Saturday, July 20, 2024
Homeಸುದ್ದಿಕರಾವಳಿಯಲ್ಲಿ ಈರುಳ್ಳಿ ಬೆಲೆ ದಿಢೀರ್ ಏರಿಕೆ

ಕರಾವಳಿಯಲ್ಲಿ ಈರುಳ್ಳಿ ಬೆಲೆ ದಿಢೀರ್ ಏರಿಕೆ

ಕೆಂಪು ಸುಂದರಿ ಟೊಮೆಟೊ ದರ ಕ್ರಮೇಣ ಕಡಿಮೆಯಾಗುವ ಲಕ್ಷಣಗಳ ನಡುವೆ ಇದೀಗ ಈರುಳ್ಳಿ ದರ ದಿಢೀರ್ ಏರಿಕೆಯಾಗಿದೆ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈರುಳ್ಳಿ ಬೆಲೆ ಗಣನೀಯವಾಗಿ ಹೆಚ್ಚಳವಾಗಿದೆ. ದೇಶದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಮಹಾರಾಷ್ಟ್ರದಿಂದ ಪೂರೈಕೆ ಕಳೆದ ಎರಡು ವಾರಗಳಿಂದ ಕಡಿಮೆಯಾಗಿದೆ. ಹೀಗಾಗಿ ಈರುಳ್ಳಿ ಬೆಲೆ ಏರುಗತಿಯಲ್ಲಿ ಸಾಗಿದೆ ಎನ್ನಲಾಗುತ್ತಿದೆ.

ಮಹಾರಾಷ್ಟ್ರದ ನಾಸಿಕ್‌ನ ಲಾಸಲ್‌ಗಾಂವ್‌ನ ಎಪಿಎಂಸಿಯ ತರಕಾರಿಯ ಅತಿದೊಡ್ಡ ಸಗಟು ಮಾರುಕಟ್ಟೆಯಲ್ಲಿ ಆಗಸ್ಟ್ 4 ರಂದು ಈರುಳ್ಳಿ ಬೆಲೆ ಕ್ವಿಂಟಾಲ್‌ಗೆ 1550 ರೂ.ಗಳಿಂದ 2300 ರೂ. ವರೆಗೆ ಏರಿಕೆಯಾಗಿತ್ತು. ಇದು ಕಳೆದ ಎಂಟು ತಿಂಗಳಲ್ಲೇ ದಾಖಲಾದ ಗರಿಷ್ಠ ಬೆಲೆಯಾಗಿದೆ.

ಮಂಗಳೂರಿನಲ್ಲಿ ಕಳೆದ ಎರಡು ವಾರಗಳಿಂದ ಈರುಳ್ಳಿ ಬೆಲೆ ನಿರಂತರವಾಗಿ ಏರಿಕೆಯಾಗಿದೆ. ಕಳೆದ ವಾರ ಕ್ವಿಂಟಲ್‌ಗೆ 2000 ರೂ.ಗೆ ತಲುಪಿತ್ತು. ಇದೀಗ 2900 ರೂ. ದಾಟಿದೆ. ಕಳೆದ ವಾರ 26 ರೂ.ಗೆ ಮಾರಾಟವಾಗುತ್ತಿದ್ದ ಒಂದು ಕಿಲೋ ಈರುಳ್ಳಿ ಇದೀಗ 34 ರಿಂದ 35 ರೂ.ಗೆ ಮಾರಾಟವಾಗುತ್ತಿದೆ.

ಸದ್ಯ ನಾಸಿಕ್‌ನ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ಕಾರಣ, ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ. ಇದು ಬೆಲೆ ಏರಿಕೆಗೆ ಕಾರಣವಾಗಿದೆ. ಈ ಹಿಂದೆ ನಾಸಿಕ್ ಮಾರುಕಟ್ಟೆಯಿಂದ 25 ಸಾವಿರದಿಂದ 30 ಸಾವಿರ ಕ್ವಿಂಟಾಲ್ ಈರುಳ್ಳಿ ಪೂರೈಕೆಯಾಗುತ್ತಿತ್ತು. ಈಗ ಅದು 10,000 ಕ್ವಿಂಟಾಲ್‌ಗೆ ಇಳಿಕೆಯಾಗಿದೆ.

ಹಾಲಿ ಲಭ್ಯವಿರುವ ಪೂರೈಕೆಗೆ ಹೋಲಿಸಿದರೆ ಸ್ಥಳೀಯ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಬೇಡಿಕೆ ಹೆಚ್ಚಿದೆ. ಮಳೆಯಿಂದಾಗಿ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಈರುಳ್ಳಿ ಕೊಯ್ಲು ಒಂದು ತಿಂಗಳು ವಿಳಂಬವಾಗಿದೆ. ಮಹಾರಾಷ್ಟ್ರದ ಅಹಮದ್ ನಗರದಲ್ಲಿಯೂ ಪೂರೈಕೆ ಕಡಿಮೆಯಾಗಿದೆ. ಬಾಂಗ್ಲಾದೇಶದಿಂದ ಈರುಳ್ಳಿಗೆ ಹೆಚ್ಚಿನ ಬೇಡಿಕೆ ಇದೆ, ಇದರ ಪರಿಣಾಮವಾಗಿ ಈರುಳ್ಳಿ ಬೆಲೆ ಏರುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News