‘ಅಧಿಕಾರಿಗಳು ಜನರನ್ನು ಅಲೆದಾಡಿಸಿದರೆ ಸರಕಾರಕ್ಕೆ ಕೆಟ್ಟ ಹೆಸರು‌ ಬರುತ್ತದೆ’; ಲಕ್ಷ್ಮಿ ಹೆಬ್ಬಾಳ್ಕರ್

ಉಡುಪಿ, ಸೆ 25: ಎಷ್ಟೇ ದೊಡ್ಡ ಅಧಿಕಾರಿಗಳು ಇರಲಿ ಜನರ ಸಮಸ್ಯೆಗಳನ್ನು ಮೊದಲು ಆಲಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು‌ ಹೊರತು ಟೇಬಲ್ ನಿಂದ  ಟೇಬಲ್ ಗೆ ಕಡತಗಳನ್ನು ಹಸ್ತಾಂತರ ಮಾಡಬಾರದು ಎಂಬುವುದು  ನಮ್ಮ ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.


ಜಿಲ್ಲಾಡಳಿತ ಉಡುಪಿ,  ಜಿಲ್ಲಾ ಪಂಚಾಯತ್,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಸಚಿವರು ಹಾಗೂ ಉಡುಪಿ ‌ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ  ಸೋಮವಾರದಂದು ಜಿಲ್ಲಾಡಳಿತದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ರಾಜ್ಯದ್ಯಾಂತ ಯಾರು ಊಹಿಸದ ಜನಾಶಿರ್ವಾದದಿಂದ ಕಾಂಗ್ರೆಸ್ ಸರಕಾರ ಕೆಲಸ ಮಾಡುತ್ತಿದೆ. ನಮ್ಮ ಮುಖ್ಯ ಉದ್ದೆಶ   ಅಧಿಕಾರಿಗಳು ಮನೆ ಮನೆಗೆ ತೆರಳಿ  ಜನರ ಸಮಸ್ಯೆಗಳನ್ನು ಆಲಿಸಬೇಕು ಅದನ್ನು ಬಿಟ್ಟು ಜನರು ಅಧಿಕಾರಿಗಳ ಬಳಿ ಮುಂದಿನ ದಿನಗಳಲ್ಲಿ ಬರಬಾರದು. ಜನರಿಗೆ ರೆವಿನ್ಯೂ, ಅರಣ್ಯ, ಪೊಲಿಸ್ ಇಲಾಖೆ ಆರೋಗ್ಯ ಇಲಾಖೆಯಲ್ಲಿ ಹಲವಾರು ಸಮಸ್ಯೆ ಇರುತ್ತದೆ. ಆದರೆ ಈ ಫೈಲ್ ಗಳನ್ನು ಟೇಬಲ್ ನಿಂದ ಟೇಬಲ್ ಗೆ ಹಸ್ತಾಂತರ ವಾಗಿಸಿದೇ ಜನರಿಗೆ ಸರಕಾರದ ಮೇಲೆ  ನಿರಾಸೆ ಮೂಡದಂತೆ ಮಾಡಬೇಕಾಗಿರುವುದು ಅಧಿಕಾರಿಗಳು. ನಾವು ಜನರನ್ನು ಅಲೆದಾಡಿಸಿದರೆ ಸರಕಾರಕ್ಕೆ ಕೆಟ್ಟ ಹೆಸರು‌ ಬರುತ್ತದೆ. ನಾನು ಉಸ್ತುವಾರಿ ಸಚಿವೆ ಯಾಗಿ  ಇರುವವರೆಗೆ ತಿಂಗಳಿಗೆ ಎರಡು ಬಾರಿ ಜನತಾ ದರ್ಶನಕ್ಕೆ ಖಂಡಿತಾ ಬರುತ್ತೆನೆ. ಮಾತ್ರವಲ್ಲದೇ ಮುಂದಿನ ಜನತಾ ದರ್ಶನದಲ್ಲಿ ಈ ಬಾರಿಯ ಸಮಸ್ಯೆಗಳು ಪರಿಹಾರ‌ ಆಗಿದೆಯೋ ಇಲ್ಲವೋ ಎಂಬುವುದನ್ನು ಪರಿಶೀಲಿಸುತ್ತೇನೆ. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಕೂಡಾ ಜನತಾ ದರ್ಶನ ಕಾರ್ಯಕ್ರಮ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ  ಜಿಲ್ಲಾಧಿಕಾರಿ ಡಾ.‌ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಮಮತಾದೇವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಸನ್ನ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಮೊದಲಾದ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ‌ ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳಿಗೆ ಜನರ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು. ಒಟ್ಟು 86ರಷ್ಟು ಅರ್ಜಿಗಳು ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದವು.‌

Scroll to Top