Wednesday, May 15, 2024
Homeಸುದ್ದಿಹೃದಯಾಘಾತದಿಂದ ಪಾರು ಮಾಡಲು ಸರ್ಕಾರದಿಂದ ಹೊಸ ಯೋಜನೆ "ಅಪ್ಪು"

ಹೃದಯಾಘಾತದಿಂದ ಪಾರು ಮಾಡಲು ಸರ್ಕಾರದಿಂದ ಹೊಸ ಯೋಜನೆ “ಅಪ್ಪು”

ಬೆಂಗಳೂರು, ಆ.21: ತೀವ್ರ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪುತ್ತಿರುವ ಪ್ರಕರಣಗಳನ್ನು ತಡೆಗಟ್ಟಲು ಮತ್ತು ಹೃದ್ರೋಗದಿಂದ ಅಕಾಲಿಕವಾಗಿ ಮೃತಪಡುತ್ತಿರುವ ಹದಿಹರೆಯದವರನ್ನು ಸಾವಿನ ದವಡೆಯಿಂದ ಪಾರು ಮಾಡಲು ಸರ್ಕಾರ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಹೆಸರಲ್ಲಿ “ಅಪ್ಪು” ಎಂಬ ನೂತನ ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿದೆ.

ಗಾಂಧಿನಗರದಲ್ಲಿ ಭಾನುವಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು, ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಮತ್ತು ಹೃದಯಸ್ತಂಭನದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕ ತಂದಿದೆ. ಅದರಲ್ಲೂ ಯಮಸ್ವರೂಪಿಯಾದ ಹೃದಯಾಘಾತ ಯವಕ- ಯುವತಿಯರನ್ನೇ ಹೆಚ್ಚಾಗಿ ಬಲಿ ತೆಗೆದುಕೊಳ್ಳುತ್ತಿದೆ. ಇದಕ್ಕೆ ನಟ ಡಾ.ಪುನೀತ್ ರಾಜ್ ಕುಮಾರ್ ಅವರಿಂದ ಹಿಡಿದು ತೀರ ಇತ್ತೀಚಿಗೆ ವಿಧಿವಶರಾದ ನಟ ವಿಜಯರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನಾ ಅವರವರೆಗೆ ಹೆಸರಿಸಬಹುದು ಎಂದರು.

ಏನಿದು ಅಪ್ಪು ಯೋಜನೆ?

ಹೃದಯಾಘಾತಕ್ಕೊಳಗಾದ ಸಂದರ್ಭದಲ್ಲಿ ತಕ್ಷಣ ಚಿಕಿತ್ಸೆ ನೀಡುವ ಅತ್ಯಾಧುನಿಕ ತಂತ್ರಜ್ಞಾನ ಉಳ್ಳ ಆರೋಗ್ಯ ಸೌಲಭ್ಯ ಇದಾಗಿದ್ದು, ಎಇಡಿ ಚಿಕಿತ್ಸೆ ಎಂದೇ ಕರೆಯಲಾಗುತ್ತೆ. “ಆಟೋಮೇಟೆಡ್ ಎಕ್ಸ್ ಟರ್ನಲ್ ಡಿಫಿಬ್ರಿಲೇಟರ್” AED ಎಂಬ ತಕ್ಷಣದ ಚಿಕಿತ್ಸೆ ಮೂಲಕ ಹೃದಯಸ್ತಂಭನ ಅಥವಾ ಹೃದಯಾಘಾತಕ್ಕೊಳಗಾದವರನ್ನು ಮೃತ್ಯುವಿನಿಂದ ರಕ್ಷಿಸಿ ಜೀವ ಉಳಿಸಬಹುದಾಗಿದೆ. ಹೃದಯಾಘಾತಕ್ಕೊಳಗಾದ ಸಂದರ್ಭದಲ್ಲಿ “ಗೋಲ್ಡನ್ ಅವರ್” ಎಂದೇ ಕರೆಯಲಾಗುವ ಆ ಸಮಯದಲ್ಲಿ AED ನೆರವಿನಿಂದ ವ್ಯಕ್ತಿಯ ಅಮೂಲ್ಯ ಜೀವ ಉಳಿಸಬಹುದಾಗಿದೆ. ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರೂ ಕೂಡ ಹೃದಯ ಸ್ತಂಭಕ್ಕೊಳಗಾದಾಗ ಅವರನ್ನು‌ ಉಳಿಸಿಕೊಳ್ಳಲಾಗಲಿಲ್ಲ. ಅವರ ಸ್ಮರಣಾರ್ಥ ಸರ್ಕಾರ ಇದೀಗ “ಅಪ್ಪು” ಯೋಜನೆಯನ್ನು ಎಲ್ಲೆಡೆ ಜಾರಿಗೆ ತರಲು ಮುಂದಾಗಿರೋದು ಸ್ವಾಗತಾರ್ಹ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News