Sunday, May 26, 2024
Homeಸುದ್ದಿಕರಾವಳಿಉಡುಪಿಯಲ್ಲಿ ಧರೆಗಿಳಿದು ಬಂದ ಶ್ರೀಕೃಷ್ಣ- ರಾತ್ರಿ 11.42ಕ್ಕೆ ಅರ್ಘ್ಯ ಅರ್ಪಣೆ

ಉಡುಪಿಯಲ್ಲಿ ಧರೆಗಿಳಿದು ಬಂದ ಶ್ರೀಕೃಷ್ಣ- ರಾತ್ರಿ 11.42ಕ್ಕೆ ಅರ್ಘ್ಯ ಅರ್ಪಣೆ

ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಡಗರ. ಅರ್ಘ್ಯ ಪ್ರಧಾನ ಎಂಬ ಧಾರ್ಮಿಕ ವಿಧಿಯ ಮೂಲಕ ಶ್ರೀಕೃಷ್ಣ ಪರಮಾತ್ಮನನ್ನು ಭೂಮಿಗೆ ಬರಮಾಡಿಕೊಳ್ಳಲಾಗಿದೆ. ಉಡುಪಿ ಕೃಷ್ಣ ಮಠದಲ್ಲಿ ರಾತ್ರಿ 11.42ಕ್ಕೆ ಅರ್ಘ್ಯ ಪ್ರಧಾನ ಮಾಡಲಾಯ್ತು. ಮಠದ ಗರ್ಭಗುಡಿಯಲ್ಲಿ ಅರ್ಘ್ಯ ಪ್ರಧಾನ ಮಾಡುವ ಮೂಲಕ ಶ್ರೀ ಕೃಷ್ಣನನ್ನು ಬರಮಾಡಿಕೊಳ್ಳುವ ಸಂಪ್ರದಾಯ ಕಳೆದ 800 ವರ್ಷದಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹಾಲು ಮತ್ತು ನೀರಿನಲ್ಲಿ ಶ್ರೀಕೃಷ್ಣನಿಗೆ ಅರ್ಘ್ಯ ನೀಡುವ ಮೂಲಕ ಶ್ರೀ ಕೃಷ್ಣನ ಜನನವಾಗುತ್ತದೆ ಎಂಬ ನಂಬಿಕೆ ಇದೆ. ಅಷ್ಟಮಠದ ಸ್ವಾಮೀಜಿಗಳು 8 ಮಠದ ಭಕ್ತರು ಕೃಷ್ಣಾಪುರ ಮಠಕ್ಕೆ ಸಂಬಂಧಪಟ್ಟ ಆಪ್ತ ವಲಯ, ಕೃಷ್ಣನ ಭಕ್ತರು ಅರ್ಘ್ಯ ಪ್ರಧಾನ ಕಾರ್ಯಕ್ರಮದಲ್ಲಿ ಭಕ್ತಿ ಭಾವದಿಂದ ಭಾಗಿಯಾಗಿದ್ದರು.

ಗರ್ಭಗುಡಿಯಲ್ಲಿ ಅರ್ಘ್ಯ ಪ್ರಧಾನ ಕಾರ್ಯಕ್ರಮ ಮುಗಿದ ಮೇಲೆ ಮಠದ ಚಂದ್ರ ಶಾಲೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಚಂದ್ರನಿಗೆ ಹಾಲು ಮತ್ತು ನೀರನ್ನು ಅರ್ಪಿಸುವ ಮೂಲಕ ಶ್ರೀ ಕೃಷ್ಣನನ್ನು ಸ್ವಾಗತ ಮಾಡುವ ಸಂಪ್ರದಾಯವಿದೆ. ಭಕ್ತರ ಭಕ್ತಿಗೆ ಒಲಿದ ಭಗವಂತನಿಗೆ ಹಾಲು ಮತ್ತು ನೀರಿನ ಸ್ವಾಗತ ಬಹಳ ಪವಿತ್ರದ್ದು ಎಂಬ ನಂಬಿಕೆ ಇದೆ.

ಇಂದು ಉಡುಪಿಯಲ್ಲಿ ಶ್ರೀ ಕೃಷ್ಣ ಲೀಲೋತ್ಸವ ನಡೆಯುತ್ತದೆ. ಅಷ್ಟಮಠಗಳ ರಥ ಬೀದಿಯಲ್ಲಿ ಶ್ರೀ ಕೃಷ್ಣ ಮುಖ್ಯಪ್ರಾಣ ಅನಂತೇಶ್ವರ ಚಂದ್ರಮೌಳೇಶ್ವರ ದೇವರ ಉತ್ಸವ ನಡೆಯಲಿದೆ. ಸಾವಿರಾರು ಮಂದಿ ಭಕ್ತರು ಮಠಾಧೀಶರುಗಳು ನೂರಾರು ತರಹದ ವೇಷಗಳು ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವಕ್ಕೆ ಮೆರುಗು ನೀಡಲಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. 40,000 ಚಕ್ಕುಲಿ ಒಂದು ಲಕ್ಷ ಉಂಡೆ ಸಿದ್ದವಾಗಿದೆ. ಕೃಷ್ಣನ ಲೀಲೋತ್ಸವ ಕಣ್ತುಂಬಿಕೊಳ್ಳಲು ಊರ ಪರವೂರ ಭಕ್ತರ ದಂಡು ಹರಿದುಬರಲಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News