ಉಡುಪಿ: ಪೊಡವಿಗೊಡೆಯ ಶ್ರೀಕೃಷ್ಣನ ಜನ್ಮ ಹಾಗೂ ಬಾಲಲೀಲೆಗಳನ್ನು ಸಂಭ್ರಮಿಸುವ ವಿಟ್ಲಪಿಂಡಿ ಉತ್ಸವವು ಕೃಷ್ಣಮಠದಲ್ಲಿ ಗುರುವಾರ ಭಕ್ತ ಜನಸಾಗರದ ಮಧ್ಯೆ ವೈಭವದಿಂದ ಸಂಪನ್ನಗೊಂಡಿತು.
ಈ ಉತ್ಸವಕ್ಕೆಂದು ವಿಶೇಷವಾಗಿ ತಯಾರಿಸಲಾದ ಮೃಣ್ಮಯಿ (ಮಣ್ಣಿನಲ್ಲಿ ತಯಾರಿಸಿದ ಶ್ರೀಕೃಷ್ಣನ ಮೂರ್ತಿ) ಮೂರ್ತಿಯನ್ನು ಚಿನ್ನದ ರಥದಲ್ಲಿರಿಸಿ ರಥಬೀದಿಯ ಸುತ್ತ ಮೆರವಣಿಗೆ ನಡೆಸಲಾಯಿತು. ಇನ್ನೊಂದು ರಥದಲ್ಲಿ ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ಉತ್ಸವ ಮೂರ್ತಿನ್ನಿರಿಸಿ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ಸಲುವಾಗಿ ಮಣ್ಣಿನ ಮಡಕೆಯಲ್ಲಿ ಮೊಸರು, ಹಾಲು, ಓಕುಳಿಗಳನ್ನು ತುಂಬಿ ರಥಬೀದಿಯ ಸುತ್ತಲೂ ವಿಶೇಷವಾಗಿ ನಿರ್ಮಿಸಿದ ಗುರ್ಜಿಗಳಿಗೆ ಅವುಗಳನ್ನು ಕಟ್ಟಿ ಗೊಲ್ಲ ಸಮುದಾಯದವರು ಉದ್ದನೆಯ ಕೋಲುಗಳಿಂದ ಮಡಕೆಗಳನ್ನು ಒಡೆಯುವ ಆಟ ಗಮನಸೆಳೆಯಿತು.
ರಥಬೀದಿಯ ಅದಮಾರು ಮತ್ತು ಪುತ್ತಿಗೆ ಮಠದ ಮಧ್ಯಭಾಗದಲ್ಲಿ ಹಾಕಲಾದ ವೇದಿಕೆಯಲ್ಲಿ ಹುಲಿವೇಷ ಪ್ರದರ್ಶನವನ್ನು ಪರ್ಯಾಯ ಕೃಪ್ಣಾಪುರ ಮಠಾಧೀಶರಾದ ವಿದ್ಯಾಸಾಗರತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಹಾಗೂ ಶಿರೂರು ಮಠದ ವೇದವರ್ಧನತೀರ್ಥ ಸ್ವಾಮೀಜಿ ವೀಕ್ಷಿಸಿದರು.
ಬಳಿಕ ಸ್ವಾಮೀಜಿಗಳು ಉಂಡೆ, ಚಕ್ಕುಲಿ ಹಾಗೂ ಹಣ್ಣು ಹಂಪಲುಗಳನ್ನು ಭಕ್ತ ಸಮೂಹದ ಮಧ್ಯೆ ಎಸೆದರು. ಸ್ವಾಮೀಜಿ ಎಸೆದ ಉಂಡೆ, ಚಕ್ಕುಲಿ, ಲಾಡುಗಳನ್ನು ಸ್ವೀಕರಿಸಲು ಭಕ್ತರು ಮುಗಿಬಿದ್ದರು.
ಮೆರವಣಿಗೆಯ ಕೊನೆಯಲ್ಲಿ ಚಿನ್ನದ ರಥದಲ್ಲಿರಿಸಿದ ಕೃಷ್ಣನ ಮಣ್ಣಿನ ಮೂರ್ತಿ ಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸುವುದರೊಂದಿಗೆ ಈ ಬಾರಿಯ ಕೃಷ್ಣಾಜನ್ಮಷ್ಟಮಿ ವಿಧಿಗಳು ಸಂಪನ್ನಗೊಂಡವು.
ಉತ್ಸವದಲ್ಲಿ ಹುಲಿವೇಷ, ಚಂಡೆ, ತಟ್ಟಿರಾಯ, ವಾದ್ಯ, ಕೃಷ್ಣ ವೇಷ, ರಕ್ಕಸ ವೇಷ, ಗಾಂಧೀಜಿ ವೇಷಗಳು ಕಂಡುಬಂದವು.
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರದಾದ್ಯಂತ ಸುಮಾರು 300ಕ್ಕೂ ಅಧಿಕ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ.
ಉಡುಪಿಯ ರಥಬೀದಿ, ಕೃಷ್ಣ ಮಠ ಪರಿಸರ ಮತ್ತು ನಗರದಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. 1 ಕೆಎಸ್ಅರ್ಪಿ, ಓರ್ವ ಡಿವೈಎಸ್ಪಿ, 6 ಸಿಪಿಐ, 14 ಪಿಎಸ್ಐ, 26 ಎಎಸ್ಐ, 4 ಡಿಎಆರ್ ತಂಡವನ್ನು ಭದ್ರತೆಗೆ ನೇಮಿಸಲಾಗಿದೆ. ವಿಧ್ವಂಸಕ ಕೃತ್ಯ ನಿಗ್ರಹ ದಳ ತಂಡವನ್ನೂ ನಿಯೋಜಿಸಲಾಗಿದೆ.