ಬೆಂಗಳೂರು : ಪ್ರೇಮಿಗಳ ಖಾಸಗಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡುವುದಾಗಿ ಬ್ಲಾಕ್ಮೇಲ್ ಮಾಡಿ 1 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಇಬ್ಬರು ಆರೋಪಿಗಳನ್ನು ಚಂದ್ರಲೇಔಟ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಯನ ಮತ್ತು ಕಿರಣ್ ಬಂಧಿತ ಆರೋಪಿಗಳು.
ಇವರು ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಕೆಂಚನಾಪುರದಲ್ಲಿ ಶೆಟ್ಟಿ ಲಂಚ್ ಹೋಮ್ ಹೋಟೆಲ್ ಅನ್ನು ಹೊಸದಾಗಿ ಆರಂಭಿಸಿದ್ದರು. ನಯನ ಸಂಬಂಧಿಯಾಗಿದ್ದ ಎಂಬಿಎ ಪದವೀಧರೆ ವಿದ್ಯಾರ್ಥಿನಿ ಒಬ್ಬಳು ಆಗಾಗ ತನ್ನ ಗೆಳೆಯನ ಜೊತೆ ಶೆಟ್ಟಿ ಲಂಚ್ ಹೋಮ್ಗೆ ಬರುತ್ತಿದ್ದಳು.
ಈ ವೇಳೆ ಹೋಟೆಲ್ನ ರೂಮ್ನಲ್ಲಿರುವಂತೆ ಇಬ್ಬರಿಗೆ ಹೇಳುತ್ತಿದ್ದರು. ಮೊದಲೇ ಯೋಜಿಸಿದಂತೆ ಆರೋಪಿಗಳು ರಹಸ್ಯವಾಗಿ ಆ ರೂಮ್ನಲ್ಲಿ ಕ್ಯಾಮೆರಾ ಅಡಗಿಸಿಟ್ಟಿದ್ದರು. ಆ ಕ್ಯಾಮೆರಾದಲ್ಲಿ ಇಬ್ಬರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ಅದನ್ನ ಅಶ್ಲೀಲವಾಗಿ ಎಡಿಟ್ ಮಾಡಿ ಯುವತಿಗೆ ಫೋಟೊ, ವಿಡಿಯೋವನ್ನು ಕಿರಣ್ ಸೆಂಡ್ ಮಾಡಿ ತಕ್ಷಣ ಡಿಲೇಟ್ ಮಾಡಿದ್ದ ಎನ್ನಲಾಗಿದೆ.
ನಂತರ ಫೋನ್ ಮಾಡಿ 1 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಒಂದು ವೇಳೆ ಹಣ ಕೊಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದರು. ಇದರಿಂದ ಭಯಗೊಂಡು ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಈ ಸಂಬಂಧ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರ ಮೊಬೈಲ್ ವಶಕ್ಕೆ ಪಡೆದು ವಿಡಿಯೋ ಡಿಲೀಟ್ ಮಾಡಿದ್ದಾರೆ.