್ರಾಣಿಗಳು ಏಕಾಏಕಿ ರಸ್ತೆಗೆ ಅಡ್ಡ ಬರುವ ಕಾರಣಕ್ಕಾಗಿ ಹಲವು ಅಫಘಾತಗಳು ನಡೆದಿದೆ.

ಹೆಚ್ಚಾಗಿ ದನ-ಕರುಗಳು, ಕುರಿ-ಆಡುಗಳು ಇತ್ತೀತಿನ ದಿನಗಳಲ್ಲಿ ಹೆದ್ದಾರಿ ಹಾಗೂ ಇತರ ರಸ್ತೆಗಳ ಪಕ್ಕದಲ್ಲೇ ಕಂಡು ಬರುತ್ತಿದ್ದು, ಇವುಗಳ ಮಾಲಕರು ಇವುಗಳನ್ನು ರಸ್ತೆ ಬದಿಯಲ್ಲೇ ಮೇಯಲು ಬಿಡುತ್ತಿರುವುದು ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತಿವೆ.

ಹೆದ್ದಾರಿಗಳ ಸಮಸ್ಯೆ ಒಂದೆಡೆಯಾದರೆ, ಇನ್ನು ಕೆಲವು ಸಣ್ಣ ಪುಟ್ಟ ಪಟ್ಟಣಗಳಲ್ಲಂತೂ ರಸ್ತೆ ತುಂಬಾ ಆಡು, ಕುರಿ, ದನಗಳದ್ದೇ ಕಾರುಬಾರು ಎನ್ನುವಂತಹ ಸ್ಥಿತಿಯಿದೆ.

ಇಂಥಹುದೇ ಸಮಸ್ಯೆಯನ್ನು ಹೆಚ್ಚಾಗಿ ಎದುರಿಸುತ್ತಿರುವ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಡಬ ಪೇಟೆಯ ಜನರಿಗೆ ಕಡಬ ಪಟ್ಟಣ ಪಂಚಾಯತ್ ನಿಟ್ಟುಸಿರು ಬಿಡುವ ಆದೇಶ ಹೊರಡಿಸಿದೆ.

ಕಡಬ ಪೇಟೆಯ ತುಂಬೆಲ್ಲಾ ಆಡುಗಳದ್ದೇ ಸಾಮ್ರಾಜ್ಯವಾಗಿದ್ದು, ಆಡುಗಳಿಂದಾಗಿ ಪೇಟೆಯಲ್ಲಿ ವಾಹನ ಸಂಚಾರವೇ ದುಸ್ತರವಾಗಿದೆ.

ಕಡಬ ಪೇಟೆಯ ಪಕ್ಕದಲ್ಲಿರುವ ಹಲವು ಕುಟುಂಬಗಳು ಈ ಆಡು ಸಾಕಾಣೆಯನ್ನೇ ತಮ್ಮ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದಾರೆ.

ರಸ್ತೆ ಬದಿಯಲ್ಲೇ ಇರುವ ಈ ಮನೆಗಳಲ್ಲಿ ಪ್ರತೀ ಮನೆಯಲ್ಲಿ ಹತ್ತಕ್ಕೂ ಮಿಕ್ಕಿದ ಆಡು ಹಾಗೂ ಆಡು ಮರಿಗಳಿವೆ.

ಮನೆ ಮಂದಿ ಈ ಆಡುಗಳನ್ನು ಕಡಬ ಪೇಟೆಯ ತುಂಬಾ ಅಡ್ಡಾಡಲು ಬಿಡುತ್ತಿರುವುದು ವಾಹನ ಚಾಲಕರಿಗೆ ಕಿರಿಕಿರಿಯುಂಟು ಮಾಡುತ್ತಿದೆ.

ಅದರಲ್ಲೂ ದ್ವಿಚಕ್ರ ವಾಹನ ಚಾಲಕರ ಪ್ರಾಣಕ್ಕೇ ಸಂಚಕಾರವಾಗುವಂತಹ ಸ್ಥಿತಿಯನ್ನು ಈ ಕಾಡು ಪ್ರಾಣಿಗಳು ತಂದೊಡ್ಡಿದ್ದು, ಇವುಗಳನ್ನು ನಿಯಂತ್ರಿಸಬೇಕೆಂದು ವಾಹನ ಸವಾರರು ಸ್ಥಳೀಯಾಡಳಿತಕ್ಕೆ ಮನವಿಯನ್ನೂ ಮಾಡಿಕೊಂಡಿದ್ದರು.

ಅಫಘಾತಕ್ಕೆ ಕಾರಣವಾದ ಸಾಕುಪ್ರಾಣಿಗಳ ಮಾಲಕರು ವಾಹನ ಸವಾರರ ಮೇಲೆ ಸವಾರಿ ಮಾಡುವಂತಹ ಘಟನೆಗಳು ನಡೆಯುತ್ತಿದ್ದು, ಅಫಘಾತದಲ್ಲಿ ಸಾವನ್ನಪ್ಪಿದ ಸಾಕುಪ್ರಾಣಿಗಳಿಗೆ ಪರಿಹಾರಕ್ಕೂ ಪಟ್ಟು ಹಿಡಿಯುವ ಘಟನೆಗಳು ಜಿಲ್ಲೆಯಲ್ಲಿ ಇದೀಗ ಸಾಮಾನ್ಯವಾಗುತ್ತಿದೆ.

ಹೆದ್ದಾರಿ, ರಸ್ತೆ ಹಾಗೂ ಜನಜಂಗುಳಿಯಿರುವ ಕಡೆಗಳಲ್ಲಿ ಸಾಕುಪ್ರಾಣಿಗಳನ್ನು ಮೇಯಲು ಬಿಡಲು ಅವಕಾಶವಿಲ್ಲದಿದ್ದರೂ, ಕಾನೂನು ಮೀರಿ ಸಾಕುಪ್ರಾಣಿಗಳನ್ನು ಪೇಟೆಗೆ ಹಾಗೂ ರಸ್ತೆಗೆ ಬಿಡುವ ವ್ಯವಸ್ಥೆಗಳು ಹೆಚ್ಚು ಹೆಚ್ಚು ನಡೆಯುತ್ತಿದೆ.

ಕಡಬ ಪೇಟೆಯಲ್ಲಿ ಹೆಚ್ಚಾದ ಆಡುಗಳ ಉಪಟಲದಿಂದಾಗಿ ಕಡಬ ಪಟ್ಟಣ ಪಂಚಾಯತ್ ಹಲವು ಬಾರಿ ಸಾಕುಪ್ರಾಣಿಗಳ ನಿಯಂತ್ರಣಕ್ಕೂ ಮುಂದಾಗಿತ್ತು.

ಪಂಚಾಯತ್ ಆಡಳಿತ ಧ್ವನಿ ವರ್ಧಕಗಳ ಮೂಲಕ ಸಾಕುಪ್ರಾಣಿಗಳನ್ನು ರಸ್ತೆಗೆ ಬಿಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ನೀಡಿದ್ದರು.

ಆದರೆ ಇದ್ಯಾವುದಕ್ಕೂ ಕ್ಯಾರೇ ಎನ್ನದ ಸಾಕುಪ್ರಾಣಿಗಳ ಮಾಲಕರಿಗೆ ಇದೀಗ ಕಡಬ ಪಟ್ಟಣ ಪಂಚಾಯತ್ ರಸ್ತೆಗೆ ಬಿಡುವ ಸಾಕುಪ್ರಾಣಿಗಳನ್ನು ಬಂಧಿಸುವ ಎಚ್ಚರಿಕೆ ನೀಡಿದೆ.

ಅಲ್ಲದೆ ಸಾಕುಪ್ರಾಣಿಗಳ ಮಾಲಕರ ವಿರುದ್ಧವೂ ಕ್ರಮ ಕೈಗೊಳ್ಳುವ ಕುರಿತು ಪ್ರಕಟನೆಯನ್ನು ನೀಡಿದೆ. ಇಂಥಹುದೇ ಕ್ರಮವನ್ನು ರಾಜ್ಯದೆಲ್ಲೆಡೆ ಆರಂಭಿಸಲು ಸಾರ್ವಜನಿಕರ ಒತ್ತಾಯವೂ ಕೇಳಿ‌ ಬರುತ್ತಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News