Sunday, May 26, 2024
Homeಸುದ್ದಿಕರಾವಳಿ'ಮಲ್ಪೆ ಬೀಚ್‌ಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಹೆಚ್ಚು ಒತ್ತು ನೀಡಿ' - ಡಿಸಿ ವಿದ್ಯಾಕುಮಾರಿ

‘ಮಲ್ಪೆ ಬೀಚ್‌ಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಹೆಚ್ಚು ಒತ್ತು ನೀಡಿ’ – ಡಿಸಿ ವಿದ್ಯಾಕುಮಾರಿ

ಉಡುಪಿ : ಮಲ್ಪೆ ಕಡಲ ತೀರಕ್ಕೆ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದು, ಅವರುಗಳ ಸುರಕ್ಷತೆಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.


ಅವರು ಇಂದು ನಗರದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಲ್ಪೆ ಬೀಚ್‌ಗೆ ವಾರಾಂತ್ಯದಲ್ಲಿ ಹೆಚ್ಚು ಜನರು ಆಗಮಿಸುತ್ತಿರುವ ಹಿನ್ನೆಲೆ, ಜನಸಂದಣಿ ಉಂಟಾಗುತ್ತಿದೆ. ಪಾರ್ಕಿಂಗ್ ವ್ಯವಸ್ಥೆಗೆ ಸಹ ತೊಂದರೆಯಾಗುತ್ತಿರುವ ಹಿನ್ನೆಲೆ, ಪಡುಕೆರೆ ಕಡಲ ತೀರವನ್ನು ಅಭಿವೃದ್ಧಿಪಡಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಲ್ಲಿ, ಪ್ರವಾಸಿಗರು ಜನದಟ್ಟಣೆಯನ್ನು ಕಡಿಮೆ ಮಾಡಲು ಸಾಧ್ಯವಾಗಲಿದ್ದು, ಇದಕ್ಕೆ ಒತ್ತು ನೀಡಬೇಕು ಎಂದರು.

ಬೀಚ್ ನಲ್ಲಿ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ವಾಹನ ಪಾರ್ಕಿಂಗ್ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕು. ಅಪಘಾತಗಳು ಸಂಭವಿಸಿದ್ದಲ್ಲಿ ಚಿಕಿತ್ಸೆ ನೀಡಲು ಅಲ್ಲಿನ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ, ಎಲ್ಲಾ ರೀತಿಯ ಔಷಧ ಹಾಗೂ ವೈದ್ಯಕೀಯ ಉಪಕರಣಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದರು.

ಮಲ್ಪೆ ಬೀಚ್ ಪ್ರದೇಶದಲ್ಲಿರುವ ಹೈಮಾಸ್ಟ್ ಕಂಬಗಳಿಗೆ ದೀಪ ಅಳವಡಿಸುವಂತೆ ಹಾಗೂ ಬೀಚ್‌ನ ಉತ್ತರ ಭಾಗದಲ್ಲಿ ಹೊಸದಾಗಿ ಹೈಮಾಸ್ಟ್ ಕಂಬಗಳನ್ನು ಹಾಗೂ ದಾರಿದೀಪವನ್ನು ಅಳವಡಿಸಲು ಯೋಜನೆಯನ್ನು ಸಿದ್ಧಪಡಿಸುವಂತೆ ತಿಳಿಸಿದರು.

ಮಲ್ಪೆ ಬೀಚ್, ಸೀವಾಕ್, ಸೈಂಟ್ ಮೇರೀಸ್ ದ್ವೀಪಗಳಿಗೆ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದು ಹಾಗೂ ಇಲ್ಲಿನ ಮೀನುಗಾರಿಕಾ ಚಟುವಟಿಕೆಗಳಿಂದಾಗಿ ಕಲ್ಮಾಡಿ ಭಾಗದಲ್ಲಿ ಹೆಚ್ಚು ಟ್ರಾಫಿಕ್ ಸಮಸ್ಯೆಗಳುಂಟಾಗುತ್ತಿದ್ದು, ಇದರ ನಿರ್ವಹಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಮಲ್ಪೆ ಸೀವಾಕ್ ಹಾಗೂ ಬೀಚ್‌ನಿಂದ ಸೈಂಟ್ ಮೇರೀಸ್ ದ್ವೀಪಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಪ್ರವಾಸೀ ಬೋಟುಗಳು, ಸಾಮರ್ಥ್ಯಕ್ಕೆ ಅನುಸಾರವಾಗಿ ನಿಗಧಿತ ಜನಕ್ಕಿಂತ ಹೆಚ್ಚಿನ ಜನರನ್ನು ಕೊಂಡೊಯ್ಯಬಾರದು. ಎಲ್ಲಾ ಪ್ರಯಾಣಿಕರು ಲೈಫ್ ಜಾಕೆಟ್‌ಅನ್ನು ಕಡ್ಡಾಯವಾಗಿ ಧರಿಸುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ನಿರ್ಲಕ್ಷ್ಯ ಕಂಡುಬಂದಲ್ಲಿ ಆ ಬೋಟಿನ ಪರವಾನಿಗೆಯನ್ನು ರದ್ದುಪಡಿಸುವುದರ ಜೊತೆಗೆ, ಷರತ್ತು ಉಲ್ಲಂಘಿಸುವ ಬೋಟಿನ ಮಾಲೀಕರಿಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರವಾಸಿಗರ ಸುರಕ್ಷತೆ ಹಾಗೂ ಭದ್ರತೆಯ ದೃಷ್ಠಿಯಿಂದ ಸೈಂಟ್ ಮೇರೀಸ್ ದ್ವೀಪಕ್ಕೆ ಬೋಟ್‌ಗಳಲ್ಲಿ ತೆರಳುವ ಪ್ರಯಾಣಿಕರ ಬ್ಯಾಗ್ ಹಾಗೂ ಲಗೇಜ್‌ಗಳನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸುವಂತೆ ಮತ್ತು ಮಲ್ಪೆ ಬೀಚ್, ಸೈಂಟ್ ಮೇರೀಸ್ ದ್ವೀಪದಲ್ಲಿ ನಿಯೋಜನೆಗೊಂಡ ಟೂರಿಸ್ಟ್ ಗೈಡ್‌ಗಳಿಗೆ ಇಲಾಖೆಯ ವತಿಯಿಂದ ಸೂಕ್ತ ತರಬೇತಿ ನೀಡುವಂತೆ ಹಾಗೂ ಪ್ರವಾಸಿಗರ ಸುರಕ್ಷತೆಗೆ ಬೀಚ್ ನಿರ್ವಹಣಾದಾರರು ನಿಯೋಜಿಸಲ್ಪಟ್ಟ ಜೀವರಕ್ಷಕ ಸಿಬ್ಬಂದಿಗಳಿಗೆ ಸುರಕ್ಷತೆ ನಿರ್ವಹಿಸುವ ಕುರಿತು ಹೆಚ್ಚಿನ ತರಬೇತಿ ನೀಡುವಂತೆ ಸೂಚಿಸಿದರು.

ಬೀಚ್‌ನ ಸಮೀಪದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚುವರಿ ಗೂಡಂಗಡಿಗಳ ಕುರಿತು ಪೊಲೀಸ್ ಇಲಾಖೆ, ನಗರಸಭೆ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ತಪಾಸಣೆ ನಡೆಸಿ, ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಮಲ್ಪೆ ಬೀಚ್ ಉತ್ತರ ಭಾಗದಲ್ಲಿನ ಖಾಲಿ ಜಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹಾಗೂ ಪ್ರವಾಸಿಗರ ವಾಹನಗಳ ಪಾರ್ಕಿಂಗ್ ಮಾಡಲು ಅನುಕೂಲವಾಗುವಂತೆ ಬೀಚ್ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಮಾಸ್ಟರ್ ಪ್ಲಾನ್ ಅನ್ನು ರೂಪಿಸಿ, ಅದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್, ಪೌರಾಯುಕ್ತ ರಾಯಪ್ಪ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಮಲ್ಪೆ ಭಾಗದ ನಗರಸಭಾ ಸದಸ್ಯರು, ಭಜನಾ ಮಂಡಳಿಗಳ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News