ಪ್ರಧಾನಿ ಮೋದಿ ನೋಡಲು ಬ್ಯಾರಿಕೇಡ್ ಹಿಂದೆ ನಿಂತ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಸಚಿವರು; ಕಾಂಗ್ರೆಸ್ ಅಪಹಾಸ್ಯ!

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದ್ದರು. ಗ್ರೀಸ್ನಿಂದ ನೇರವಾಗಿ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಪ್ರಧಾನಿ, ರಸ್ತೆ ಮಾರ್ಗದ ಮೂಲಕ ಪೀಣ್ಯ ಬಳಿಯಿರುವ ಇಸ್ರೋಗೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಮೋದಿಯನ್ನು ಸ್ವಾಗತಿಸಲು ರಸ್ತೆ ಬದಿಯಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ನಿಂತಿದ್ದರು. ರಸ್ತೆಯ ಬ್ಯಾರಿಕೇಡ್ ಹಿಂದೆ ನಾಯಕರು ನಿಂತಿರೋ ಫೋಟೋ ಹಾಗೂ ವೀಡಿಯೋಗಳು ವೈರಲ್ ಆಗುತ್ತಿದ್ದಂತೆಯೇ, ಬಿಜೆಪಿಯನ್ನು ಕಾಂಗ್ರೆಸ್ ನಾಯಕರು ಗೇಲಿ ಮಾಡಿದ್ದಾರೆ.

ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ, ಮಾಜಿ ಎಂಎಲ್‌ಸಿ ರಮೇಶ್ ಬಾಬು ಟ್ವೀಟ್ ಮಾಡಿ, ಇಂಥ ದುರಂತವನ್ನು ನೀವು ಸರ್ವಾಧಿಕಾರಿ ಆಡಳಿತದಲ್ಲಿ ಮಾತ್ರ ನೋಡಲು ಸಾಧ್ಯ. ಮೋದಿ ಭೇಟಿ ವೇಳೆ ರಾಜ್ಯ ಬಿಜೆಪಿ ನಾಯಕರನ್ನು ನಾಯಿಗಿಂತ ಕಡೆಯಾಗಿ ನೋಡಲಾಗಿದೆ. ಬಿಜೆಪಿ ಆರ್ಎಸ್ಎಸ್ನಲ್ಲಿ ಆತ್ಮಾಭಿಮಾನ ಸಂಸ್ಕೃತಿ ಕಳೆದು ಹೋಗಿದೆ, ಜೈ ಮೋದಿ ಎಂದು ಅಪಹಾಸ್ಯ ಮಾಡಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿ, ಬಿಜೆಪಿ ನಾಯಕರದ್ದು ಎಂತಹ ದುಸ್ಥಿತಿ.. ರಾಜ್ಯ ಬಿಜೆಪಿಯ ‘ದಂಡ’ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲಾಗಿದ್ದಾರೆ! ಬಿಜೆಪಿಯ ಹೈಕಮಾಂಡ್ ಹಾಗೂ ಮೋದಿ ಹೀನಾಯ ಸೋಲಿನ ಬಳಿಕ ರಾಜ್ಯದ ನಾಯಕರನ್ನು ಹತ್ತಿರಕ್ಕೂ ಸೇರಿಸದೇ ಬೀದಿ ಪಾಲು ಮಾಡಿದ್ದಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ! ಛೇ, ಮಿನಿಮಮ್ ಮರ್ಯಾದೆಯೂ ಇಲ್ಲದಾಯಿತೇ? ಎಂದು ಟ್ವಿಟ್ ಮಾಡಿದೆ.

You cannot copy content from Baravanige News

Scroll to Top