ಹ್ಯಾಕರ್ ಗಳ ಬಲೆಗೆ ಸಿಲುಕಿ ಸೌದಿ ಜೈಲು ಪಾಲಾದ ಕಡಬದ ಯುವಕ : ನ್ಯಾಯ ಒದಗಿಸಲು ಕುಟುಂಬಸ್ಥರ ಒತ್ತಾಯ

ಮಂಗಳೂರು : ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಯುವಕನೊಬ್ಬ ಹ್ಯಾಕರ್‌ ಗಳ ಬಲೆಗೆ ಸಿಲುಕಿ ಸೌದಿ ಜೈಲು ಪಾಲಾಗಿದ್ದಾನೆ ಎಂದು ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ ಗೌಡ ಕೆ. ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಳಿಕ ಮಾತನಾಡಿದ ಅವರು ಕಡಬ ತಾಲೂಕಿನ ಐತೂರು ಗ್ರಾಮದ ದಿ. ಕೆಂಚಪ್ಪ ಗೌಡ ಮತ್ತು ಹೇಮಾವತಿ ದಂಪತಿಯ ಪುತ್ರ ಚಂದ್ರಶೇಖರ್‌ ಕಳೆದ 8 ತಿಂಗಳುಗಳಿಂದ ರಿಯಾದ್‌ ನಲ್ಲಿ ಜೈಲಿನಲ್ಲಿರುವ ಯುವಕನಾಗಿದ್ದಾನೆ.

8 ವಷರ್ಗಳ ಹಿಂದೆ ಬೆಂಗಳೂರಿನ ಅಲ್ಪಾನರ್‌ ಸೆರಾಮಿಕ್ಸ್‌ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಚಂದ್ರ ಶೇಖರ್‌ ಅವರಿಗೆ ಕಂಪೆನಿ ಬಡ್ತಿ ನೀಡಿ ಸೌದಿಯ ರಿಯಾದ್‌ ನಲ್ಲಿರುವ ಶಾಖೆಗೆ ಕಳುಹಿಸಿತ್ತು.

2022 ನವೆಂಬರ್‌ ನಲ್ಲಿ ಅವರು ರಿಯಾದ್‌ ನ ಅಂಗಡಿಯೊಂದಕ್ಕೆ ತೆರಳಿ ಮೊಬೈಲ್‌ ಸಿಮ್‌ ಖರೀದಿಸಿದ್ದು, ಈ ಸಂದರ್ಭದಲ್ಲಿ ಅಂಗಡಿಯವರು ಎರಡು ಬಾರಿ ತಂಬ್‌ ಪಡೆದಿದ್ದರು.

ತಂಬ್‌ ಇದೀಗ ಅವರಿಗೆ ಉರುಳಾಗಿ ಪರಿಣಮಿಸಿದೆ. ಚಂದ್ರಶೇಖರ್‌ ಅವರಿಗೆ ತಿಳಿಯದಂತೆ ಅಲ್ಲಿನ ಬ್ಯಾಂಕ್‌ ಒಂದರಲ್ಲಿ ಖಾತೆ ತೆರೆಯಲಾಗಿದ್ದು, ಸೌದಿಯ ಮಹಿಳೆಯೊಬ್ಬರ 22 ಸಾವಿರ ರಿಯಾಲ್‌ ಈ ಖಾತೆಗೆ ಜಮೆಯಾಗಿ ಕೂಡಲೇ ಅದರಿಂದ ಬೇರೆ ಯಾವುದೋ ದೇಶಕ್ಕೆ ವರ್ಗಾವಣೆಯಾಗಿದೆ.

ಹಣ ಕಳೆದುಕೊಂಡ ಮಹಿಳೆ ಈ ಬಗ್ಗೆ ಚಂದ್ರಶೇಖರ್‌ ವಿರುದ್ಧ ದೂರು ಸಲ್ಲಿಸಿದ್ದರಿಂದ ಚಂದ್ರಶೇಖರ್‌ ಅವರನ್ನು ಜೈಲಿನಲ್ಲಿ ಇರಿಸಲಾಗಿದೆ.

ಬ್ಯಾಂಕ್‌ ಖಾತೆ ತೆರೆದವರು ಯಾರು ಮತ್ತು ಖಾತೆಯಿಂದ ಹಣ ಎಲ್ಲಿಗೆ ವರ್ಗಾವಣೆಯಾಗಿದೆ ಎಂಬುದರ ತನಿಖೆ ನಡೆಸುವ ಬದಲು ಚಂದ್ರಶೇಖರ್‌ ಅವರನ್ನು ಜೈಲಿನಲ್ಲಿರಿಸಿದ್ದು ಸರಿಯಲ್ಲ.

ಇದು ಅನ್ಯಾಯ. ಅವರನ್ನು ಜೈಲಿನಿಂದ ಬಿಡುಗಡೆ ಮಾಡುವ ಬಗ್ಗೆ ಕೇಂದ್ರ ಸರಕಾರದ ಮೇಲೆ ಒತ್ತಡ ತರ ಬೇಕಾಗಿದೆ.

ಚಂದ್ರಶೇಖರ್‌ ಗೆ ನ್ಯಾಯ ದೊರಕಿಸಿ ಕೊಡಲು ಕುಟುಂಬಸ್ಥರು ಸರಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನ ಪ್ರತಿನಿಧಿಗಳು, ಸಂಘ ಸಂಸ್ಥೆಗಳು ಸಹಕಾರ ನೀಡ ಬೇಕೆಂದು ಮನವಿ ಮಾಡಿದರು.

You cannot copy content from Baravanige News

Scroll to Top