ಮಂಗಳೂರು, ಆ.13: ಘನ ತ್ಯಾಜ್ಯವನ್ನು ಸಂಪನ್ಮೂಲವಾಗಿಸುವ ಮೂಲಕ ಪರಿಸರ ಸಂರಕ್ಷಣೆ ಉದ್ದೇಶದೊಂದಿಗೆ ಆರಂಭವಾಗಿರುವ ಸಮಗ್ರ ಘನ ತ್ಯಾಜ್ಯ ನಿರ್ವಹಣ ಕೇಂದ್ರ (ಮೆಟೀರಿಯಲ್ ರಿಕವರಿ ಫೆಸಿಲಿಟಿ-ಎಂಆರ್‌ಎಫ್) ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದ್ದು, ಎರಡನೇ ಹಂತದಲ್ಲಿ ಇನ್ನಷ್ಟು ಸಿದ್ಧವಾಗುತ್ತಿವೆ.
ಮಂಗಳೂರು ತಾಲೂಕಿನ ತೆಂಕ ಎಡಪದವು ಮತ್ತು ಕಾರ್ಕಳದ ನಿಟ್ಟೆಯಲ್ಲಿ ಈಗಾಗಲೇ 10 ಟನ್ ಸಾಮರ್ಥ್ಯದ ಘಟಕಗಳಿದ್ದು, ಉಡುಪಿ ತಾಲೂಕಿನ ಎಂಬತ್ತು ಬಡಗಬೆಟ್ಟು ಗ್ರಾಮದಲ್ಲಿ 5 ಟನ್ ಸಾಮರ್ಥ್ಯದ ಮಿನಿ ಎಂಆರ್‌ಎಫ್ ಇತ್ತೀಚೆಗಷ್ಟೇ ಆರಂಭವಾಗಿದೆ.
2ನೇ ಹಂತದಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ, ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕುಗಳಿಗೆ ಸಂಬಂಧಿಸಿ ಕೆದಂಬಾಡಿಯಲ್ಲಿ, ಬಂಟ್ವಾಳ, ಉಳ್ಳಾಲ ತಾಲೂಕಿಗೆ ಸಂಬಂಧಿಸಿ ನರಿಕೊಂಬಿನಲ್ಲಿ ನಿರ್ಮಾಣವಾಗುತ್ತವೆ. ಎಲ್ಲ ಘಟಕಗಳು ದಿನಕ್ಕೆ 7 ಟನ್ ತಾಜ್ಯ ನಿರ್ವಹಣೆಯ ಸಾಮರ್ಥ್ಯ ಹೊಂದಿವೆ. 2-3 ತಿಂಗಳಲ್ಲಿ ಘಟಕ ಕಾರ್ಯಾರಂಭಿಸುವ ಸಾಧ್ಯತೆಯಿದೆ.
ಕುಂದಾಪುರ ತಾಲೂಕಿನ ತ್ರಾಸಿ ಮತ್ತು ಹೆಬ್ರಿ ತಾಲೂಕಿನ ಹೆಬ್ರಿಯಲ್ಲಿ ಮಿನಿ ತಲಾ 5 ಟನ್ ಸಾಮರ್ಥ್ಯದ ಎಂಆರ್‌ಎಫ್ ಘಟಕಗಳು ಸಿದ್ಧಗೊಂಡಿದ್ದು, ಟೆಂಡರ್ ಆದ ಬಳಿಕ ಕಾರ್ಯಾರಂಭಿಸಲಿವೆ
ಪಂಚಾಯತ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ
ಘಟಕ ಕಾರ್ಯಾರಂಭಿಸಿದ ಬಳಿಕ ಎಲ್ಲ ಗ್ರಾ.ಪಂ.ಗಳಿಗೆ ವಾರದಲ್ಲಿ ನಿರ್ದಿಷ್ಟ ಪ್ರಮಾಣದ ತ್ಯಾಜ್ಯ ನೀಡಲೇಬೇಕು ಎಂದು ನಿರ್ದೇಶನ ನೀಡಲು ಉದ್ದೇಶಿಸಲಾಗಿದೆ. ಇದರಿಂದ ಗ್ರಾಮ ಮಟ್ಟದಲ್ಲಿ ತಾಜ್ಯ ವಿಲೇವಾರಿ ಪ್ರಗತಿ ಕಾಣಬಹುದು. ಘನ ತ್ಯಾಜ್ಯದಲ್ಲಿ ಶೇ. 40ರಷ್ಟು ಮರುಬಳಕೆಗೆ ಸಾಧ್ಯವಾಗದ ವಸ್ತುಗಳೇ ಇರುತ್ತವೆ. ಮೌಲ್ಯ ಇರುವ ವಸ್ತುಗಳನ್ನು ಸ್ಥಳೀಯವಾಗಿರುವ ಗುಜರಿಯವರು ಖರೀದಿಸುತ್ತಾರೆ. ಮೌಲ್ಯವಿಲ್ಲದ, ಬಟ್ಟೆ, ಚಪ್ಪಲಿ ಮೊದಲಾದವುಗಳು ಹಾಗೇ ಉಳಿಯುತ್ತವೆ. ಆದರೆ ಎಂಆರ್‌ಎಫ್ ಘಟಕದ ಮೂಲಕ ಸಂಗ್ರಹ ವಾಗುವ ಎಲ್ಲ ತ್ಯಾಜ್ಯಗಳು ವಿಲೇವಾರಿಯಾಗುತ್ತವೆ. ಯಾವು ದಕ್ಕೂ ಉಪಯೋಗಕ್ಕೆ ಬಾರದ ತ್ಯಾಜ್ಯ ಗಳನ್ನು ಸಿಮೆಂಟ್ ಫ್ಯಾಕ್ಟರಿಯವರು ಖರೀದಿಸಿ ಕೊಂಡೊಯ್ಯುತ್ತಾರೆ.
ಎಲ್ಲ ಗ್ರಾ.ಪಂ.ಗಳಲ್ಲಿ ಘಟಕ
ಜಿಲ್ಲೆಯಲ್ಲಿ ಈಗಾಗಲೇ ಎಲ್ಲ ಗ್ರಾ.ಪಂ.ಗಳೂ ಘನ ತ್ಯಾಜ್ಯ ಘಟಕ ಗಳನ್ನು ಹೊಂದಿವೆ. 141 ಗ್ರಾ.ಪಂ.ಗಳಲ್ಲಿ ಹೊಸ ಪೂರ್ಣ ಪ್ರಮಾಣದ ಘಟಕಗಳಿವೆ. 18 ಬಹುಗ್ರಾಮ ಮಾದರಿಯಲ್ಲಿ ಘಟಕಗಳಿವೆ. 48 ಗ್ರಾ.ಪಂ.ಗಳಲ್ಲಿ ಹಳೇ ಕಟ್ಟಡಗಳಿದ್ದು, 16 ತಾತ್ಕಾಲಿಕ ಕಟ್ಟಡದಲ್ಲಿ ಘಟಕ ಗಳು ಕಾರ್ಯಾಚರಿಸುತ್ತಿವೆ. ಗ್ರಾಮ ಮಟ್ಟದಲ್ಲಿ ಹಸಿ ಕಸ ಶೇ. 90ರಷ್ಟು ಮನೆಯಲ್ಲೇ ವಿಲೇವಾರಿಯಾಗುತ್ತದೆ. ಒಣ ಕಸ ಮಾತ್ರ ಹೆಚ್ಚು ಸಂಗ್ರಹವಾಗುತ್ತದೆ. ಎಂಆರ್‌ಎಫ್ ಕೇಂದ್ರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿದರೆ, ಪ್ರತೀ ಘನತ್ಯಾಜ್ಯ ಘಟಕದಿಂದ ವಾರಕ್ಕೊಮ್ಮೆ ಕಸ ತೆಗೆದುಕೊಂಡು ಹೋಗುತ್ತಾರೆ. ಆದರೆ ದೊಡ್ಡ ಪ್ರಮಾಣದಲ್ಲಿ ಇಂತಹ ಘಟಕಗಳ ಅಗತ್ಯವೂ ಇರುವುದಿಲ್ಲ ಎನ್ನುವುದು ಅಧಿಕಾರಿಗಳ ಮಾತು.
ತೆಂಕ ಎಡಪದವು: 180 ಟನ್ ವಿಲೇವಾರಿ ತೆಂಕ ಎಡಪದವಿನಲ್ಲಿರುವ ಘಟಕದಲ್ಲಿ ಪ್ರಸ್ತುತ ದಿನಕ್ಕೆ 5 ಟನ್ ಘನ ತ್ಯಾಜ್ಯವನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ. ಮಂಗಳೂರು, ಮೂಡುಬಿದಿರೆ, ಮೂಲ್ಕಿ, ಬಂಟ್ವಾಳ ತಾಲೂಕಿನ ಕೆಲವು ಗ್ರಾ.ಪಂ.ಗಳು ಸೇರಿದಂತೆ ಒಟ್ಟು 51 ಗ್ರಾ.ಪಂ.ಗಳ ತ್ಯಾಜ್ಯವನ್ನು ಇಲ್ಲಿ ಸಂಸ್ಕರಿಸಲಾಗುತ್ತದೆಯಾದರೂ ಇನ್ನೂ ಕೆಲವು ಗ್ರಾ.ಪಂ.ಗಳಲ್ಲಿ ಮೂಲದಲ್ಲಿ ತ್ಯಾಜ್ಯ ವಿಂಗಡನೆಯಾಗದ ಹಿನ್ನೆಲೆಯಲ್ಲಿ ಘಟಕಕ್ಕೆ ಬರುತ್ತಿಲ್ಲ. ಜನವರಿಯಿಂದ ಈವರೆಗೆ ಸುಮಾರು 180 ಟನ್ ಒಣ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ.
ಜಿಲ್ಲೆಯ 3 ಕಡೆಗಳಲ್ಲಿ ಹೊಸ ಎಂಆರ್‌ಎಫ್ ಘಟಕಗಳು ನಿರ್ಮಾಣವಾಗುತ್ತಿದ್ದು, ಶೀಘ್ರ ಕಾರ್ಯಾರಂಭಿಸುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿದೆ. ಎಲ್ಲವೂ ಶೂನ್ಯ ವೆಚ್ಚದ ಘಟಕಗಳಾಗಿದ್ದು, ಇತರ ಜಿಲ್ಲೆಗಳಿಗೂ ಮಾದರಿಯಾಗಿವೆ. ಇದರಿಂದ ಜಿಲ್ಲೆಯಲ್ಲಿ ತ್ಯಾಜ್ಯ ನಿರ್ವಹಣೆ ಪ್ರಕ್ರಿಯೆ ಇನ್ನಷ್ಟು ಸುಲಭವಾಗಿ ನಡೆಯಲಿದೆ