Saturday, July 27, 2024
Homeಸುದ್ದಿಉಡುಪಿ: ಜಿಲ್ಲೆಯಾದ್ಯಂತ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಅನಧಿಕೃತ ಬ್ಯಾನರ್ ಗಳ ತೆರವು; ಎಸ್ಪಿ ಅರುಣ್‌

ಉಡುಪಿ: ಜಿಲ್ಲೆಯಾದ್ಯಂತ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಅನಧಿಕೃತ ಬ್ಯಾನರ್ ಗಳ ತೆರವು; ಎಸ್ಪಿ ಅರುಣ್‌

ಉಡುಪಿ, ಅ.03: ಶಿವಮೊಗ್ಗ ಗಲಭೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಅನಧಿಕೃತವಾಗಿ ಹಾಗೂ ಅವಧಿ ಮೀರಿದ ಬ್ಯಾನರ್ ಮತ್ತು ಕಟೌಟ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಸ್ಥಳೀಯಾಡಳಿತದ ಅಧಿಕಾರಿಗಳು ಪೊಲೀಸ್ ರಕ್ಷಣೆಯಲ್ಲಿ ಮಂಗಳವಾರ ನಡೆಸಿದರು.

ನಗರಸಭೆಯಿಂದ ಯಾವುದೇ ಅನುಮತಿ ಪಡೆಯದೆ ಉಡುಪಿ ನಗರ, ಸಂತೆಕಟ್ಟೆ ಹಾಗೂ ಮಣಿಪಾಲ ಸೇರಿದಂತೆ ನಗರ ಸಭೆ ವ್ಯಾಪ್ತಿಯಲ್ಲಿ ಅನಧಿಕೃತ ವಾಗಿ ಅಳವಡಿಸಲಾದ ಹಾಗೂ ಅವಧಿ ಮೀರಿದ ಒಟ್ಟು 85 ಅನಧಿಕೃತ ಬ್ಯಾನರ್ ಹಾಗೂ ಕಟೌಟ್‌ಗಳನ್ನು ಉಡುಪಿ ನಗರಸಭೆ ಅಧಿಕಾರಿಗಳು ಪೊಲೀಸ್ ಭದ್ರತೆಯೊಂದಿಗೆ ತೆರವುಗೊಳಿಸಿದರು.

ಅದೇ ರೀತಿ ಅ.10ರಂದು ಉಡುಪಿ ಎಂಜಿಎಂ ಕಾಲೇಜಿನಲ್ಲಿ ನಡೆಯಲಿರುವ ಹಿಂದು ಸಮಾಜೋತ್ಸವಕ್ಕೆ ಸಂಬಂಧಿಸಿದ ಬ್ಯಾನರ್‌ಗಳನ್ನು ಅನುಮತಿ ಪಡೆಯದೆ ಅನಧಿಕೃತವಾಗಿ ಅಳವಡಿಸಲಾಗಿದ್ದು, ಇವುಗಳನ್ನು ಕೂಡ ನಗರಸಭೆ ಅಧಿಕಾರಿ ಗಳು ತೆರವುಗೊಳಿಸಿದರು ಎಂದು ತಿಳಿದುಬಂದಿದೆ. ಸಂಬಂಧಪಟ್ಟವರು ಸಂಜೆ ವೇಳೆ ಕಟೌಟ್‌ಗೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿರುವುದಾಗಿ ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಶಾಸಕರಿಂದ ಎಸ್ಪಿ ಭೇಟಿ: ಹಿಂದು ಸಮಾಜೋತ್ಸವದ ಬ್ಯಾನರ್‌ಗಳನ್ನು ತೆರವು ಗೊಳಿಸಿದ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಯಶ್‌ಪಾಲ್ ಸುವರ್ಣ, ಶಿವಮೊಗ್ಗ ಗಲಭೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಳವಡಿಸಲಾದ ಅನಧಿಕೃತ ಬ್ಯಾನರ್‌ಗಳನ್ನು ತೆರವುಗೊಳಿಸಲು ಪೊಲೀಸ್ ಇಲಾಖೆ ಸ್ಥಳೀಯಾ ಡಳಿತಕ್ಕೆ ಸೂಚನೆ ನೀಡಿದೆ. ಈ ಹಿಂದಿನಂತೆ ಸಮಾಜೋತ್ಸವ ನಡೆಯುವ ಸಂದರ್ಭದಲ್ಲಿ ನಗರದಲ್ಲಿ ಬ್ಯಾನರ್ ಅಳವಡಿಕೆ, ಅಲಂಕಾರಕ್ಕೆ ಅವಕಾಶ ಮಾಡಿ ಕೊಡಬೇಕು ಎಂದು ಎಸ್ಪಿಯವರಿಗೆ ಮನವಿ ಮಾಡಿದ್ದೇವೆ. ಅದನ್ನು ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಭರವಸೆ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಜರಂಗದಳ ದಕ್ಷಿಣ ಪ್ರಾಂತ ಸಂಚಾಲಕ ಸುನೀಲ್ ಕೆ.ಆರ್., ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಹಾಜರಿದ್ದರು.

ಮುಂಜಾಗ್ರತಾ ಕ್ರಮವಾಗಿ ತೆರವು: ಎಸ್ಪಿ

ಜಿಲ್ಲೆಯಾದ್ಯಂತ ವಿವಿಧ ಹಬ್ಬಗಳನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆಲವೊಂದು ಬ್ಯಾನರ್‌ಗಳನ್ನು ನಗರದಲ್ಲಿ ಅಳವಡಿಸಲಾಗಿದೆ. ಅದೇ ರೀತಿ ಮುಂಬರುವ ಕಾರ್ಯಕ್ರಮಗಳ ಬಗ್ಗೆಯೂ ಬ್ಯಾನರ್ ಹಾಕಲಾಗಿದೆ. ಆದುದರಿಂದ ಅನಧಿ ಕೃತ ಹಾಗೂ ಅವಧಿ ಮೀರಿದ ಬ್ಯಾನರ್‌ಗಳನ್ನು ತೆರವು ಗೊಳಿಸಲು ನಗರಸಭೆ ಅಧಿಕಾರಿಗಳಿಗೆ ರಕ್ಷಣೆ ಕೊಡಲಾಗಿದೆ ಎಂದು ಎಸ್ಪಿ ಡಾ.ಅರುಣ್ ಕೆ. ತಿಳಿಸಿದರು.

ಈ ಕುರಿತು ಈಗಾಗಲೇ ನಗರದ ಎಲ್ಲ ಕಡೆ ಪರಿಶೀಲನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಶಾಂತಿಯ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಮುಂಜ್ರಾಗ್ರತಾ ಕ್ರಮವಾಗಿ ಎಲ್ಲ ಕಡೆ ಈ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಅವರು ಮಾಧ್ಯಮದವರಿಗೆ ತಿಳಿಸಿದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News