Saturday, July 27, 2024
Homeಸುದ್ದಿಕರಾವಳಿಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಕೇಸ್ : ಮೊದಲ ಹಂತದ ತನಿಖೆ ಅಂತ್ಯ, ಆ ಒಂದು...

ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಕೇಸ್ : ಮೊದಲ ಹಂತದ ತನಿಖೆ ಅಂತ್ಯ, ಆ ಒಂದು ವರದಿಗೆ ಕಾಯುತ್ತಿರುವ ಸಿಐಡಿ

ಉಡುಪಿ : ನೇತ್ರ ಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜು ವಿಡಿಯೋ ಚಿತ್ರೀಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ತಂಡದ ಮೊದಲನೇ ಹಂತದ ತನಿಖೆ ಮುಗಿದಿದೆ. ಕಳೆದ ಒಂದು ವಾರದಿಂದ ಉಡುಪಿಯಲ್ಲಿ ಬೀಡು ಬಿಟ್ಟಿದ್ದ ಸಿಐಡಿ ತಂಡ ಪ್ರಕರಣಕ್ಕೆ ಸಂಬಂಧಪಟ್ಟ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿ ಬೆಂಗಳೂರಿಗೆ ತೆರಳಿದೆ.

ಉಡುಪಿಯ ಕಾಲೇಜಿನಲ್ಲಿ ಜುಲೈ 18ರಂದು ನಡೆದ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಸಿಐಡಿ ತನಿಖೆ ಪ್ರಗತಿಯಲ್ಲಿದೆ. ಈ ಮೊದಲು ಮಲ್ಪೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಪೊಲೀಸ್ ತನಿಖೆ ವಿಚಾರವಾಗಿ ಒಂದಿಷ್ಟು ಅಪಸ್ವರಗಳು ಬಂದ ಹಿನ್ನೆಲೆಯಲ್ಲಿ ತನಿಕಾ ಅಧಿಕಾರಿಗಳನ್ನು ಬದಲಾಯಿಸಲಾಗಿತ್ತು. ಆದರೂ ಪೊಲೀಸ್ ತನಿಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹಿಂದೂ ಸಂಘಟನೆ ಮತ್ತು ಬಿಜೆಪಿ ಮುಖಂಡರುಗಳು ವಿಶೇಷ ಎಸ್ಐಟಿ ತಂಡ ರಚಿಸಿ ತನಿಖೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿತ್ತು. ಆದರೆ ರಾಜ್ಯ ಸರ್ಕಾರ ಸಿಐಡಿ ಗೆ ಪ್ರಕರಣವನ್ನ ಹಸ್ತಾಂತರಿಸಿದ್ದು ಸದ್ಯ ತನಿಖೆ ಪ್ರಗತಿಯಲ್ಲಿದೆ.

ಕಳೆದ ಒಂದು ವಾರದಿಂದ ಉಡುಪಿಯಲ್ಲಿ ಬೀಡು ಬಿಟ್ಟಿರುವ ಸಿಐಡಿ ತಂಡ ಪ್ಯಾರಾ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿದೆ. ಕಾಲೇಜಿನ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿರುವ ಸಿಐಡಿ ತಂಡ ಸಂತ್ರಸ್ತೆ ಮತ್ತು ಮೂವರು ಅರೋಪಿಯನ್ನು ಭೇಟಿಯಾಗಿ ವಿಚಾರಣೆ ನಡೆಸಿದೆ. ಘಟನೆಯ ಬಗ್ಗೆ ಕೂಲಂಕುಶ ತನಿಕೆ ನಡೆಸುವ ಹಿನ್ನಲೆಯಲ್ಲಿ ಘಟನೆಯ ಮರು ಸೃಷ್ಟಿಯನ್ನು ಮಾಡಿದ್ದ ಸಿಐಡಿ ತಂಡ ಪ್ಲಾಸ್ಟಿಕ್ ಬೊಂಬೆಗಳನ್ನ ಬಳಸಿ ಕಾಲೇಜಿನ ಶೌಚಾಲಯದಲ್ಲಿ ಮತ್ತೆ ಘಟನೆಯನ್ನು ಮರು ಸೃಷ್ಟಿ ಮಾಡಿತ್ತು.

ಸರ್ಚ್ ವಾರೆಂಟ್ ಪಡೆದು ಆಪಾದಿತರ ಮನೆಯನ್ನು ಸರ್ಚ್ ಮಾಡಿದ್ದ ಸಿಐಡಿ ತಂಡ ಪ್ರಕರಣಕ್ಕೆ ಸಂಬಂಧಪಟ್ಟ ಪ್ರತಿಯೊಂದು ಅಂಕಿ ಅಂಶಗಳನ್ನ ಮತ್ತು ಘಟನಾವಳಿಗಳನ್ನ ಕೂಲಂಕುಶವಾಗಿ ಪರಿಶೀಲನೆ ನಡೆಸಿದೆ. ಸಿಐಡಿ ಎಡಿಜಿಪಿ ಮನೀಶ್ ಕರ್ಬಿಕರ್ ಮತ್ತು ಎಸ್ ಪಿ ರಾಘವೇಂದ್ರ ಹೆಗಡೆ ಅವರ ನೇತೃತ್ವದಲ್ಲಿ ತನಿಖಾದಿಕಾರಿ ಡಿವೈಎಸ್ಪಿ ಅಂಜುಮಾಲ ಅವರು ಒಂದು ವಾರದಿಂದ ಉಡುಪಿಯಲ್ಲಿ ಇದ್ದು ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಸದ್ಯ ಬೆಂಗಳೂರಿಗೆ ತೆರಳಿದ್ದಾರೆ.

ಒಟ್ಟಾರೆಯಾಗಿ ಸಿಐಡಿ ಒಂದು ಹಂತದ ತನಿಖೆ ಮುಕ್ತಾಯಗೊಳಿಸಿದ್ದು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದ್ದ ಮೊಬೈಲ್ ನ ಎಫ್ಎಸ್ಎಲ್ ವರದಿಗಾಗಿ ಸಿಐಡಿ ತನಿಖಾ ತಂಡ ಕಾಯುತ್ತಿದೆ. ವಿದ್ಯಾರ್ಥಿನಿಯರಿಂದ ಪಡೆಯಲಾಗಿದ್ದ ಮೂರು ಮೊಬೈಲ್ಗಳ ಎಫ್ಎಸ್ಎಲ್ ವರದಿ ಬಂದ ತಕ್ಷಣ ಪ್ರಕರಣದ ಸತ್ಯತೆ ಹೊರಗೆ ಬೀಳುವ ಸಾಧ್ಯತೆ ದಟ್ಟವಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News