ಕಾಪು: ವ್ಯಕ್ತಿಯೋರ್ವರ ಮೇಲೆ ತಂಡದಿಂದ ಮಾರಣಾಂತಿಕ ಹಲ್ಲೆ; ದೂರು ದಾಖಲು..!!

ಕಾಪು, ಆ.27: ಮಲ್ಲಾರು ಸ್ವಾಗತ್‌ ನಗರ ಜಂಕ್ಷನ್‌ ಬಳಿ ನಿಂತಿದ್ದ ವ್ಯಕ್ತಿಗೆ ಅಪರಾಧ ಪ್ರಕರಣದ ಆರೋಪಿಯೂ ಸೇರಿದಂತೆ ನಾಲ್ಕು ಮಂದಿಯ ತಂಡ ಚೂರಿಯಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಆ. 24ರಂದು ರಾತ್ರಿ ನಡೆದಿದೆ.

ಮಲ್ಲಾರು ನಿವಾಸಿ ಮಹಮ್ಮದ್‌ ನಾಜಿಮ್‌ ಅವರಿಗೆ ಅವರ ಪರಿಚಯದವರಾದ ಉಮ್ಮರ್‌ ಅಬ್ಬಾಸ್‌, ಶಮೀಲ್‌, ನೌಫಿಲ್‌ ಹಾಗೂ ಫಾರಿಸ್‌ ಎಂಬವರು ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.

ಮಹಮ್ಮದ್‌ ನಾಜಿಮ್‌ ಆ. 24ರಂದು ಚಂದ್ರನಗರದಲ್ಲಿರುವ ಪತ್ನಿಯ ಮನೆಗೆ ಹೋಗಿದ್ದು, ಅಲ್ಲಿಂದ ತನ್ನ ಮನೆಗೆ ತೆರಳಲೆಂದು ಮಲ್ಲಾರು ಸ್ವಾಗತ್‌ ನಗರ ಜಂಕ್ಷನ್‌ನಲ್ಲಿ ಕಾಯುತ್ತಿದ್ದ ವೇಳೆ ಕಾರಿನಲ್ಲಿ ಬಂದ ಉಮ್ಮರ್‌ ಅಬ್ಬಾಸ್‌, ಶಮೀಲ್‌, ನೌಫಿಲ್‌ ಹಾಗೂ ಫಾರಿಸ್‌ ಚೂರಿಯಿಂದ ಹಲ್ಲೆ ನಡೆಸಿದ್ದರು.

ಆರೋಪಿ ಉಮ್ಮರ್‌ ಅಬ್ಬಾಸ್‌ 5 ತಿಂಗಳ ಹಿಂದೆ ಶಿರ್ವ ಠಾಣಾ ವ್ಯಾಪ್ತಿಯ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ಜೈಲಿನಲ್ಲಿದ್ದು, ಬಿಡುಗಡೆಗೊಂಡಿದ್ದ. ಆಬಳಿಕ ಆತನನ್ನು ಪೊಲೀಸರು ಹಿಡಿಯಲು ಸಹಾಯ ಮಾಡಿರುವ ಸಂಶಯದಿಂದ ಉಮ್ಮರ್‌ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಹಲ್ಲೆ ನಡೆಸಿದ್ದಾನೆ ಎಂದು ಗಾಯಾಳು ಕಾಪು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪ್ರತಿ ದೂರು
ಇದೇ ವೇಳೆ ಉಮ್ಮರ್‌ ಅಬ್ಬಾಸ್‌ ಕೂಡ ಮಹಮ್ಮದ್‌ ನಾಜೀಮ್‌ ವಿರುದ್ಧ ಪ್ರತಿ ದೂರು ಸಲ್ಲಿಸಿದ್ದಾರೆ. ಸ್ನೇಹಿತರೊಂದಿಗೆ ಕಾರಿನಲ್ಲಿ ಚಂದ್ರನಗರದಿಂದ ಪಕೀರಣಕಟ್ಟೆಯಲ್ಲಿರುವ ಅಕ್ಕನ ಮನೆಗೆ ತೆರಳುತ್ತಿದ್ದ ಉಮ್ಮರ್‌ ಅಬ್ಬಾಸ್‌ ಎಂಬವರಿಗೆ ಕಾರನ್ನು ತಡೆದು ಮಹಮ್ಮದ್‌ ನಾಜೀಮ್‌ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಗಳಿಬ್ಬರ ನಡುವೆ ನಡೆದ ಹಲ್ಲೆ, ಪ್ರತಿ ಹಲ್ಲೆ, ದೂರು-ಪ್ರತಿದೂರನ್ನು ಪಡೆದುಕೊಂಡಿರುವ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

You cannot copy content from Baravanige News

Scroll to Top