Tuesday, September 10, 2024
Homeಸುದ್ದಿಅಂಕಣ'ಮಾತಾ, ಪಿತೃವಿನ ಸಮಾನಕ್ಕೆ ಗುರುವಿಗೂ ಸ್ಥಾನ ಕಲ್ಪಿಸಿದ ಬಲಿಷ್ಠ ಸಂಸ್ಕಾರಯುತ ದೇಶ ಭಾರತ'

‘ಮಾತಾ, ಪಿತೃವಿನ ಸಮಾನಕ್ಕೆ ಗುರುವಿಗೂ ಸ್ಥಾನ ಕಲ್ಪಿಸಿದ ಬಲಿಷ್ಠ ಸಂಸ್ಕಾರಯುತ ದೇಶ ಭಾರತ’

1888 ರ ಸೆಪ್ಟೆಂಬರ್ ತಿಂಗಳ ಐದನೆಯ ತಾರೀಕಿನಂದು ಜನಿಸಿದ, ಭಾರತ ಕಂಡ ಸರ್ವಶ್ರೇಷ್ಠ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವನ್ನು 1962 ರಿಂದ ಆರಂಭಿಸಲಾಗಿ ಭಾರತದಾದ್ಯಂತ ‘ಶಿಕ್ಷಕರ ದಿನಾಚರಣೆ’ ಎಂದು ಆಚರಿಸುತ್ತಾ ಬಂದಿದ್ದೇವೆ.

ವೃತ್ತಿಯಲ್ಲಿ ಶಿಕ್ಷಕರಾಗಿ, ಭಾರತದ ಅತ್ಯುನ್ನತ ಹುದ್ದೆ ಯಾದ ‘ರಾಷ್ಟ್ರಪತಿ’ ಸ್ಥಾನವನ್ನು ಅಲಂಕರಿಸಿ, ತಮ್ಮ ಹುಟ್ಟುಹಬ್ಬವನ್ನು ಶಿಕ್ಷಕರಿಗಾಗಿ ಮೀಸಲಿರಿಸಿದ, ಶಿಕ್ಷಕರ ಮೇಲಿನ ಅವರ ಪ್ರೀತಿಯ ಅರಿವಿನ ದ್ಯೋತಕ ಈ ‘ಶಿಕ್ಷಕರ ದಿನಾಚರಣೆ’.

ಶಿಕ್ಷಕ ಹುದ್ದೆ, ಬೆಳೆವ ಮಗುವೊಂದರ ಜೀವನ ರೂಪಿಸುವ, ಬಹಳ ಪವಿತ್ರವಾದ ಹುದ್ದೆ. ಗುರುವು ತನ್ನ ಬಳಿಯಿರುವ ಜೀವನ್ಮೌಲ್ಯಗಳನ್ನು ಮಕ್ಕಳಿಗೆ ಧಾರೆಯೆರೆಯುತ್ತಾರೆ. ಗುರುವೊಬ್ಬ ಹಿಂದೆ ಇದ್ದಾಗ ಮಾತ್ರ ಮುಂದಿನ ಗುರಿಯೆಡೆಗೆ ಸ್ಪಷ್ಟವಾಗಿ ದೃಷ್ಟಿ ನೆಡಬಹುದು. ಗುರುವು ತನ್ನ ಉತ್ತಮ ಬೋಧನೆಯ ಮೂಲಕ ಮಗುವಿನ ಆಂತರಿಕ ಶ್ರೇಯೋಭಿವೃದ್ಧಿಗೆ ಕಾರಣರಾಗುತ್ತಾರೆ. ಮಾತಾ, ಪಿತೃವಿನ ಸಮಾನಕ್ಕೆ ಗುರುವಿಗೂ ಸ್ಥಾನ ಕಲ್ಪಿಸಿದ ಬಲಿಷ್ಠ ಸಂಸ್ಕಾರಯುತ ದೇಶ ನಮ್ಮದು.

ಗುರುಬ್ರಹ್ಮ ಗುರುರ್ವಿಷ್ಣು
ಗುರುಃದೇವೋ ಮಹೇಶ್ವರಃ
ಗುರುಸಾಕ್ಷಾತ್ ಪರಃ ಬ್ರಹ್ಮ
ತಸ್ಮೈಶ್ರೀ ಗುರವೇ ನಮಃ..

ತಾಯಿ ಮಕ್ಕಳಿಗೆ ಜನ್ಮ ಕೊಡುತ್ತಾಳೆ, ಜೀವನ ಪಾಠ ಕಲಿಸುತ್ತಾಳೆ. ಶಿಕ್ಷಕರು ಆ ಮಕ್ಕಳಿಗೆ ಉತ್ತಮ ಜೀವನ ರೂಪಿಸಿಕೊಳ್ಳುವಲ್ಲಿ ಸಹಕಾರಿ ಆಗುತ್ತಾರೆ. ಶಿಕ್ಷಕರಿಗೂ ವಿದ್ಯಾರ್ಥಿ ವೃಂದಕ್ಕೂ ಅವಿನಾಭಾವ ಸಂಬಂಧವಿದೆ. ಮಗು ಮೊದಲು ಶಾಲೆಗೆ ಹೋದಾಗ ಶಿಕ್ಷಕರು ಹೇಳಿದ್ದನೆಲ್ಲ ನಂಬುತ್ತದೆ. ಮಗುವಿನ ಜಗತ್ತಿನಲ್ಲಿ ಶಿಕ್ಷಕರೆ “ದೇವರು”, “ರೋಲ್ ಮಾಡೆಲ್”, ಅವರೇ “ಸೂಪರ್ ಮ್ಯಾನ್”. ತನ್ನ ಗುರುಗಳಿಗೆ ತಿಳಿಯದ ವಿಷಯವೇ ಇಲ್ಲ ಎಂದು ಭಾವಿಸಿಕೊಳ್ಳುತ್ತದೆ. ಇಂಥ ಕಾಲದಲ್ಲಂತೂ ಶಿಕ್ಷಕರ ಜವಾಬ್ದಾರಿ ನಿಜವಾಗಿಯೂ ಮಹತ್ವದ್ದಾಗಿರುತ್ತದೆ. ಎಲ್ಲ ವಿಷಯಗಳಲ್ಲೂ ಸಮಾನತೆ ಕಾಯ್ದುಕೊಂಡು ಆರೋಗ್ಯಪೂರ್ಣ ಸಮಾಜಕ್ಕಾಗಿ ಆರೋಗ್ಯ ಪೂರ್ಣ ಪ್ರಜೆಯನ್ನು ರೂಪಿಸುವ ಜವಾಬ್ದಾರಿ ಶಿಕ್ಷಕ ರದ್ದು. ಪ್ರಾಥಮಿಕ ಹಂತದಲ್ಲಿ ನೀಡಿದ ಶಿಕ್ಷಣವೇ ಮಗುವನ್ನು ಜವಾಬ್ದಾರಿಯುತ ಪ್ರಜೆಯಾಗಿ ಬೆಳೆಸುತ್ತದೆ. ಇಂಥ ಪಕ್ವ ಕಾಲದಲ್ಲಿ ಈಗಿನ ಶಿಕ್ಷಕರು ನಿಜವಾಗಿ ತಮ್ಮ ಜವಾಬ್ದಾರಿಗೆ ನ್ಯಾಯ ಸಲ್ಲಿಸುತ್ತಿದ್ದಾರೆಯೇ..?

ಡಾ.ರಾಧಾಕೃಷ್ಣನ್‌ರಂಥ ಮಹಾನ್ ವಿದ್ವಾಂಸರು ಶಿಕ್ಷಕ ಸ್ಥಾನಕ್ಕೆ ಉನ್ನತವಾದ ಗೌರವ ತಂದುಕೊಟ್ಟಿದ್ದಾರೆ. ಅಂತಹುದೇ ಹಾದಿಯನ್ನು ಅನೇಕ ಶಿಕ್ಷಕರು, ಪ್ರಾಧ್ಯಾಪಕ ಮಹನೀಯರು ಸವೆಸಿದ್ದಾರೆ. ಆದರೆ ಇದೆಲ್ಲವೂ “ಮಾಜಿ” ಕಾಲದ್ದು. ಆದರೆ, ಈಗ ಶಿಕ್ಷಕರು ಕೇವಲ ಶಿಕ್ಷಕರಾಗಿ ಉಳಿದಿಲ್ಲ, ರಾಜಕಾರಣ, ವ್ಯಾಪಾರ ಮತ್ತು ಜಾತಿವಾದವು ಶಿಕ್ಷಕನ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದೆ. ಹೀಗಿರುವಾಗ ಮಾನಸಿಕವಾಗಿ ಸದೃಢವಾದ ಆರೋಗ್ಯಪೂರ್ಣ ಪ್ರಜೆಗಳು ಸಮಾಜದೊಳಕ್ಕಿಳಿಯಲು ಹೇಗೆ ಸಾಧ್ಯ? ಅಂತೆಯೇ ‘ಶಿಕ್ಷಕ ದಿನಾಚರಣೆ’ಯ ಮಹತ್ವ ಮಕ್ಕಳಲ್ಲಿ ಮೂಡುವುದಾದರೂ ಹೇಗೆ ಅಲ್ಲವೇ..?

ಎಲ್ಲ ಶಿಕ್ಷಕರೂ ಹೀಗೆಯೇ ಎಂದು ಹೇಳುವುದು ನನ್ನ ಉದ್ದೇಶವಲ್ಲ. ಹಾಗೆಯೇ ವಿದ್ಯಾರ್ಥಿಗಳೆಲ್ಲರೂ ಪ್ರಾಮಾಣಿಕರು ಎನ್ನುವುದೂ ಅಲ್ಲ. ಈಗಲೂ ಬೆರಳೆಣಿಕೆಯಷ್ಟು ಶಿಕ್ಷಕರು ತಮ್ಮ ಸ್ಥಾನಕ್ಕೆ ನಿಜವಾದ ಮಹತ್ವ ತಂದುಕೊಟ್ಟಿದ್ದಾರೆ. ಯಾವುದೇ ಮೂಲಸೌಕರ್ಯಗಳಿಲ್ಲದ ಊರಲ್ಲಿ, ಉತ್ತಮ ವಿದ್ಯಾರ್ಥಿಗಳನ್ನು ಮೇಲಕ್ಕೆ ತರಲು ಟೊಂಕ ಕಟ್ಟಿ ಹರಸಾಹಸ ಪ್ರದರ್ಶಿಸುವ ಶಿಕ್ಷಕರೆಷ್ಟಿಲ್ಲ? ಇನ್ನೂ ಕೆಲವರಂತೂ ಎಲ್ಲ ಮಕ್ಕಳನ್ನು ತಮ್ಮ ಮಕ್ಕಳೆಂದು ಭಾವಿಸಿ, ಅವರ ಭವಿಷ್ಯಕ್ಕಾಗಿ ಪಣ ತೊಟ್ಟು ನಿಂತಿರುತ್ತಾರೆ. ಇಂಥವರು ಬೆಳಕಿಗೆ ಬರುತ್ತಿಲ್ಲ ಎಂಬುದು ಶಿಕ್ಷಕ ಸಮುದಾಯದ ದುರದೃಷ್ಟ.. ಅಂತವರೆಲ್ಲರಿಗೂ ನಮನಗಳನ್ನು ಸಲ್ಲಿಸೋಣ.

ಎಲ್ಲಾ ಗುರುಗಳಿಗೂ ‘ಶಿಕ್ಷಕರ ದಿನಾಚರಣೆ’ ಯ ಶುಭಾಶಯಗಳು

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News