ಕಾಪು : ರೆಸಿಡೆನ್ಸಿ ಬಳಿ ಪಾರ್ಕ್ ಮಾಡಿ ಹೋಗಿದ್ದ ಪಲ್ಸರ್ ಬೈಕ್ ಕಳವು ಪ್ರಕರಣವನ್ನು ಭೇದಿಸಿರುವ ಕಾಪು ಪೊಲೀಸರು ಆರೋಪಿ ಮೂಳೂರು ನಿವಾಸಿ ಸೂರಜ್ ಕೋಟ್ಯಾನ್ (31) ಎಂಬಾತನನ್ನು ಬಂಧಿಸಿದ್ದಾರೆ.
ಕಾಪು ಸ್ಮಾಲ್ ವರ್ಲ್ಡ್ ಬಿಲ್ಡಿಂಗ್‌ನಲ್ಲಿ ಸೆಲೂನ್ ನಡೆಸುತ್ತಿರುವ ಉತ್ತರ ಪ್ರದೇಶ ಮೂಲದ ಶಾರುಖ್ ಹಸನ್ ಸೆ. 7ರಂದು ರಾತ್ರಿ ಕಾಪು ರೆಸಿಡೆನ್ಸಿ ಬಳಿ ನಿಲ್ಲಿಸಿ ಹೋಗಿದ್ದ ಬೈಕ್ ಸೆ.8 ರಂದು ಬೆಳಗ್ಗೆ ಬಂದು ನೋಡುವಾಗ ನಾಪತ್ತೆಯಾಗಿತ್ತು.
ಅನೂಪ್ ಕುಮಾರ್ ಅವರಿಗೆ ಸೇರಿರುವ 15,000 ರೂ. ಮೌಲ್ಯದ ಪಲ್ಸರ್ ಬೈಕ್ ಕಳವಾಗಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳವಾದ ಎರಡು ದಿನಗಳ ಬಳಿಕ ಕೊಪ್ಪಲಂಗಡಿ ಸ್ಮಶಾನದ ಬಳಿ ಪೊದೆಯಲ್ಲಿ ಅಡಗಿಸಿಟ್ಟಿದ್ದ ಬೈಕ್‌ನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಕೊಪ್ಪಲಂಗಡಿಯಲ್ಲಿ ಬೈಕ್ ಸಿಕ್ಕಿದ್ದರಿಂದ ಘಟನೆಯಲ್ಲಿ ಸ್ಥಳೀಯರೇ ಇರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ತನಿಖೆ ಚುರುಕುಗೊಳಿಸಿದ್ದರು.
ಕಾಪು ಎಸ್‌ಐ ಅಬ್ದುಲ್ ಖಾದರ್ ಮಾರ್ಗದರ್ಶನದಲ್ಲಿ ಕ್ರೈಂ ಎಸ್‌ಐ ಪುರುಷೋತ್ತಮ್, ಅಪರಾಧ ಪತ್ತೆ ವಿಭಾಗದ ನಾರಾಯಣ ಮತ್ತು ರಾಮು ಅವರ ನೇತೃತ್ವದ ತಂಡವು ಮೂಳೂರಿನ ಹಳೆ ಬೈಕ್ ಕಳ್ಳತನ ಆರೋಪಿ ಸೂರಜ್ ಬಗ್ಗೆ ಸಂಶಯ ವ್ಯಕ್ತಪಡಿಸಿ, ತನಿಖೆ ಚುರುಕುಗೊಳಿಸಿತ್ತು. ಆತನನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ತಾನೇ ಬೈಕ್ ಕಳವು ನಡೆಸಿದ್ದಾಗಿ ತಿಳಿಸಿದ್ದಾನೆ.
ಪೆಟ್ರೋಲ್ ಖಾಲಿಯಾಗಿದ್ದ ಬೈಕ್‌ನ್ನು ಕೊಪ್ಪಲಂಗಡಿ ಸ್ಮಶಾನದ ಬಳಿ ಅಡಗಿಸಿಟ್ಟಿದ್ದಾಗಿ ತಿಳಿಸಿದ್ದನು.
ಆರೋಪಿ ಸೂರಜ್ ಕೋಟ್ಯಾನ್ ಹಳೆ ಆರೋಪಿಯಾಗಿದ್ದು ಈತನ ವಿರುದ್ಧ ಹಿಂದೆ ಕಾಪು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಕೋಣಾಜೆ, ಕಂಕನಾಡಿ, ಪಣಂಬೂರು ಪೊಲೀಸ್ ಠಾಣೆಗಳಲ್ಲಿ ಬೈಕ್ ಕಳವು ಮತ್ತು ದರೋಡೆ ಪ್ರಕರಣ ದಾಖಲಾಗಿದ್ದವು.
ಬೈಕ್ ಕಳವಾದ ಹತ್ತು ದಿನದೊಳಗೆ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರ ಕ್ರಮಕ್ಕೆ ಸಾರ್ವಜನಿಕರಿಂದ ಮತ್ತು ಮೇಲಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕಾಪು : ಪಲ್ಸರ್ ಬೈಕ್ ಕಳವು ಪ್ರಕರಣ : ಆರೋಪಿಯ ಬಂಧನ
