Monday, April 22, 2024
Homeಸುದ್ದಿಆರ್ಥಿಕ ಸಂಕಷ್ಟದಲ್ಲಿ ಕೇರಳ ಸರ್ಕಾರ; ಈ ಬಾರಿ ಓಣಂ ಹಬ್ಬಕ್ಕಿಲ್ಲ ಜನರಿಗೆ ಕಿಟ್

ಆರ್ಥಿಕ ಸಂಕಷ್ಟದಲ್ಲಿ ಕೇರಳ ಸರ್ಕಾರ; ಈ ಬಾರಿ ಓಣಂ ಹಬ್ಬಕ್ಕಿಲ್ಲ ಜನರಿಗೆ ಕಿಟ್

ತಿರುವನಂತಪುರಂ : ಗ್ಯಾರಂಟಿಗಳ ಜಾರಿಯಿಂದ ಕರ್ನಾಟಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಆದ್ರೆ, ಸರ್ಕಾರ ಮಾತ್ರ ಇದನ್ನ ಒಪ್ಪಿರಲಿಲ್ಲ. ಆದ್ರೀಗ ಉಚಿತ ಉಡುಗೊರೆ ನೀಡುತ್ತಾ ಕೇರಳ ಸರ್ಕಾರದ ಖಜಾನೆ ಬರಿದಾಗಿದೆ. ಓಣಂ ಕೇರಳದಲ್ಲಿ ಶ್ರಾವಣ ಮಾಸದ ಆರಂಭದಲ್ಲಿ ಆಚರಿಸೋ ಹಬ್ಬ. ಅತ್ಯಂತ ಪುರಾತನ ಕಾಲದಿಂದಲೂ ಕೇರಳಿಗರು ಸಂಭ್ರಮಿಸೋ ಫೆಸ್ಟಿವಲ್‌. ಆಗಸ್ಟ್‌ 20 ರಿಂದ 10 ದಿನಗಳ ಕಾಲ ರಾಜ್ಯದೆಲ್ಲೆಡೆ ಓಣಂ ಆಚರಣೆ ಮಾಡಲಾಗುತ್ತೆ. ಆದರೆ ಓಣಂ ಆಚರಣೆಯ ಹೊತ್ತಲ್ಲಿ ಕೇರಳದ ಜನರಿಗೆ ಆರ್ಥಿಕ ಸಂಕಷ್ಟದ ಬರೆ ಬಿದ್ದಿದೆ. ಸರ್ಕಾರದ ಖಜಾನೆ ಖಾಲಿಯಾಗಿ ಇದರ ಎಫೆಕ್ಟ್‌ ಜನಸಾಮಾನ್ಯರಿಗೂ ತಟ್ಟಿದೆ.

ಕೇರಳದ ಕಮ್ಯೂನಿಸ್ಟ್ ಸರ್ಕಾರದ ಖಜಾನೆ ಖಾಲಿ.. ಖಾಲಿ ರಾಜ್ಯದ ಜನರಿಗೆ ಓಣಂ ಹಬ್ಬಕ್ಕೆ ಕಿಟ್‌ ಸಿಗೋದು ಡೌಟ್‌.

ಕೇರಳದಲ್ಲಿ ಕಮ್ಯೂನಿಸ್ಟ್ ಸರ್ಕಾರ ಆಡಳಿತದಲ್ಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಸರ್ಕಾರ ಮುನ್ನಡೆಯುತ್ತಿದೆ. ಆದ್ರೆ, ಸಿಪಿಎಂ ಸರ್ಕಾರ ಓಣಂ ಹಬ್ಬದ ಹೊತ್ತಲ್ಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದ್ರಿಂದ ಪ್ರಸಿದ್ಧ ಓಣಂ ಆಚರಣೆಗೆ ಸರ್ಕಾರದಿಂದ ಕಿಟ್‌ ಕೊಡೋದು ವಿಳಂಬವಾಗುವ ಸಾಧ್ಯತೆ ಇದೆ. ಜೊತೆಗೆ ಕಿಟ್ ಕೊಡೋದೆ ಇಲ್ಲ ಎಂಬ ಅನುಮಾನವೂ ದಟ್ಟವಾಗಿದೆ.

ಓಣಂ ಹಬ್ಬದ ವೇಳೆ ಕೇರಳ ಸರ್ಕಾರ ಮನೆ ಮನೆಗೂ ಫುಡ್ ಕಿಟ್ ನೀಡುತ್ತೆ. ಈ ವರ್ಷ ಓಣಂ ಕಿಟ್ ನೀಡಲು ಸರ್ಕಾರಕ್ಕೆ 8 ಸಾವಿರ ಕೋಟಿ ಬೇಕು. ಆದರೆ, ಈಗ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲದೇ ಕೇಂದ್ರ ಸರ್ಕಾರದ ಮೊರೆ ಹೋಗಿದೆ. ಇನ್ನೂ ಇದೇ ಓಣಂ ಹಬ್ಬದ ವೇಳೆ ಕೇಂದ್ರ ಸರ್ಕಾರಕ್ಕೆ ಕೇರಳ ಸರ್ಕಾರ 15 ಸಾವಿರ ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡಬೇಕು. ಆದರೆ ಇದೀಗ, ಇದನ್ನೂ ಮರುಪಾವತಿ ಮಾಡದೇ ಓವರ್ ಡ್ರಾಫ್ಟ್‌ನಲ್ಲಿ 2 ಸಾವಿರ ಕೋಟಿ ರೂಪಾಯಿ ಸಾಲವನ್ನ ಕೇಳಿದೆ ಎಂದು ತಿಳಿದುಬಂದಿದೆ. ಮನಬಂದಂತೆ ಸಾಲ ಪಡೆಯಲು ಕೇಂದ್ರ ಸರ್ಕಾರದ ನಿರ್ಬಂಧಗಳು ಇವೆ. ಹೀಗಾಗಿ ಕೇರಳ ಸರ್ಕಾರಕ್ಕೆ ಹೆಚ್ಚಿನ ಸಾಲ ಪಡೆಯಲು ಕೂಡಾ ಸಾಧ್ಯವಾಗುತ್ತಿಲ್ಲ ಎನ್ನಲಾಗ್ತಿದೆ. ಹೀಗಾಗಿ ಓಣಂ ಹಬ್ಬದ ವೇಳೆ ಓಣಂ ಕಿಟ್ ನೀಡೋದು ಅನುಮಾನ ಎಂಬ ಮಾಹಿತಿ ಲಭ್ಯವಾಗಿದೆ. ಕೇರಳದಲ್ಲಿ ಆದಾಯ ಮತ್ತು ಖರ್ಚಿನಲ್ಲಿ ಭಾರೀ ವ್ಯತ್ಯಾಸ ಉಂಟಾಗಿದೆ. ಹೀಗಾಗಿ ಓಣಂ ಹೊತ್ತಲ್ಲಿ ಕೇರಳ ಸರ್ಕಾರಿ ನೌಕರರು, ರೈತರು, ವಯೋವೃದ್ಧರು ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಕೌಂಟೆಂಟ್ ಜನರಲ್ ವರದಿ ಪ್ರಕಾರ, ಕೇರಳದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಆದಾಯ-ಖರ್ಚಿನ ನಡುವೆ 9 ಸಾವಿರದ 334 ಕೋಟಿ ರೂಪಾಯಿ ಅಂತರ ಕಂಡುಬಂದಿದೆ. ಹೀಗಾಗಿ 6 ಸಾವಿರ ಮಂದಿ ಎಂಡೋಸಲ್ಪಾನ್ ಸಂತ್ರಸ್ತರಿಗೂ ಮಾಶಾಸನ ನೀಡಲು ಸಾಧ್ಯವಾಗುತ್ತಿಲ್ಲ. ರೈತರು, ಮಧ್ಯಾಹ್ನ ಬಿಸಿಯೂಟ ನೌಕರರಿಗೂ ವೇತನ ನೀಡಲಾಗ್ತಿಲ್ಲ. ರೈತರಿಂದ ಖರೀದಿಸಿದ ಆಹಾರ ಧಾನ್ಯಗಳಿಗೂ ಹಣ ಪಾವತಿಸದೇ ಸುಮಾರು 54 ಸಾವಿರ ರೈತರಿಗೆ 433 ಕೋಟಿ ರೂಪಾಯಿ ಹಣ ನೀಡೋದು ಬಾಕಿ ಉಳಿದಿದೆ. ಇನ್ನೂ ಕರ್ನಾಟಕದಂತೆ ಕೇರಳದಲ್ಲೂ ಗುತ್ತಿಗೆದಾರರಿಗೆ ಹಣ ಪಾವತಿ ಬಾಕಿ ಉಳಿದುಬಿಟ್ಟಿದೆ.

ಇನ್ನೂ, 50 ಲಕ್ಷ ಪಿಂಚಣಿದಾರರಿಗೂ ಪೆನ್ಷನ್ ಹಣವನ್ನೂ ಸರ್ಕಾರ ನೀಡಿಲ್ಲ. ಒಟ್ಟಾರೆ, ಉಚಿತ ಭಾಗ್ಯಗಳನ್ನ ಬೆನ್ನ ಹಿಂದೆ ಹೊತ್ತುಕೊಂಡು ಕೇರಳ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ಇತ್ತ ಹಣವನ್ನೂ ಹೊಂದಿಸಲಾಗದೇ ಸಾಲವೂ ಸಿಗದೇ ಟೀಕೆಗೆ ಗುರಿಯಾಗಿದೆ. ಸದ್ಯ ಗ್ಯಾರಂಟಿಗಳ ಗುಂಗಲ್ಲಿರೋ ಕರ್ನಾಟಕದಲ್ಲಿ ಈ ಪರಿಸ್ಥಿತಿ ಎದುರಾದ್ರೆ ಹೇಗೆ ಅನ್ನೋದೆ ಮುಂದಿರೋ ಆತಂಕ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News