ನಾಗರಿಕ ಸೇವಾ ಸಮಿತಿ ರಿ ಬಂಟಕಲ್ಲು ಇವರ ಪ್ರಯೋಜಕತ್ವದಲ್ಲಿ ಬಂಟಕಲ್ಲು ಬಸ್ಸು ನಿಲ್ದಾಣದಲ್ಲಿ ಗ್ರಂಥಾಲಯ ಆರಂಭವಾಗುತ್ತಿದ್ದು ಬಸ್ಸಿಗೆ ಕಾಯುವ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ಪುಸ್ತಕಗಳನ್ನು ಓದುವ ಸದಾವಕಾಶವನ್ನು ನೀಡುವುದು, ಮೊಬೈಲ್ ಗೆ ಬದಲಾಗಿ ಪುಸ್ತಕ ಓದುವ ಅಭಿರುಚಿಯನ್ನು ಬೆಳೆಸುವುದು ಹಾಗೂ ಇತರರಿಗೆ ಪುಸ್ತಕಗಳನ್ನು ಓದುವಂತೆ ಮಾಡುವ ಉದ್ದೇಶದಿಂದ ಪುಸ್ತಕಗಳ ಒಂದು ಕಬಾಟನ್ನು ಇರಿಸಲಾಗಿದೆ.
ಇದರಲ್ಲಿ ಬೇರೆ, ಬೇರೆ ಪುಸ್ತಕಗಳನ್ನು ಸಾರ್ವಜನಿಕರಿಂದಲೇ ಸಂಗ್ರಹಿಸಿ ಇಡಲಾಗುತ್ತದೆ. ನಿಮ್ಮ ಮನೆಯಲ್ಲಿರುವ , ಓದಿ ಆಗಿರುವ ಯಾವುದೇ ಪುಸ್ತಕಗಳನ್ನು (ಪಠ್ಯ ಪುಸ್ತಕಗಳನ್ನು ಹೊರತುಪಡಿಸಿ) ತಂದು ಇಡಬಹುದಾಗಿದೆ.( ಕತೆ, ಕಾದಂಬರಿ, ವಾರಪತ್ರಿಕೆಗಳು, ಜೀವನ ಚರಿತ್ರೆ,ಕವನ, ಸಾಹಿತ್ಯ,ಕಾನೂನು ಮಾಹಿತಿ, ಹಾಡು- ಸಂಗೀತ, ಇತ್ಯಾದಿ ಯಾವುದೇ ) ಇದರ ಮೂಲಕ ಆ ಪುಸ್ತಕಗಳನ್ನು ಇತರರೂ ಓದುವಂತಾಗುತ್ತದೆ.
ಓದುವ ಆಸಕ್ತರಿದ್ದರೆ ಅಲ್ಲಿಂದ ಪುಸ್ತಕಗಳನ್ನು ಮನೆಗೆ ಕೊಂಡುಹೋಗಿ ಮರುದಿನ ತಂದಿಡಬೇಕು. ಈ ಕಬಾಟಿಗಿ ಬಾಗಿಲು, ಬೀಗ ಇರುವುದಿಲ್ಲ. ನೀವು ಪಡೆದಿರುವ ಸಂಸ್ಕಾರ, ಶಿಕ್ಷಣವೇ ಈ ಕಬಾಟಿನ ಬೀಗ. ಇದರ ಸದುಪಯೋಗ ಪಡೆದು, ಮನೆಯಲ್ಲಿರುವ ಪುಸ್ತಕಗಳನ್ನು ತಂದಿಡಿ. ನೀವು ತಂದಿಡುವ ಪುಸ್ತಕದ ಮುಖಪುಟದಲ್ಲಿ ನಿಮ್ಮ ಹೆಸರನ್ನು ಬರೆಯಬಹುದಾಗಿದೆ ಎಂದು ನಾಗರಿಕ ಸೇವಾ ಸಮಿತಿ ರಿ.ಬಂಟಕಲ್ಲು ಇದರ ಅಧ್ಯಕ್ಷರು ಮತ್ತು ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.