Wednesday, September 18, 2024
Homeಸುದ್ದಿಕರಾವಳಿಉಡುಪಿ : ಅಕ್ರಮ ಚಟುವಟಿಕೆಗಳಿಗೆ ವಾರದೊಳಗೆ ಕಡಿವಾಣ - ಜಿಲ್ಲೆಯ ನೂತನ ಎಸ್‌ಪಿ ಡಾ. ಅರುಣ್‌...

ಉಡುಪಿ : ಅಕ್ರಮ ಚಟುವಟಿಕೆಗಳಿಗೆ ವಾರದೊಳಗೆ ಕಡಿವಾಣ – ಜಿಲ್ಲೆಯ ನೂತನ ಎಸ್‌ಪಿ ಡಾ. ಅರುಣ್‌ ಕೆ

ಉಡುಪಿ: ಜಿಲ್ಲೆಯ ನೂತನ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಡಾ. ಅರುಣ್‌ ಕೆ. ನೇಮಕಗೊಂಡಿದ್ದು, ಅಧಿಕಾರ ಸ್ವೀಕರಿಸಿ ವಾರದೊಳಗೆ ಕಾನೂನು ಸುವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡುವ ಮೂಲಕ ಇಲಾಖೆಯನ್ನು ಜನಸ್ನೇಹಿಯಾಗಿಸುವ ಜತೆಗೆ ಅಕ್ರಮಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

ಮುಂದಿನ ಕಾರ್ಯಯೋಜನೆ ಸಹಿತ ಕೈಗೊಳ್ಳುವ ಕ್ರಮಗಳ ಬಗ್ಗೆ ಅವರು ಮಾತನಾಡಿದರು.


ಮಟ್ಕಾ, ಅಕ್ರಮ ಮರಳುಗಾರಿಕೆ ನಿಯಂತ್ರಣ ಸಾಧ್ಯವೇ..!!?

ಜಿಲ್ಲೆಯಾದ್ಯಂತ ಮಟ್ಕಾ ಹಾವಳಿ ಸಹಿತ ಇಸ್ಪೀಟ್‌ ಕ್ಲಬ್‌ಗಳಿಗೆ ಈಗಾಗಲೇ ಕಡಿವಾಣ ಹಾಕಲಾಗಿದೆ. ಅವಧಿ ಮೀರಿ ಬಾರ್‌, ಪಬ್‌ಗಳು ಕಾರ್ಯನಿರ್ವಹಿಸದಂತೆ ಸೂಚನೆ ನೀಡಲಾಗಿದೆ. ಆದರೂ ನಡೆಯುತ್ತಿದ್ದರೆ ಸಾರ್ವಜನಿಕರು ಮಾಹಿತಿ ನೀಡಬಹುದು. ಅಕ್ರಮ ಮರಳುಗಾರಿಕೆ ನಿಯಂತ್ರಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ವಾರದೊಳಗೆ ಜಿಲ್ಲೆಯಲ್ಲಿರುವ ಎಲ್ಲ ಅಕ್ರಮ ಚಟುವಟಿಕೆಗಳಿಗೂ ಕಡಿವಾಣ ಹಾಕಲಾಗುವುದು. ಕಾನೂನು ಪ್ರಕಾರ ವ್ಯಾಪಾರ ಮಾಡುವವರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು.


ಮಾದಕ ದ್ರವ್ಯ ಪೂರೈಕೆ ತಡೆಗಟ್ಟಬಹುದೇ?

ಗಾಂಜಾ ಸಹಿತ ಡ್ರಗ್ಸ್‌ ತಡೆಗೆ ವಿಶೇಷ ಕಾರ್ಯಾಚರಣೆ ರೂಪಿಸಲಾಗುವುದು. ಈಗಾಗಲೇ ಶಾಲಾ-ಕಾಲೇಜುಗಳಲ್ಲಿ ಪೊಲೀಸರ ಮೂಲಕ ಜಾಗೃತಿ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಮಾದಕ ದ್ರವ್ಯ ಪೂರೈಕೆದಾರರ ಮಾಹಿತಿ ಸಂಗ್ರಹಿಸಿ ನಿರ್ಮೂಲನೆಗೆ ಬೇಕಿರುವ ಎಲ್ಲ ಪೂರಕ ಕ್ರಮ ತೆಗೆದುಕೊಳ್ಳುವಂತೆ ಆಯಾ ಠಾಣಾ ನಿರೀಕ್ಷಕರಿಗೆ ಸೂಚನೆ ನೀಡಲಾಗಿದೆ.

ನೈತಿಕ ಪೊಲೀಸ್‌ಗಿರಿಗೆ ಏನು ಕ್ರಮ?

ಯಾರು ಕೂಡ ಕಾನೂನನ್ನು ಕೈಗೆತ್ತಿಕೊಳ್ಳುವ ಪ್ರಶ್ನೆಯೇ ಬರಬಾರದು. ಇಂತಹ ವಿಚಾರಗಳು ಕಂಡುಬಂದರೆ ಪೊಲೀಸರಿಗೆ ಮೊದಲು ಮಾಹಿತಿ ನೀಡಬೇಕು. ಇಲ್ಲದಿದ್ದರೆ ಕಾನೂನು ಕೈಗೆತ್ತಿಕೊಂಡವರ ಮೇಲೆ ಕ್ರಮ ಜರಗಿಸಲಾಗುವುದು.

ಸೈಬರ್‌ ಕ್ರೈಂ ನಿಯಂತ್ರಣ ಹೇಗೆ?

ಸೈಬರ್‌ ಠಾಣೆಗಳ ಬಲವರ್ಧನೆಗೆ ಪ್ರಸ್ತುತ ಇರುವ ಸಿಬಂದಿಗೆ ಹೆಚ್ಚಿನ ತರಬೇತಿ ನೀಡ ಲಾಗುವುದು. ಎಲ್ಲ ಠಾಣೆ ಯಲ್ಲಿಯೂ ಸೈಬರ್‌ ಕ್ರೈಂ ಪ್ರಕರಣದ ಬಗ್ಗೆ ದೂರು ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ. ಠಾಣೆಗಳಲ್ಲಿ ದೂರು ಸ್ವೀಕರಿಸದಿದ್ದರೆ ನನಗೆ ಖುದ್ದು ಮಾಹಿತಿ ನೀಡಬಹುದು. ಈಗಾಗಲೇ ಸೈಬರ್‌ ಅಪರಾಧಗಳನ್ನು ಪತ್ತೆಹಚಲು ಇಲಾಖೆಗೆ ಅತ್ಯಾಧುನಿಕ ಪರಿಕರಗಳನ್ನು ಒದಗಿಸಲಾಗಿದೆ. ಅಗತ್ಯಬಿದ್ದರೆ ಪರಿಣತರ ನೆರವು ಪಡೆಯಲಾಗುವುದು.

ವಿಶೇಷ ಕಾರ್ಯಾಚರಣೆ ನಡೆಸುವಿರಾ?

ಕಾನೂನು ಪಾಲಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ಅನಿವಾರ್ಯ. ಹೀಗಿದ್ದಾಗ ಮಾತ್ರ ಎಲ್ಲರೂ ಎಚ್ಚರದಿಂದ ಇರಲು ಸಾಧ್ಯ. ಈ ಹಿಂದೆ ಇದ್ದ ಆಪರೇಷನ್‌ ಸನ್‌ಸೆಟ್‌ ಸಹಿತ ಆಯಾ ಭಾಗದಲ್ಲಿ ವಿಶೇಷ ಸಂದರ್ಭಗಳಲ್ಲಿ ಹೆಚ್ಚುವರಿ ಚೆಕ್‌ಪೋಸ್ಟ್‌ ಅಳವಡಿಸಿ ಪರಿಶೀಲನೆ ನಡೆಸಲಾಗುವುದು.

ಸುಗಮ ಸಂಚಾರಕ್ಕೇನು
ಕ್ರಮ ತೆಗೆದುಕೊಳ್ಳುವಿರಿ?

ಜಿಲ್ಲೆಯಲ್ಲಿ ಟ್ರಾಫಿಕ್‌ ದಟ್ಟಣೆ ಕಂಡುಬರುವ ಪ್ರದೇಶಗಳು ಹಾಗೂ ಅಪಘಾತ ವಲಯಗಳನ್ನು ಗುರುತಿಸಲಾಗುವುದು. ಈ ಬಗ್ಗೆ ಶೀಘ್ರದಲ್ಲಿಯೇ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಲಾಗುವುದು. ಟ್ರಾಫಿಕ್‌ ಸಿಗ್ನಲ್‌ಗ‌ಳ ಅಳವಡಿಕೆ ಹಾಗೂ ನಗರದ ಆಯಕಟ್ಟಿನ ಭಾಗದಲ್ಲಿ ಸಿಸಿಟಿವಿ ಕೆಮರಾಗಳನ್ನು ಸಿಎಸ್‌ಆರ್‌ ಫ‌ಂಡ್‌ ಅಥವಾ ಇನ್ನಿತರ ಸಹಕಾರದಿಂದ ಅಳವಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಹೆದ್ದಾರಿ ಗಸ್ತು ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲು ಸೂಚನೆ ನೀಡಲಾಗಿದೆ.

ಮಹಿಳಾ ಠಾಣೆಯ ಬಲವರ್ಧನೆ ನಿರೀಕ್ಷಿಸಬಹುದೇ?

ಖಂಡಿತ. ಮಹಿಳಾ ಠಾಣೆಯ ಬಲವರ್ಧನೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಅಬ್ಬಕ್ಕ ಪಡೆ ಅಥವಾ ವಿಶೇಷ ತಂಡ ರಚಿಸುವ ಬಗ್ಗೆಯೂ ಚಿಂತನೆ ನಡೆಸಲಾಗುವುದು.

ಜಿಲ್ಲೆಯಲ್ಲಿ ಈಗಾಗಲೇ ಬೀಟ್‌ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ. ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಎಲ್ಲ ಪೊಲೀಸರಿಗೂ ಸೂಚನೆ ನೀಡಲಾಗಿದೆ. ಆದರೂ ಉಲ್ಲಂಘನೆ ಕಂಡು ಬಂದರೆ ಆಯಾ ಠಾಣಾ ವ್ಯಾಪ್ತಿಯ ಪೊಲೀಸರನ್ನೂ ವಿಚಾರಣೆ ಗೊಳಪಡಿಸಿ ಸೂಕ್ತ ಕ್ರಮ ಜರಗಿಸಲಾಗುವುದು. ಭ್ರಷ್ಟಾಚಾರ ಸಹಿತ ಕಾನೂನು ಉಲ್ಲಂ ಸುವ ಯಾರೇ ಆದರೂ ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು.
– ಡಾ| ಅರುಣ್‌ ಕೆ. ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಸಾರ್ವಜನಿಕರ ಸಮಸ್ಯೆಗೆ ಸ್ಥಳೀಯ ಠಾಣೆಗಳಿಂದ ಪೂರಕವಾಗಿ ಸ್ಪಂದನೆ ಸಿಗದಿದ್ದರೆ ಅಥವಾ ಏನಾದರೂ ದೂರುಗಳಿದ್ದರೆ ಪೊಲೀಸ್‌ ವರಿಷ್ಠಾಧಿಕಾರಿಗಳ ಈ ಸಂಖ್ಯೆಗೆ ಕರೆ ಅಥವಾ ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಬಹುದು.
ಮೊಬೈಲ್‌: 9480805401

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News