Wednesday, September 11, 2024
Homeಸುದ್ದಿಕರಾವಳಿಮುಸ್ಲಿಂ ಯುವಕನ ಮೇಲೆ ದೈವದ ಆವೇಶ : ಇದು 18 ವರ್ಷಗಳಿಂದ ಸ್ಥಗಿತಗೊಂಡ ದೈವಾರಾಧನೆಯ ರೋಚಕ...

ಮುಸ್ಲಿಂ ಯುವಕನ ಮೇಲೆ ದೈವದ ಆವೇಶ : ಇದು 18 ವರ್ಷಗಳಿಂದ ಸ್ಥಗಿತಗೊಂಡ ದೈವಾರಾಧನೆಯ ರೋಚಕ ಸ್ಟೋರಿ!

ಮಂಗಳೂರು : ತುಳುನಾಡು ದೈವಿಕ ಅಂಶಗಳನ್ನೊಳಗೊಂಡ ಪುಣ್ಯ ಭೂಮಿ. ಹಲವು ವರ್ಷಗಳ ದೈವಾರಾಧನೆಯ ಪರಂಪರೆಯ ಜೊತೆಗೆ ಬೆಸೆದುಕೊಂಡಿರೋ ಪುಣ್ಯ ನೆಲ.‌ ತುಳುನಾಡಿನ ದೈವದ ಅಚ್ಚರಿ ಹುಟ್ಟಿಸೋ ವಿದ್ಯಮಾನವೊಂದು ಇಡೀ ಕರಾವಳಿಗರನ್ನು ಬೆಚ್ಚಿ ಬೀಳಿಸಿದೆ. ಹಲವು ವರ್ಷಗಳಿಂದ ದೈವವೊಂದರ ಸೇವೆ ಸ್ಥಗಿತಗೊಂಡ ಕಾರಣಕ್ಕೆ ಸ್ವತಃ ದೈವವೇ ಮುಸ್ಲಿಂ ಯುವಕನೊಬ್ಬನ ಮೈಮೇಲೆ ಆವಾಹನೆಗೊಂಡು ಎಚ್ಚರಿಕೆ ನೀಡಿದೆ‌‌‌.



ಸಾವಿರಾರು ಪವಾಡಗಳು, ಅಚ್ಚರಿ ಹುಟ್ಟಿಸೋ ಲಕ್ಷಾಂತರ ಸನ್ನಿವೇಶಗಳಿಗೆ ತುಳುನಾಡಿನ ದೈವಾರಧನೆ ಸಾಕ್ಷಿಯಾಗುತ್ತಲೇ ಇದೆ. ಇದೀಗ ಅಂಥದ್ದೇ ಅಚ್ಚರಿ ಹುಟ್ಟಿಸೋ ಮತ್ತು ಕೇಳಿದರೆ ಮೈ ರೋಮಾಂಚನಗೊಳಿಸೋ ತುಳುನಾಡಿನ ದೈವೀ ಶಕ್ತಿಯ ಪವಾಡವೊಂದಕ್ಕೆ ಕಡಲ ತಡಿ ಮಂಗಳೂರು ಮತ್ತೆ ಸಾಕ್ಷಿಯಾಗಿದೆ.



ನೂರಾರು ದೈವಗಳ ನೆಲೆಯಾದ ಕರಾವಳಿಯ ಪುಣ್ಯ ಮಣ್ಣಿನಲ್ಲಿ ನಡೆದ ಈ ಘಟನೆ ಸದ್ಯ ಇಡೀ ಕರಾವಳಿ ಭಾಗದಲ್ಲಿ ಮತ್ತೆ ಅಚ್ಚರಿಯ ಜೊತೆಗೆ ದೈವದ ಕಾರ್ಣಿಕದ ಕಥೆ ಹೇಳುತ್ತಿದೆ. ಕೋಮು ಸೂಕ್ಷ್ಮ ಪ್ರದೇಶ ಅಂತಾನೆ ಕರೆಸಿಕೊಳ್ಳುವ ಮಂಗಳೂರಿನಲ್ಲಿ ತುಳುನಾಡಿನ ಕಾರ್ಣಿಕ ದೈವ ಶಕ್ತಿಯೊಂದು ಮುಸ್ಲಿಂ ಯುವಕನೊಬ್ಬನ ಮೂಲಕ ಆವಾಹನೆಯಾಗೋ ಮೂಲಕ ಎಲ್ಲರನ್ನೂ ಚಕಿತಗೊಳಿಸಿದೆ.

ಮಂಗಳೂರಿನ ಪೆರ್ಮುದೆ ಎಂಬಲ್ಲಿ ಒರಿಸ್ಸಾ ಮೂಲದ ಮುಸ್ಲಿಂ ಸಮುದಾಯಕ್ಕೆ ಸೇರಿದ ಕಾರ್ಮಿಕನೊಬ್ಬನಿಗೆ ದೈವ ಆವೇಶವಾಗೋ ಮೂಲಕ ಅಚ್ಚರಿ ಹುಟ್ಟಿಸಿದೆ. ಒರಿಸ್ಸಾ ಮೂಲದ ಕಾರ್ಮಿಕ ಮುಸ್ಲಿಂ ಯುವಕ ಜೋರ್ ಆಲಿ ಮೇಲೆ ದೈವದ ಆವೇಶ ಕಾಣಿಸಿಕೊಂಡಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಪೆರ್ಮುದೆ ಸೋಮನಾಥೇಶ್ವರ ದೇಗುಲದ ಬಳಿಯ ಪಿಲಿಚಾಮುಂಡಿ ದೈವಸ್ಥಾನದ ತಡೆಗೋಡೆ ಕಾಮಗಾರಿಯನ್ನ ಜೋರ್ ಆಲಿ ಮತ್ತು ಉಳಿದ ಒರಿಸ್ಸಾ ಮೂಲದ ಕಾರ್ಮಿಕರ ತಂಡ ಮಾಡ್ತಿತ್ತು.

ಈ ವೇಳೆ ಇದ್ದಕ್ಕಿದ್ದಂತೆ ಜೋರ್ ಆಲಿಗೆ ಆವೇಶ ಬಂದಿದ್ದು, ಏಕಾಏಕಿ ದೈವ ದರ್ಶನದ ಮಾದರಿಯಲ್ಲಿ ಆವಾಹನೆ ಕಂಡು ಬಂದಿದೆ. ತಕ್ಷಣ ಅಲ್ಲಿದ್ದ ಸ್ಥಳೀಯರು ಮತ್ತು ದೇವಸ್ಥಾನದ ಆಡಳಿತ ಮಂಡಳಿಯವರು ಸಮಾಧಾನಿಸೋಕೆ ಮುಂದಾದ್ರೂ ನಿಯಂತ್ರಣಕ್ಕೆ ಬರಲೇ ಇಲ್ಲ. ಕೊನೆಗೆ ಹತ್ತಾರು ಜನ ಹಿಡಿದು ನಿಯಂತ್ರಿಸಲು ಮುಂದಾದ್ರೂ ಸಾಧ್ಯವಾಗಲೇ ಇಲ್ಲ. ‌ಕೊನೆಗೆ ಅದಾಗಿಯೇ ತಣ್ಣಗಾಗಿದ್ದು, ಕೆಲ ಹೊತ್ತಿನಲ್ಲಿ ಮತ್ತೆ ಆ ಯುವಕನ ಮೇಲೆ ನಿರಂತರ ಆವೇಶ ಬಂದಿದೆ. ‌

ಕೊನೆಗೆ ದೇವಸ್ಥಾನದ ಅರ್ಚಕರು ತೀರ್ಥ ಚುಮುಕಿಸಿ ಪ್ರಸಾದ ಹಚ್ಚಿದ ಮೇಲೆ ಕೊಂಚ ನಿಯಂತ್ರಣಕ್ಕೆ ಬಂದರೂ ಮತ್ತೆ ಮತ್ತೆ ಯುವಕನಿಗೆ ಆವೇಶ ಬರುತ್ತಲೇ ಇತ್ತು. ಕೊನೆಗೆ ಆ ಊರಿನಿಂದಲೇ ಆತನನ್ನು ಕರೆದುಕೊಂಡು ಹೋದ ಬಳಿಕ ಆವೇಶ ನಿಯಂತ್ರಣಕ್ಕೆ ಬಂದಿದೆ. ಆದರೆ ಮುಸ್ಲಿಂ ಯುವಕನ ಮೇಲೆ ದೈವದ ಆವೇಶ ಬಂದಿರೋದು ಇಡೀ ಪೆರ್ಮುದೆ ಗ್ರಾಮಸ್ಥರನ್ನ ಅಚ್ಚರಿಕೆ ತಳ್ಳಿದ್ದು, ಇಡೀ ಗ್ರಾಮಕ್ಕೆ ಗ್ರಾಮವೇ ಆತಂಕಕ್ಕೆ ಈಡಾಗಿದೆ.

ಕೊನೆಗೆ ಗ್ರಾಮದ ಹಿರಿಯರು, ದೈವಾರಧಕರೆಲ್ಲರೂ ಸೇರಿ ಈ ಘಟನೆಗೆ ಕಾರಣ ತಿಳಿಯೋ ಉದ್ದೇಶದಿಂದ ಪ್ರಶ್ನಾಚಿಂತನೆಗೆ ಮುಂದಾಗಿದ್ದಾರೆ. ಅದರಂತೆ ಆ ಮುಸ್ಲಿಂ ಯುವಕನ ಸಮ್ಮುಖದಲ್ಲೇ ಪ್ರಶ್ನಾಚಿಂತನೆ ನಡೆಸೋ ನಿರ್ಧಾರ ಮಾಡಿದ್ದಾರೆ. ಇತ್ತೀಚೆಗೆ ಸೋಮನಾಥೇಶ್ವರ ದೇವಸ್ಥಾನದ ಅಂಗಳದಲ್ಲಿ ಪ್ರಶ್ನಾಚಿಂತನೆಗೆ ಮುಂದಾಗಿದ್ದು, ಬೇರೆ ಜಾಗದಿಂದ ಜೋರ್ ಆಲಿಯನ್ನ ಮತ್ತೆ ಆ ಜಾಗಕ್ಕೆ ಕರೆದುಕೊಂಡು ಬಂದಿದ್ದಾರೆ. ಅಚ್ಚರಿ ಅಂದ್ರೆ ಸೋಮನಾಥ ದೇವಸ್ಥಾನದ ದ್ವಾರ ದಾಟುತ್ತಿದ್ದಂತೆ ಆ ಯುವಕನಿಗೆ ಮತ್ತೆ ಆವೇಶ ಬಂದಿದ್ದು, ಅದ್ಯಾಗೋ ಹತ್ತಾರು ಯುವಕರು ಕರೆದುಕೊಂಡು ಬಂದು ದೇವಸ್ಥಾನದ ಅಂಗಳದಲ್ಲಿ ಕೂರಿಸಿದ್ದಾರೆ. ಈ ವೇಳೆ ಆವೇಶದ ಮಧ್ಯೆಯೂ ಆ ಯುವಕ ಹಿಂದಿ ಭಾಷೆಯಲ್ಲಿ ‘ನನ್ನ ದಾರಿಗೆ ತಡೆ ಮಾಡಿದ್ದೀರಿ’ ಎನ್ನುವ ರೀತಿಯಲ್ಲಿ ಒಗಟಿನ ಹಾಗೆ ಮಾತನಾಡಿದ್ದು, ಮತ್ತೆ ಎಲ್ಲರನ್ನೂ ಅಚ್ಚರಿಗೆ ತಳ್ಳಿದೆ.

ಆತನನ್ನ ಪಕ್ಕಕ್ಕೆ ಕೂರಿಸಿ ಪ್ರಶ್ನಾ ಚಿಂತನೆ ಹಾಕಿದಾಗ ಅಲ್ಲಿಂದ ಬಂದ ಉತ್ತರ ಇಡೀ ಪೆರ್ಮುದೆ ಗ್ರಾಮಸ್ಥರನ್ನ ಅಚ್ಚರಿಗೆ ತಳ್ಳಿತ್ತು. ಸಾವಿರ ಸಾವಿರ ವರ್ಷಗಳಿಂದ ನಂಬಿಕೊಂಡು ಬಂದ ದೈವವೊಂದರ ಕಾರ್ಣಿಕ ಸಾರುವ ಜಾಗದಲ್ಲಿ ಹಲವಾರು ವರ್ಷಗಳಿಂದ ಸಲ್ಲಬೇಕಾದ ದೈವಾರಧನೆ ಸಲ್ಲದೇ ಇದ್ದ ಕಾರಣಕ್ಕೆ ಆ ದೈವ ಮುನಿಸಿಕೊಂಡಿದೆಯಂತೆ‌. ಹಲವು ವರ್ಷಗಳಿಂದ ಆ ಜಾಗದಲ್ಲಿ ನೇಮೋತ್ಸವ ನಡೆಯದ ಕಾರಣ ದೈವ ಇಡೀ ಗ್ರಾಮಕ್ಕೆ ಎಚ್ಚರಿಕೆ ಕೊಟ್ಟಿದೆ. ಹಲವು ವರ್ಷಗಳಿಂದ ಹಲವು ವಿಧಗಳಲ್ಲಿ ಎಚ್ಚರಿಕೆ ರವಾನಿಸಿದ್ದ ದೈವ ಈ ಬಾರಿ ಒರಿಸ್ಸಾದ ಮುಸ್ಲಿಂ ಯುವಕನ ಮೈಮೇಲೆ ಆಹಾವನೆಯಾಗೋ ಮೂಲಕ ಸಂದೇಶ.

18 ವರ್ಷಗಳಿಂದ ನೇಮೋತ್ಸವ ಸ್ಥಗಿತ : ಇರುವಿಕೆ ತೋರಿಸಿದ ಪಿಲಿಚಾಮುಂಡಿ

ಎಲ್ಲಿಯ ತುಳುನಾಡು ಎಲ್ಲಿಯ ಒರಿಸ್ಸಾ. ಬಿಡಿಗಾಸಿಗಾಗಿ ಕಾರ್ಮಿಕನಾಗಿ ದುಡಿಯಲು ಬಂದ ಆ ಮುಸ್ಲಿಂ ಯುವಕನಿಗೆ ಅದೆಲ್ಲಿಯ ದೈವದ ನಂಟು ಅಂತ ನೀವೆಲ್ಲ ಕೇಳಬಹುದು‌. ತುಳುನಾಡಿನ ದೈವಗಳ ನಂಬಿಕೆ, ಪರಂಪರೆಯ ಬಗ್ಗೆ ಕಿಂಚಿತ್ತೂ ಜ್ಞಾನವಿರದ ಹೊರ ರಾಜ್ಯದ ಒಬ್ಬ ಮುಸ್ಲಿಂ ಯುವಕನ ಮೇಲೆ ದೈವ ಆವೇಶ ಬರುತ್ತೆ ಅನ್ನೋದೇ ಎಲ್ಲರಿಗೂ ಅಚ್ಚರಿ. ಆದರೆ ಪ್ರಶ್ನಾ ಚಿಂತನೆಯಲ್ಲಿ ಸಿಕ್ಕ ಉತ್ತರ ನೋಡಿ ಇಡೀ ಗ್ರಾಮಕ್ಕೆ ಗ್ರಾಮವೇ ಅಕ್ಷರಶಃ ಬೆಚ್ಚಿ ಬಿದ್ದಿದೆ‌.

ಹಲವು ವರ್ಷಗಳಿಂದ ನಂಬಿಕೊಂಡು ಬಂದ ಆ ತುಳುನಾಡ ಮಹಾನ್ ದೈವೀ ಶಕ್ತಿಯ ಪವಾಡ ಕಂಡು ಅಚ್ಚರಿಗೊಳಗಾಗಿದ್ದಾರೆ. ಅಷ್ಟಕ್ಕೂ ಈ ಎಲ್ಲಾ ಪವಾಡಗಳನ್ನು ಸೃಷ್ಟಿಸಿದ ಮತ್ತು ಇಡೀ ಗ್ರಾಮದ ಜನರನ್ನು ಅಚ್ಚರಿಗೆ ತಳ್ಳಿದ ತುಳುನಾಡಿನ ಆ ದೈವವೇ ಪಿಲ್ಚಂಡಿ..

ತುಳುನಾಡು ಸಾವಿರಾರು ದೈವಗಳ ಪುಣ್ಯ ಸ್ಥಳ‌. ಇಲ್ಲಿ ನಂಬಿಕೊಂಡು ಬಂದ ಪ್ರತೀ ದೈವಗಳ ಕಾರ್ಣಿಕ ಶಕ್ತಿ ದೊಡ್ಡದು. ಸದ್ಯ ಪೆರ್ಮುದೆಯಲ್ಲಿ ಕಾರ್ಣಿಕ ಮೆರೆದ ಆ ದೈವವೇ ಪಿಲ್ಚಂಡಿ. ತುಳುವರು ಬಹಳ ನಂಬುಗೆಯಿಂದ ಪಿಲ್ಚಂಡಿ ಅಥವಾ ಪಿಲಿಚಾಮುಂಡಿ ಅಂತ ಇದನ್ನ ಕರೆಯುತ್ತಾರೆ. ಕನ್ನಡದಲ್ಲಿ ವ್ಯಾಘ್ರ ಚಾಮುಂಡಿ ಅಂತಲೂ ಕರೆಯೋ ಈ ದೈವ ಈ ಭಾಗದ ಲಕ್ಷಾಂತರ ಜನರ ಸಾವಿರ ವರ್ಷಗಳ ನಂಬಿಕೆಯ ಪ್ರತೀಕ. ಈಶ್ವರ ದೇವರ ಅಪ್ಪಣೆ ಪ್ರಕಾರ ತುಳುನಾಡಿನ ಜನರನ್ನ ರಕ್ಷಿಸಲು ಭೂಮಿಗಿಳಿದು ಬಂದ ದೈವಶಕ್ತಿ ಅನ್ನೋ ನಂಬಿಕೆ ತುಳುವರದ್ದು.

ಇದೀಗ ಪೆರ್ಮುದೆಯಲ್ಲಿ ಮುಸ್ಲಿಂ ಯುವಕನ ಮೇಲೆ ಅವೇಶ ಬರೋಕೆ ಕಾರಣವಾಗಿದ್ದು ಇದೇ ಪಿಲಿಚಾಮುಂಡಿ ದೈವ. ಅಷ್ಟಕ್ಕೂ ಈ ದೈವ ತನ್ನ ಇರುವಿಕೆಯನ್ನ ತೋರಿಸಿ ಗ್ರಾಮಸ್ಥರನ್ನ ಎಚ್ಚರಿಸಿದ್ದು ಯಾಕೆ ಅನ್ನೋದು ಗೊತ್ತಾದ್ರೆ ನಿಜಕ್ಕೂ ಒಮ್ಮೆ ನಿಮ್ಮ ಮೈ ಜುಮ್ ಎನ್ನತ್ತೆ. ಅಸಲಿಗೆ ಸಾವಿರ ಸಾವಿರ ವರ್ಷಗಳ ಇತಿಹಾಸವಿರೋ ಪಿಲಿಚಾಮುಂಡಿ ದೈವವನ್ನು ಹಲವು ವರ್ಷಗಳಿಂದ ತುಳುನಾಡಿನಲ್ಲಿ ಬಹಳ ಶ್ರದ್ಧೆಯಿಂದ ನಂಬಿಕೊಂಡು ಬರಲಾಗ್ತಿದೆ. ಅದೇ ರೀತಿ ಪೆರ್ಮುದೆಯ ಆ ಒಂದು ಜಾಗದಲ್ಲೂ ಅನೇಕ ವರ್ಷಗಳ ಹಿಂದಿನಿಂದಲೂ ಪಿಲಿಚಾಮುಂಡಿ ದೈವಕ್ಕೆ ವಾರ್ಷಿಕ ನೇಮೋತ್ಸವಗಳ ಜೊತೆಗೆ ದೈವಾರಧನೆಯ ಅಷ್ಟೂ ಕಟ್ಟು ಕಟ್ಟಲೆಗಳ ಜೊತೆಗೆ ಆರಾಧನೆ ನಡೀತಾ ಇತ್ತು. ಆದರೆ ಕಳೆದ 18 ವರ್ಷಗಳಿಂದ ಆ ಒಂದು ಜಾಗದಲ್ಲಿ ಪಿಲಿಚಾಮುಂಡಿ ದೈವಕ್ಕೆ ನೇಮೋತ್ಸವ ನಡೆದಿಲ್ಲ. ಹಲವು ವರ್ಷಗಳಿಂದ ಪಿಲಿಚಾಮುಂಡಿ ದೈವದ ಆರಾಧನೆಯನ್ನೇ ಗ್ರಾಮಸ್ಥರು ಮಾಡದ ಕಾರಣ ಆ ಪ್ರದೇಶದಲ್ಲಿ ನೆಲೆಯಾಗಿರೋ ಪಿಲಿಚಾಮುಂಡಿ ದೈವ ಅಕ್ಷರಶಃ ಮುನಿಸಿಕೊಂಡಿದೆ ಅನ್ನೋದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ.

ಅಷ್ಟಕ್ಕೂ ಪಿಲಿಚಾಮುಂಡಿ ದೈವಕ್ಕೆ ಆರಾಧನೆ ನಡೆಯದ ಆ ಜಾಗ ಇರೋದು ಎಲ್ಲಿ ಅನ್ನೋ ಪ್ರಶ್ನೆಗೆ ಉತ್ತರ ಇದೇ ಪೆರ್ಮುದೆ ಸೋಮನಾಥೇಶ್ವರ ದೇವಸ್ಥಾನದ ಸುಮಾರು 200-300 ಮೀಟರ್ ದೂರದ ಕುತ್ತೆತ್ತೂರು ಗ್ರಾಮದ ಪೆರ್ಮುದೆಯ ಕಾಯರ್ ಕಟ್ಟೆ ಎಂಬ ಜಾಗದಲ್ಲಿ. ಅಸಲಿಗೆ ಪೆರ್ಮುದೆಯಲ್ಲಿ ಜನರ ನಂಬಿಕೆಯ ಶಕ್ತಿಯಾಗಿ ನೆಲೆಯಾಗುವ ಪಿಲಿಚಾಮುಂಡಿ ದೈವ ಮೊದಲು ನೆಲೆಯಾಗಿದ್ದೆ ಈ ಕಾಯರ್ ಕಟ್ಟೆ ಅನ್ನೋ ಜಾಗದಲ್ಲಿ. ಸಣ್ಣ ಕಟ್ಟೆಯ ಮಾದರಿಯಲ್ಲಿ ಇರೋ ಜಾಗದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಪಿಲಿಚಾಮುಂಡಿ ದೈವ ನೆಲೆಯಾಗಿದ್ದು, ಪೆರ್ಮುದೆ ಗ್ರಾಮದ ಹಿರಿಯರು ನೂರಾರು ವರ್ಷಗಳಿಂದ ಇಲ್ಲಿ ಪಿಲಿಚಾಮುಂಡಿ ದೈವವನ್ನ ನಂಬಿಕೊಂಡು ಬಂದಿದ್ದಾರೆ.

ಪ್ರತೀ ವರ್ಷವೂ ನೇಮೋತ್ಸವ ನಡೆದು ನಂಬಿಕೆ ಪ್ರಕಾರ ದೈವಾರಧನೆ ನಡೀತಾ ಇತ್ತು. ಆದರೆ ಸುಮಾರು 18 ವರ್ಷಗಳ ಹಿಂದೆ ಇಲ್ಲಿ ದೈವಾರಧನೆ ನಡೆದಿದ್ದು, ಆ ಬಳಿಕ ಈ ಕಾಯರ್ ಕಟ್ಟೆಯ ಪಿಲಿಚಾಮುಂಡಿ ನೆಲೆನಿಂತ ಜಾಗದಲ್ಲಿ ಯಾವುದೇ ನೇಮೋತ್ಸವ ನಡೆದಿಲ್ಲ. ಪರಿಣಾಮ ಗಿಡಗಂಟಿಗಳು ಬೆಳೆದಿದ್ದು, ಕೆಲ ಭಕ್ತರು ಆಗಾಗ ಬಂದು ದೈವಕ್ಕೆ ನಮಿಸಿ ಹೂವಿಟ್ಟು ಹೋಗೋದನ್ನ ಬಿಟ್ಟರೆ ಪಿಲಿಚಾಮುಂಡಿ ದೈವದ ನೇಮೋತ್ಸವ ನಡೆಯದೇ ಬರೋಬ್ಬರಿ 18 ವರ್ಷಗಳೇ ಆಗಿದೆ. ಅಷ್ಟಕ್ಕೂ ಕಳೆದ 18 ವರ್ಷಗಳಿಂದ ಇಲ್ಲಿ ನೇಮೋತ್ಸವ ಯಾಕೆ‌ ನಡೆದಿಲ್ಲ? ಅದಕ್ಕೆ ಇರೋ ತಡೆಯಾದ್ರೂ ಏನು ಎಂಬ ಪ್ರಶ್ನೆಗೆ ಉತ್ತರ. ಆ ಜಾಗದಲ್ಲಿ ರಕ್ಕಸನಂತೆ ಆವರಿಸಿಕೊಂಡಿರೋ ಬೃಹತ್ ಕೈಗಾರಿಕಾ ಕಂಪೆನಿ.

ಆ ಬೃಹತ್ ಕೈಗಾರಿಕೆ ಕಾರಣಕ್ಕೆ ಬಂದ್ ಆಯ್ತು ದೈವಾರಾಧನೆ!

ಆ ಒಂದು ಬೃಹತ್ ಕೈಗಾರಿಕೆಯ ಕಾರಣಕ್ಕೆ ತುಳುನಾಡಿನ ಸಾವಿರ ಸಾವಿರ ವರ್ಷಗಳ ನಂಬಿಕೆಯೊಂದರ ಆರಾಧನೆಯ ನಿಂತು ಹೋಗಿದೆ. ಪರಿಣಾಮ ಸದ್ಯ ಪಿಲಿಚಾಮುಂಡಿ ದೈವ ಮುನಿಸಿಕೊಳ್ಳುವ ಮೂಲಕ ವಿವಿಧ ರೀತಿಯಲ್ಲಿ ತನ್ನ ಇರುವಿಕೆಯನ್ನ ಪ್ರಕಟಿಸುತ್ತಿದೆ. ಅಷ್ಟಕ್ಕೂ ಆ ಕಂಪೆನಿ ಯಾವುದು? ಈ ದೈವರಾಧನೆಯ ಜಾಗಕ್ಕೂ ಕಂಪೆನಿಗೂ ಇರೋ ಸಂಬಂಧ ಏನು ಅನ್ನೋದನ್ನ ನೋಡೋಣ.

ಅಸಲಿಗೆ ಸದ್ಯ ಈ ಪಿಲಿಚಾಮುಂಡಿ ದೈವದ ಆರಾಧನೆಗೆ ಮತ್ತು ನೇಮೋತ್ಸವಕ್ಕೆ ಅಡ್ಡಿಯಾಗಿರೋದು ಎಂಆರ್‌ಪಿಎಲ್ ಅನ್ನೋ ಬೃಹತ್ ಕಂಪೆನಿ. ಮಂಗಳೂರು ತೈಲ ಶುದ್ದೀಕರಣ ಘಟಕ ಅನ್ನೋ ಹೆಸರಿನಿಂದ ಕರೆಯಲ್ಪಡೋ ಈ ಕಂಪೆನಿ ಭಾರತ ಸರ್ಕಾರದ ಅತೀ ದೊಡ್ಡ ಉದ್ಯಮಗಳಲ್ಲಿ ಒಂದು. ಅರಬ್ ರಾಷ್ಟ್ರಗಳಿಂದ ಹಡಗಿನ ಮೂಲಕ ಬರೋ ಪೆಟ್ರೋಲಿಯಂ ತೈಲವನ್ನ ಈ ಕಂಪೆನಿಯಲ್ಲಿ ಸಂಸ್ಕರಿಸಿ ಪೆಟ್ರೋಲ್, ಡಿಸೇಲ್, ಗ್ಯಾಸ್ ಸೇರಿದಂತೆ ಹಲವು ಉತ್ಪನ್ನಗಳನ್ನು ಭಾರತದ ಬೇರೆ ಬೇರೆ ಭಾಗಗಳಿಗೆ ರಫ್ತು ಮಾಡಲಾಗುತ್ತೆ.‌ 1992ರಲ್ಲಿ ಸಮುದ್ರಕ್ಕೆ ಹತ್ತಿರವಿರೋ ಕಾರಣದಿಂದ ಸುರತ್ಕಲ್ ನಿಂದ ಪೆರ್ಮುದೆವರೆಗಿನ ನೂರಾರು ಎಕರೆ ಜಾಗವನ್ನು ಎಂಆರ್‌ಪಿಎಲ್ ಸ್ಥಾಪನೆಗಾಗಿ ಭೂ ಸ್ವಾಧೀನ ಮಾಡಲಾಯಿತು. ಕಳೆದ ಮೂರು ದಶಕಗಳ ಹಿಂದೆ ಕಂಪನಿಗಾಗಿ ಜಮೀನು ಭೂಸ್ವಾಧೀನಗೊಂಡಿದ್ದು, ಆ ಸಂದರ್ಭ ಅಲ್ಲಿದ್ದ ಪಿಲಿಚಾಮುಂಡಿ ದೈವಸ್ಥಾನ ಹಾಗೂ ಕೊಡಮಣಿತ್ತಾಯ ದೈವಸ್ಥಾನ ಪುನರ್ವಸತಿ ಪ್ರದೇಶದಲ್ಲಿನ ಅಂದರೆ ಪೆರ್ಮುದೆ ಸೋಮನಾಥ ಧಾಮಕ್ಕೆ ಸ್ಥಳಾಂತರಗೊಂಡಿತ್ತು. ಬಳಿಕ ಕಾಲ ಕಾಲಕ್ಕೆ ಧಾರ್ಮಿಕ ಕಾರ್ಯಕ್ರಮಗಳು ನಡೆದು ಪೆರ್ಮುದೆಯಲ್ಲಿ ಪ್ರತೀ ವರ್ಷ ನೇಮೋತ್ಸವ ನಡೀತಾ ಇದೆ. ಆದರೆ ಪೆರ್ಮುದೆ ಗ್ರಾಮಕ್ಕೆ ಸಂಬಂಧಿಸಿ ಪಿಲಿಚಾಮುಂಡಿ ದೈವದ ನಾಲ್ಕು ಗಡು ಇದ್ದು, ಪ್ರಸುತ್ತ ಕಾಯರ್ ಕಟ್ಟೆ ಎಂಬುದು ಕುತ್ತೆತ್ತೂರು ಗ್ರಾಮದ ಪೆರ್ಮುದೆ ಗಡುವಾಗಿದೆ.‌ ಈ ಗಡು ಸ್ಥಳದಲ್ಲಿ ನಡೆಯುತ್ತಿದ್ದ ದೈವಾರಾಧನೆ ಪ್ರಕ್ರಿಯೆಗಳು ಕಳೆದ 18 ವರ್ಷಗಳಿಂದ ಸ್ಥಗಿತಗೊಂಡಿದ್ದು, ಇದೇ ಕಾರಣಕ್ಕೆ ಕಾಯರ್ ಕಟ್ಟೆಯಲ್ಲಿ ನೆಲೆಯಾಗಿರೋ ಪಿಲಿಚಾಮುಂಡಿ ದೈವ ಮುನಿಸಿಕೊಂಡಿದೆ.

ಕಂಪೆನಿ ಕಾರಣಕ್ಕೆ ಇಲ್ಲಿ ಬೆಂಕಿ ಉರಿಸುವುದೇ ನಿಷಿದ್ದ!

ಅಸಲಿಗೆ ಎಂಆರ್‌ಪಿಎಲ್ ಸ್ಥಾಪನೆ ವೇಳೆ ಸಾವಿರಾರು ಮನೆಗಳು, ಹಲವು ದೇವಸ್ಥಾನ, ದೇವಸ್ಥಾನಗಳು ಸ್ಥಳಾಂತರಗೊಂಡವು. ಆದರೆ ಕಾಯರ್ ಕಟ್ಟೆಯ ಪಿಲಿಚಾಮುಂಡಿ ದೈವದ ಗಡು ಜಾಗವನ್ನ ಯಾವ ಕಂಪೆನಿಗೂ ಮುಟ್ಟಲು ಸಾಧ್ಯವಾಗಲೇ ಇಲ್ಲ. ಕಂಪೆನಿ ಎಷ್ಟೇ ಪ್ರಯತ್ನ ಪಟ್ಟರೂ ಆಗಿನ ಕೆಲ ಹಿರಿಯರು ಕೋರ್ಟ್‌ ನಲ್ಲೂ ವಾದಿಸಿ ಆ ಜಾಗವನ್ನು ಅಲ್ಲೇ ಉಳಿಸಿಕೊಂಡಿದ್ದರು. ಹಿಂದೆ ಈ ಕಾಯರ್ ಕಟ್ಟೆ ಬಳಿ ಇದ್ದ ನೂರಾರು ಮನೆಗಳು ಭೂ ಸ್ವಾಧೀನಗೊಂಡು ಬೇರೆ ಜಾಗಕ್ಕೆ ಸ್ಥಳಾಂತರವಾಗಿದೆ. ಸದ್ಯ ಈ ಕಾಯರ್ ಕಟ್ಟೆಯಲ್ಲಿ ಸಂಪೂರ್ಣ ಎಂಆರ್ಪಿಎಲ್ ಆವರಿಸಿದ್ದು, ಯಾವುದೇ ಮನೆಗಳಿಲ್ಲ.‌ ಆಳೆತ್ತರದ ಎಂಆರ್ಪಿಎಲ್ ಚಿಮಿಣಿಗಳು, ಎತ್ತರದ ರಾಕ್ಷಸ ತಡೆಗೋಡೆಗಳು, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಬಿಗು ಭದ್ರತೆಯಲ್ಲಿರೋ ಈ ಪ್ರದೇಶದಲ್ಲಿ ಪಿಲಿಚಾಮುಂಡಿ ದೈವ ಮಾತ್ರ ಯಾರಿಂದಲೂ ಮುಟ್ಟಲಾಗದೇ ಹಾಗೇ ನೆಲೆ ನಿಂತಿದೆ.

ಆದರೆ ಜನವಸತಿ ಪ್ರದೇಶದಿಂದ ದೂರದಲ್ಲಿದ್ದು, ಇಲ್ಲಿ ಸಾರ್ವಜನಿಕರಿಗೂ ಆಗಾಗ ಬಂದು ಹೋಗಲು ಭದ್ರತೆ ದೃಷ್ಟಿಯಿಂದ ಅವಕಾಶ ಇಲ್ಲ. ಹೀಗಿದ್ದರೂ 18 ವರ್ಷಗಳ ಹಿಂದೆ ಕೊನೆಯ ಬಾರಿ ಇಲ್ಲಿ ನೇಮೋತ್ಸವ ನಡೆದಿದ್ದು, ಸ್ವತಃ ಎಂಆರ್ಪಿಎಲ್ ಅಧಿಕೃತರೇ ಗ್ರಾಮಸ್ಥರ ಜೊತೆ ಸೇರಿಕೊಂಡು ದೈವಾರಧನೆ ನಡೆಸಿದ್ದಾರೆ. ಆದರೆ ಆ ಬಳಿಕ ಎಂಆರ್ಪಿಎಲ್ ಹೇರಿದ ಕೆಲ ನಿರ್ಬಂಧಗಳ ಕಾರಣಕ್ಕೆ 18 ವರ್ಷಗಳಿಂದ ಇಲ್ಲಿ ಪಿಲಿಚಾಮುಂಡಿ ದೈವದ ಆರಾಧನೆ ನಡೆದಿಲ್ಲ ಅನ್ನೋದು ಸತ್ಯ. ಅಸಲಿಗೆ ಈ ಜಾಗದಲ್ಲಿ ದೈವಾರಧನೆ ನಿಲ್ಲಲು ಕಾರಣ ಎಂಆರ್ಪಿಎಲ್ ವಿಧಿಸಿದ ನಿರ್ಬಂಧಗಳು ಅನ್ನೋದು ಸ್ಥಳೀಯ ದೈವಾರಧಕರ ಮಾತು. ಅಸಲಿಗೆ ಎಂಆರ್ಪಿಎಲ್ ಅನ್ನೋದು ಮೊದಲೇ ಹೇಳಿದಂತೆ ತೈಲ ಶುದ್ದೀಕರಣ ಘಟಕ.‌

ಇದೇ ಕಾರಣಕ್ಕೆ ದಿನದ 24 ಗಂಟೆಯೂ ಭಾರೀ ಶಸ್ತ್ರ ಸಜ್ಜಿತ ಭದ್ರತೆಯ ಜೊತೆಗೆ ಸಿಸಿ ಕ್ಯಾಮರಾಗಳ ಕಣ್ಗಾವಲು ಕೂಡ ಇದೆ. ಇನ್ನು ಹಲವು ತಾಂತ್ರಿಕ ಕಾರಣಗಳಿಂದ ಇಲ್ಲಿ ದೈವಾರಧನೆಯ ಕೆಲ ವಿಧಾನಗಳಿಗೆ ತಡೆಯಾಗಿದೆ ಎನ್ನಲಾಗಿದೆ. ಪೆಟ್ರೋಲಿಯಂ ಕಂಪೆನಿಯಾದ ಕಾರಣ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಂಕಿ ಉರಿಸುವಂತಿಲ್ಲ. ಅಲ್ಲದೇ ಈ ಕಾಯರ್ ಕಟ್ಟೆ ಪಿಲಿಚಾಮುಂಡಿ ದೈವಸ್ಥಾನ ಎಂಆರ್ಪಿಎಲ್ ತಡೆಗೋಡೆಗೆ ತಾಗಿಕೊಂಡೇ ಇದ್ದು, ಚಿಮಿಣಿಗಳ ಪಕ್ಕದಲ್ಲೇ ಇದೆ. ದೈವಾರಧನೆ ಹೊತ್ತಲ್ಲಿ ಹಲವು ವರ್ಷಗಳ ನಂಬಿಕೆಯಂತೆ ಅಗ್ನಿಯ ಎದುರೇ ದೈವದ ನೇಮೋತ್ಸವ ನಡೆಯೋದು ವಾಡಿಕೆ. ಜೀಟಿಗೆ ಅನ್ನೋ ಮಾದರಿಯಲ್ಲಿ ಅಗ್ನಿಯ ಬಳಕೆ ಇದ್ದು, ದೀಪ ಹಚ್ಚುವುದು ಮತ್ತು ಪಟಾಕಿ ಸಿಡಿಸೋ ಸಂಪ್ರದಾಯವೂ ದೈವಾರಧನೆ ಸಂಪ್ರದಾಯಗಳಲ್ಲಿ ಒಂದು. ಬಹುತೇಕ ಇದರಲ್ಲಿ ಯಾವುದಾದರೂ ಒಂದು ತಪ್ಪಿದರೂ ಅಲ್ಲಿಗೆ ದೈವಾರಧನೆ ಕ್ರಮಗಳು ಬಹುತೇಕ ಅಪೂರ್ಣ ಅನ್ನೋದು ತುಳುವರ ನಂಬಿಕೆ.

ಅಸಲಿಗೆ ಅಗ್ನಿಯ ಬಳಕೆಗೆ ಈ ಪ್ರದೇಶದಲ್ಲಿ ಅವಕಾಶ ಇಲ್ಲದ ಕಾರಣ ಎಂಆರ್ಪಿಎಲ್ ಸಂಸ್ಥೆ ನಿರ್ಬಂಧ ವಿಧಿಸಿದೆ ಎನ್ನಲಾಗಿದ್ದು, ಇದು ಸುರಕ್ಷತಾ ದೃಷ್ಟಿಯಿಂದ ಕೈಗೊಂಡ ಕ್ರಮ ಎನ್ನಲಾಗಿದೆ. ಈ ಮಧ್ಯೆ ದೈವದ ನೇಮೋತ್ಸವ ಮೊದಲು ಬರಬೇಕಾದ ಭಂಡಾರ ಸಾಗುವ ದಾರಿಯೂ ಸದ್ಯ ಬದಲಾಗಿದೆ. ಕೋಳಿ ಬಲಿ ಕೊಡೋದು ಅವಕಾಶ ಇಲ್ಲವಾಗಿದೆ‌. ಜೊತೆಗೆ ಗ್ರಾಮದ ಮನೆಗಳೂ ಬೇರೆಡೆಗೆ ಶಿಫ್ಟ್ ಆಗಿರೋ ಕಾರಣದಿಂದ 18 ವರ್ಷಗಳಿಂದ ಇಲ್ಲಿ ದೈವದ ಆರಾಧನೆ ನಡೆದಿಲ್ಲ. ಆದರೆ ಪಿಲಿಚಾಮುಂಡಿ ದೈವ ಈ ಬಗ್ಗೆ ಎಚ್ಚರಿಸುತ್ತಲೇ ಇದೆ. ಪೆರ್ಮುದೆಯ ಮತ್ತೊಂದು ಪಿಲಿಚಾಮುಂಡಿ ದೈವದ ದೈವಸ್ಥಾನದ ನೇಮೋತ್ಸವದ ವೇಳೆಯೂ ಸೂಚನೆ ಕೊಟ್ಟಿದೆ.

2023ರ ಎಪ್ರಿಲ್ ನಲ್ಲಿ ಪೆರ್ಮುದೆಯ ಮತ್ತೊಂದು ಪಿಲಿಚಾಮುಂಡಿ ದೈವಸ್ಥಾನದಲ್ಲಿ ನಡೆದ ನೇಮೋತ್ಸವ ವೇಳೆಯೂ ದೈವ ನುಡಿದಿದ್ದು, ಕಾಯರ್ ಕಟ್ಟೆಯ ದೈವಾರಧನೆ ನಿಲ್ಲಿಸಿದ ಬಗ್ಗೆ ಎಚ್ಚರಿಕೆ ಕೊಟ್ಟಿತ್ತಂತೆ. ಆದರೆ ಎಂಆರ್ಪಿಎಲ್ ಕಾರಣಕ್ಕೆ ಗ್ರಾಮಸ್ಥರು ಅಸಹಾಯಕರಾಗಿದ್ದು, ಇದೀಗ ಮುಸ್ಲಿಂ ಯುವಕನ ಮೇಲೆ ಆವೇಶ ಬರೋ ಮೂಲಕ ಮತ್ತೊಮ್ಮೆ ಎಚ್ಚರಿಕೆ ಸಂದೇಶ ರವಾನಿಸಿದೆ. ಆದರೆ ಈ ಬಾರಿ ನೇಮೋತ್ಸವ ನಡೆಯದೇ ಇದ್ದಲ್ಲಿ ಭಾರೀ ಗಂಡಾಂತರಗಲ ಸೂಚನೆ ಸಿಕ್ಕಿದೆ. ಕಂಪನಿಗಾಗಿ ಭೂಸ್ವಾಧೀನಗೊಂಡ ಕಾರಣ ಈ ಅವ್ಯವಸ್ಥೆಗಳು ಎದುರಾಗಿರುವುದರಿಂದ ನೇಮೋತ್ಸವಕ್ಕೆ ಸೂಕ್ತವಾಗುವ ರೀತಿಯಲ್ಲಿ ಸ್ಥಳವನ್ನು ಜೀರ್ಣೋದ್ದಾರಗೊಳಿಸುವ ಕಾರ್ಯದಲ್ಲಿ ಕಂಪೆನಿಯೇ ಮೇಲುಸ್ತುವಾರಿ ವಹಿಸಬೇಕಿದೆ. ಅಲ್ಲದೇ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕೆಂಬುದು ಗ್ರಾಮಸ್ಥರ ಬೇಡಿಕೆಯಾಗಿದ್ದು, ಮತ್ತೆ ಯಾವ ರೀತಿ ಇಲ್ಲಿ ನೇಮೋತ್ಸವ ನಡೆಸಬೇಕು ಎಂಬ ಬಗ್ಗೆ ಗ್ರಾಮಸ್ಥರು ಹಾಗೂ ಕಂಪೆನಿ ಯೋಚಿಸಬೇಕಿದೆ‌‌. ಇಲ್ಲದೇ ಇದ್ದರೆ ಮತ್ತಷ್ಟು ಅನಾಹುತಗಳಿಗೆ ದಾರಿ ಮಾಡಿ ಕೊಟ್ಟಾಂತಾಗುತ್ತೆ ಅನ್ನೋದೇ ಗ್ರಾಮಸ್ಥರ ಅಭಿಪ್ರಾಯ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News