Saturday, July 27, 2024
Homeಸುದ್ದಿಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಜೀವ ತಳೆಯಲಿದೆ ಮೂಡಬಿದ್ರೆಯ ನಾಗಲಿಂಗ ಪುಷ್ಪದ ಗಿಡ..!

ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಜೀವ ತಳೆಯಲಿದೆ ಮೂಡಬಿದ್ರೆಯ ನಾಗಲಿಂಗ ಪುಷ್ಪದ ಗಿಡ..!

ಮಂಗಳೂರು, ಸೆಪ್ಟೆಂಬರ್ 26: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮುಂದಿನ ವರ್ಷ ರಾಮಮಂದಿರ ಲೋಕಾರ್ಪಣೆಯಾಗಲಿದೆ. ಈಗಾಗಲೇ ರಾಜ್ಯದ ಬೇರೆ ಬೇರೆ ಭಾಗದಿಂದ ರಾಮಮಂದಿರಕ್ಕೆ ವಸ್ತುಗಳು ಸಮರ್ಪಿತವಾಗಿದೆ. ಈ ನಡುವೆ ಕಡಲನಗರಿ ಮಂಗಳೂರಿನಿಂದ ನಾಗಲಿಂಗ ಎಂಬ ವೃಕ್ಷದ ಗಿಡ ರವಾನೆಯಾಗಿದೆ. ಹಾಗಾದ್ರೆ ನಾಗಲಿಂಗ ವೃಕ್ಷದ ಮಹತ್ವವೇನು? ಕಡಲನಗರಿಯಿಂದ ಅಯೋಧ್ಯೆಗೆ ಇದು ತಲುಪಿದ ಬಗೆ ಹೇಗೆ? ಸಂಪೂರ್ಣ ವಿವರ ಇಲ್ಲಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಮುಂದಿನ ಜನವರಿ ತಿಂಗಳಲ್ಲಿ ಮಂದಿರ ಲೋಕಾರ್ಪಣೆಯಾಗುವ ಸೂಚನೆಯಿದೆ. ಈ ಮೂಲಕ ಕೋಟ್ಯಾಂತರ ರಾಮಭಕ್ತರ ದಶಕಗಳ ಕನಸು ನೆರವೇರುತ್ತಿದೆ. ಈಗಾಗಲೇ ಈ ರಾಮಮಂದಿರ ನಿರ್ಮಾಣಕ್ಕೆ ವಿವಿಧ ರಾಜ್ಯಗಳಿಂದ ಹಲವು ವಸ್ತುಗಳ ಸಮರ್ಪಿತವಾಗಿವೆ. ಇದೀಗ ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ನಿಡ್ಡೋಡಿಯಿಂದ ನಾಗಲಿಂಗ ವೃಕ್ಷದ ಗಿಡವನ್ನು ಅಯೋಧ್ಯೆಗೆ ಕಳುಹಿಸಿಕೊಡಲಾಗಿದೆ.

ಏನಿದು ನಾಗಲಿಂಗ ವೃಕ್ಷ?
ನಾಗಲಿಂಗ ವೃಕ್ಷ ಎಂದರೆ ನಾಗಲಿಂಗಾಕಾರದ ಹೂ ಬಿಡುವ ವಿಶಿಷ್ಟ ವೃಕ್ಷ. ದೊಡ್ಡ ಮರವಾಗಿ ಬೆಳೆಯುವ ಈ ಗಿಡವನ್ನು ಬೆಳೆಸಿ ಉಚಿತವಾಗಿ ಹಂಚುವವರು ನಿಡ್ದೋಡಿಯ ವಿನೇಶ್ ಪೂಜಾರಿ. ಗೂಗಲ್ ಮೂಲಕ ಅಯೋಧ್ಯೆಯ ಬಗ್ಗೆ ವಿವರ ಪಡೆದು ಅಲ್ಲಿನ ಅಧಿಕಾರಿಗಳ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನಾಗಲಿಂಗ ವೃಕ್ಷದ ಬಗ್ಗೆ ವಿವರ ನೀಡಿದ್ದರು. ಮಾಹಿತಿ ಪಡೆದ ಅಧಿಕಾರಿಗಳು ಅಯೋಧ್ಯೆಯಲ್ಲಿ ಈ ಹೂವಿನ ಗಿಡವನ್ನು ನೆಡುವ ಸಲುವಾಗಿ ಕಳುಹಿಸಿಕೊಡುವಂತೆ ವಿನಂತಿಸಿದರು. ಅದರಂತೆ ವಿನೇಶ್ ಪೂಜಾರಿ ಕೊರಿಯರ್ ಮೂಲಕ ನಾಗಲಿಂಗ ವೃಕ್ಷದ 5 ಗಿಡಗಳನ್ನು ಅಯೋಧ್ಯೆಗೆ ಕಳುಹಿಸಿಕೊಟ್ಟಿದ್ದಾರೆ.

ಕೆಲ ದಿನಗಳಲ್ಲಿಯೇ ಅಯೋಧ್ಯೆಯ ಅಧಿಕಾರಿಗಳಿಂದ ವಿನೇಶ್ ಅವರಿಗೆ ಕರೆ ಬಂದಿದ್ದು ಗಿಡ ಸಿಕ್ಕಿದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನು ರಾಮಮಂದಿರದ ಆವರಣದಲ್ಲಿಯೇ ನೆಟ್ಟು ಪೋಟೊವನ್ನು ಕಳುಹಿಸಿಕೊಡುವುದಾಗಿ ಹೇಳಿದ್ದಾರೆ. ನಾಗಲಿಂಗ ಪುಷ್ಪ ಮೂಲತಃ ದಕ್ಷಿಣ ಅಮೆರಿಕದ್ದಾಗಿದ್ದು ಅತ್ಯಂತ ವಿರಳವಾಗಿ ಕಾಣಸಿಗುವ ಪುಷ್ಪ ಇದಾಗಿದೆ. ಶಿವಪೂಜೆಗೆ ಪವಿತ್ರ ಎಂದು ನಂಬಲ್ಪಡುವ ಈ ನಾಗಲಿಂಗ ಪುಷ್ಪವನ್ನು ಮಲ್ಲಿಕಾರ್ಜುನ ಪುಷ್ಪ, ಶಿವಲಿಂಗ ಪುಷ್ಪ ಎಂದೆಲ್ಲ ಕರೆಯುತ್ತಾರೆ. ಮಂಗಳೂರಿನ ಒಂದು ಕಡೆ ಈ ಮರವನ್ನು ಕಂಡ ವಿನೀಶ್ ಪೂಜಾರಿ, ಇದರ ಕಾಯಿಗಳನ್ನು ತಂದು ಬೀಜದ ಮೊಳಕೆ ಬರಿಸಿ ಅಗತ್ಯವಿದ್ದವರಿಗೆ ಉಚಿತವಾಗಿ ಹಂಚುವ ಕೆಲಸ ಶುರು ಮಾಡಿದರು. ಕೇರಳದ ಪ್ರಸಿದ್ದ ಶಬರಿಮಲೆ ಅಯ್ಯಪ್ಪನ ದೇವಸ್ಥಾನ ಸೇರಿದಂತೆ ದೈವಸ್ಥಾನ ಮತ್ತಿತರ ಕಡೆಗಳಿಗೆ ವಿತರಿಸಿದ ವಿನೇಶ್ ಇದುವರೆಗೆ ಸುಮಾರು 3000ಕ್ಕಿಂತಲೂ ಅಧಿಕ ಗಿಡಗಳನ್ನು ಹಂಚಿದ್ದಾರೆ.

ವೃತ್ತಿಯಲ್ಲಿ ಎಲೆಕ್ಟಿಕಲ್ ಕೆಲಸವನ್ನು ನಿರ್ವಹಿಸುವ ವಿನೇಶ್ ಅವರ ನಾಗಲಿಂಗ ವೃಕ್ಷ ವಿತರಣೆಯ ಕಾರ್ಯ ಈಗಲೂ ಮುಂದುವರಿದೆ. ಸದ್ಯ ಅಯೋಧ್ಯೆಯಲ್ಲಿಯು ನಾಗಲಿಂಗ ವೃಕ್ಷ ಬೆಳೆಯುತ್ತಿರುವುದು ವಿನೇಶ್ ಅವರ ಸಂತಸಕ್ಕೆ ಕಾರಣವಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News